ನವದೆಹಲಿ (ಸೆಪ್ಟೆಂಬರ್ 4): ಭಾರತ ಹಾಗೂ ಚೀನಾ ನಡುವೆ ಮೂಡಿರುವ ಬಿಕ್ಕಟ್ಟನ್ನು ಮಾತುಕತೆಯಿಂದ ಮಾತ್ರ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ವಿದೇಶಾಂಗ ಸಚಿವ ಎಸ್. ಜಯಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಬರೆದ ದಿ ಇಂಡಿಯಾ ವೇ: ಸ್ಟ್ರೆಟಜಿಸ್ ಫಾರ್ ಆನ್ ಅನ್ಸರ್ಟೇನ್ ವರ್ಡ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಚೀನಾ ಹಾಗೂ ಭಾರತ ತಮ್ಮದೇ ಆದ ಇತಿಹಾಸವನ್ನು ಹೊಂದಿವೆ. ನಾವು ಕೆಲವು ಭಾಗದಲ್ಲಿ ಉತ್ತಮವಾಗಿದ್ದೇವೆ. ಇನ್ನೂ ಕೆಲವು ಭಾಗದಲ್ಲಿ ಕಷ್ಟವನ್ನು ಹೊಂದಿದ್ದೇವೆ. ಗಡಿ ಭಾಗದಲ್ಲಿ ಉಂಟಾದ ಸಮಸ್ಯೆ ಎರಡೂ ರಾಷ್ಟ್ರಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ, ಎಂದರು.
ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮಾತುಕತೆ ಒಂದೇ ಪರಿಹಾರ ಎಂದಿರುವ ಅವರು, ಗಡಿಯಲ್ಲಿ ಸಾಕಷ್ಟು ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಇದನ್ನು ಪರಿಹಾರಲು ಇರುವ ಏಕೈಕ ಮಾರ್ಗ ಎಂದರೆ ರಾಜತಾಂತ್ರಿಕ ಮಾತುಕತೆ. ಈ ಮಾತುಕತೆ ಮೂಲಕ ಎರಡೂ ದೇಶಗಳು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 10ರಂದು ಮಾಸ್ಕೋದಲ್ಲಿ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ (ಎಸ್ಸಿಒ) ಸಭೆ ಇದೆ. ಈ ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡುವ ಆಲೋಚನೆ ಇದೆಯೇ ಎನ್ನುವ ಪ್ರಶ್ನೆಗೆ ಜಯಶಂಕರ್ ಉತ್ತರಿಸಿದ್ದಾರೆ. ಎರಡೂ ರಾಷ್ಟ್ರಗಳ ನಾಯಕರು ಅನೇಕ ವರ್ಷಗಳಿಂದ ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಾ ಬಂದಿದ್ದೇವೆ. ಹೀಗಾಗಿ,ಮಾತುಕತೆ ನಡೆದೇ ನಡೆಯುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ