ಭಯೋತ್ಪಾದನೆ ನಿಗ್ರಹ ಮಾಡಲು ಮೋದಿ ಸಮರ್ಥರಿದ್ಧಾರೆ: ಡೊನಾಲ್ಡ್ ಟ್ರಂಪ್

ಕಾಶ್ಮೀರ ಸಮಸ್ಯೆಯು ಎರಡೂ ದೇಶಗಳನ್ನು ಕಾಡುತ್ತಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಂಧಾನ ನಡೆಸಲು ಅಮೆರಿಕ ಸದಾ ಸಿದ್ಧವಿದೆ ಎಂದು ಟ್ರಂಪ್ ತಮ್ಮ ಉದ್ದೇಶವನ್ನು ಹೊರಹಾಕಿದ್ಧಾರೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

  • News18
  • Last Updated :
  • Share this:
ನವದೆಹಲಿ(ಫೆ. 25): ಡೊನಾಲ್ಡ್ ಟ್ರಂಪ್ ತಮ್ಮ ಎರಡು ದಿನದ ಪ್ರವಾಸದ ಕೊನೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ. ಭಾರತವನ್ನು ಅದ್ಭುತ ದೇಶ, ನರೇಂದ್ರ ಮೋದಿಯನ್ನು ಅದ್ಭುತ ನಾಯಕ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಭಾರತ ಬೃಹತ್ ಮಾರುಕಟ್ಟೆ ಹೊಂದಿದೆ. ಇಲ್ಲಿನ ಜನರು ಅಮೆರಿಕನ್ನರನ್ನು ಇಷ್ಟಪಡುತ್ತಾರೆ ಎಂದು ಹೇಳಿದ ಟ್ರಂಪ್, ಭಾರತದ ಜೊತೆ ವಿವಿಧ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ಧಾರೆ.

ಪತ್ರಿಕಾಗೋಷ್ಠಿಯ ವೇಳೆ ಸಂವಾದದಲ್ಲಿ ಪಾಲ್ಗೊಂಡ ಟ್ರಂಪ್, ಸಿಎಎ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಭಾರತದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ಬಗ್ಗೆ ಮೋದಿ ಜೊತೆ ತಾನು ಚರ್ಚೆ ಮಾಡಿದ್ಧಾಗಿ ತಿಳಿಸಿದರು. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಳಿಸಲು ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಟ್ರಂಪ್, ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

“ಸಿಎಎ ವಿಚಾರದಲ್ಲಿ ನನ್ನ ಪ್ರಶ್ನೆಗೆ ಮೋದಿ ಸಮರ್ಪಕ ಉತ್ತರ ನೀಡಿದರು. ಭಾರತದಲ್ಲಿರುವ 20 ಕೋಟಿ ಮುಸ್ಲಿಮರ ಜೊತೆ ಸರ್ಕಾರ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು. ಅವರ ಉತ್ತರ ನನಗೆ ಸಮಾಧಾನ ನೀಡಿದೆ” ಎಂದು ಟ್ರಂಪ್ ನುಡಿದರು.

ಇದನ್ನೂ ಓದಿ: ಮಾಜಿ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ನಿಧನ

ಭಯೋತ್ಪಾದನೆ ವಿಚಾರದ ಬಗ್ಗೆ ಮಾತನಾಡಿದ ಟ್ರಂಪ್, ಈ ಸಮಸ್ಯೆ ನೀಗಿಸಲು ತಾನು ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಜಾಲವನ್ನು ಹತ್ತಿಕ್ಕಿದ್ದೇನೆ. ತಾನು ಅಧಿಕಾರಕ್ಕೆ ಬಂದಾಗ ಐಸಿಸ್ ಎಲ್ಲೆಡೆ ಇತ್ತು. ನಾನು ಬಹುತೇಕ ನಿರ್ನಾಮ ಮಾಡಿದ್ದೇನೆ. ಈಗ ರಷ್ಯಾ, ಸಿರಿಯಾ ಮತ್ತು ಇರಾನ್ ದೇಶಗಳೂ ಕೂಡ ಇಸ್ಲಾಮೀ ಭಯೋತ್ಪಾದನೆಯನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು, ಭಾರತ ಮತ್ತು ಪಾಕಿಸ್ತಾನ ಬಯಸಿದರೆ ಕಾಶ್ಮೀರ ಸಮಸ್ಯೆ ಬಗ್ಗೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಹಾಗೆಯೇ, ಭಾರತದಲ್ಲಿ ತಲೆ ಎತ್ತಿರುವ ಭಯೋತ್ಪಾದನೆ ಸಮಸ್ಯೆ ಬಗ್ಗೆಯೂ ಮಾತನಾಡಿರುವ ಟ್ರಂಪ್, ಈ ಸಮಸ್ಯೆ ನಿಭಾಯಿಸಲು ಮೋದಿ ಸಮರ್ಥರಿದ್ಧಾರೆ ಎಂದರು.

ಮೋದಿ ತುಂಬಾ ಧಾರ್ಮಿಕ ವ್ಯಕ್ತಿ. ಬಹಳ ತಾಳ್ಮೆಯವರಾಗಿದ್ದಾರೆ. ಹಾಗೆಯೇ ಟಫ್ ಕೂಡ ಇದ್ಧಾರೆ. ಭಯೋತ್ಪಾದನೆ ನಿಗ್ರಹ ಹೇಗೆ ಮಾಡಬೇಕೆಂದು ಅವರಿಗೆ ಗೊತ್ತಿದೆ. ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಇದನ್ನೂ ಓದಿ: ತಾರಕಕ್ಕೇರಿದ ದೆಹಲಿ ಹಿಂಸಾಚಾರ: ಪತ್ರಕರ್ತರ ಮೇಲೆ ಹಲ್ಲೆ, 9ಕ್ಕೇರಿದ ಸಾವಿನ ಸಂಖ್ಯೆ

ಇದೇ ವೇಳೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಮ್ರಾನ್ ಖಾನ್ ಮತ್ತು ನರೇಂದ್ರ ಮೋದಿ ಇಬ್ಬರೊಂದಿಗೂ ತನಗೆ ಉತ್ತಮ ಬಾಂಧವ್ಯ ಇದೆ. ಪಾಕಿಸ್ತಾನದಿಂದ ಸೃಷ್ಟಿಯಾಗುತ್ತಿರುವ ಭಯೋತ್ಪಾದನೆಯನ್ನು ಇಮ್ರಾನ್ ಖಾನ್ ಹತ್ತಿಕ್ಕುತ್ತಾರೆಂಬ ವಿಶ್ವಾಸ ನನಗಿದೆ. ಕಾಶ್ಮೀರ ಸಮಸ್ಯೆಯು ಎರಡೂ ದೇಶಗಳನ್ನು ಕಾಡುತ್ತಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಂಧಾನ ನಡೆಸಲು ಅಮೆರಿಕ ಸದಾ ಸಿದ್ಧವಿದೆ ಎಂದು ಟ್ರಂಪ್ ತಮ್ಮ ಉದ್ದೇಶವನ್ನು ಹೊರಹಾಕಿದರು.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆ ಅಮೆರಿಕ ಒಪ್ಪಂದ ಮಾಡಿಕೊಂಡಿರುವ ಕ್ರಮವನ್ನ ಟ್ರಂಪ್ ಸಮರ್ಥಿಸಿಕೊಂಡರು. ವಿಶ್ವದ ಅತ್ಯಂತ ಕ್ಲಿಷ್ಟ ಪ್ರದೇಶವೆನಿಸಿರುವ ಆಫ್ಘಾನಿಸ್ತಾನದಲ್ಲಿ ನಾವು 19 ವರ್ಷ ಇದ್ದೆವು. ಅಲ್ಲಿ ಶಾಂತಿ ಸ್ಥಾಪಿಸಲು ಸಾಕಷ್ಟು ಶ್ರಮಿಸಿದ್ಧೇವೆ. ಆ ಭಾಗವಾಗಿ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ಧೇವೆ. ಪ್ರತಿಯೊಬ್ಬರೂ ಖುಷಿಯಾಗಿದ್ದಾರೆ. ಭಾರತಕ್ಕೂ ಸಮಾಧಾನ ಆಗಬಹುದು. ಮೋದಿ ಜೊತೆ ಈ ವಿಚಾರ ಮಾತನಾಡಿದೆ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: