ನವ ದೆಹಲಿ (ಸೆಪ್ಟೆಂಬರ್ 02); ಮಾಸ್ಕೋದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಓ) ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಇಂಡೋ-ಚೀನಾ ಗಡಿ ಬಿಕ್ಕಟ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10 ರಂದು ನಡೆಯಲಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಹ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಭೆಯಲ್ಲಿ ಸಚಿವ ಜೈಶಂಕರ್ ಪಾಲ್ಗೊಳ್ಳುವ ಕುರಿತು ವಿದೇಶಾಂಗ ಸಚಿವಾಲಯ ಈವರೆಗೆ ಪ್ರಕಟಣೆಯನ್ನು ಹೊರಡಿಸಿಲ್ಲ. ಆದರೆ, ಈ ಕುರಿತು ಕಳೆದ ವಾರ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, “ಮುಂದಿನ ತಿಂಗಳು ಮಾಸ್ಕೋದಲ್ಲಿ ನಡೆಯಲಿರುವ ಎಸ್ಸಿಒ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಹ್ವಾನ ಬಂದಿದೆ. ಆದರೆ, ಈ ಸಭೆಯಲ್ಲಿ ಭಾಗವಹಿಸುವ ಕುರಿತು ಸಚಿವರು ನಿರ್ಧರಿಸಿದ ಕೂಡಲೇ ನಾವು ನಿಮಗೆ ತಿಳಿಸುತ್ತೇವೆ” ಎಂದು ಹೇಳಿದ್ದರು.
ಭಾರತ ಮತ್ತು ಚೀನಾ ನಡುವಿನ ಪ್ರಸ್ತುತ ಎಲ್ಎಸಿ ಬಿಕ್ಕಟ್ಟನ್ನು ಎರಡೂ ದೇಶದ ನಡುವೆ ಮಾತುಕತೆ ಮೂಲಕ ಪರಿಹರಿಸಬಹುದು ಎಂದು ಸಚಿವ ಜೈಶಂಕರ್ ನಂಬಿದ್ದಾರೆ. ಕಳೆದ ಕೆಲವು ಬಾರಿ ನವದೆಹಲಿ ಮತ್ತು ಬೀಜಿಂಗ್ ನಡುವಿನ ರಾಜತಾಂತ್ರಿಕವಾಗಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವಲ್ಲಿ ಈ ಮಾತುಕತೆ ಯಶಸ್ವಿಯಾಗಿತ್ತು. 2013 ರಲ್ಲಿ ನಡೆದ ದೌಲತ್ ಬೇಗ್ ಓಲ್ಡಿ ಘಟನೆಯಿಂದ ಹಿಡಿದು 2017 ರ ಡೋಕ್ಲಾಮ್ ವರೆಗೆ ಅನೇಕ ಸಮಸ್ಯೆಗಳನ್ನು ಎರಡೂ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಂಡಿವೆ.
ಇದನ್ನೂ ಓದಿ : ನಿರ್ಣಾಯಕ ಹಂತದತ್ತ ಇಂಡೋ-ಚೀನಾ ಗಡಿ ವಿವಾದ?; ಪಾಂಗೋಂಗ್ ಟ್ಸೋ ಪ್ರದೇಶದಲ್ಲಿ ಯುದ್ಧದ ವಾತಾವರಣ
ಆದರೆ, ಕಳೆದ ಮೂರು ತಿಂಗಳಿನಿಂದ ಭಾರತ-ಚೀನಾ ಗಡಿ ವಿವಾದ ತಾರಕಕ್ಕೇರಿದೆ. ಎರಡೂ ರಾಷ್ಟ್ರಗಳ ನಡುವಿನ ಹೊಸ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಬ್ರಿಗೇಡ್ ಕಮಾಂಡರ್-ಮಟ್ಟದ ಸಭೆ ನಡೆಯುತ್ತಿರುವಾಗಲೇ “ಆಗಸ್ಟ್ 31 ರಂದು ಚೀನಾದ ಸೇನೆ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಎತ್ತರಪ್ರದೇಶದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಬೀಡು ಬಿಟ್ಟಿದೆ. ಅಲ್ಲದೆ, ಭಾರೀ ಪ್ರಮಾಣದ ಶಸ್ತ್ರಾಗಳೊಂದಿಗೆ ಭಾರತದ ಸೇನೆಯನ್ನು ಪ್ರಚೋದಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ