ನವದೆಹಲಿ(ಮಾ.13): ಕೆಲವೊಮ್ಮೆ ಎಲ್ಲಿಗೂ ಹೋಗಬೇಕಿದ್ದ ವಿಮಾನ(Flight) ಅನೇಕ ರೀತಿಯ ಕಾರಣಗಳಿಂದಾಗಿ ಇನ್ನೆಲ್ಲೋ ಹೋಗಿ ಲ್ಯಾಂಡ್ (Land) ಆಗಿರುವ ಘಟನೆಗಳು ನಡೆದಿರುತ್ತವೆ. ಈ ರೀತಿಯ ಘಟನೆಗಳು(Incidents) ನಡೆದಾಗ ಅದಕ್ಕೆ ವಿಮಾನದಲ್ಲಿ ಹಠಾತ್ತನೆ ಕಾಣಿಸಿಕೊಳ್ಳುವ ತಾಂತ್ರಿಕ ದೋಷದಿಂದ ಹಿಡಿದು ವಿಮಾನದಲ್ಲಿ ಪ್ರಯಾಣಿಸುತ್ತಿರುವಂತಹ ಪ್ರಯಾಣಿಕರ ಆರೋಗ್ಯದಲ್ಲಿ (Passengers Health) ಆಗುವ ಏರುಪೇರಿನವರೆಗೆ ಅನೇಕ ರೀತಿಯ ಕಾರಣಗಳಿರುತ್ತವೆ ಅಂತ ಹೇಳಬಹುದು. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.
ಕರಾಚಿಯಲ್ಲಿ ಲ್ಯಾಂಡ್ ಆದ ದೆಹಲಿ-ದೋಹಾ ಇಂಡಿಗೋ ಫ್ಲೈಟ್
ದೆಹಲಿಯಿಂದ ಹೊರಟ ಇಂಡಿಗೋ ವಿಮಾನವೊಂದು ಪ್ರಯಾಣಿಕರೊಬ್ಬರ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ದೋಹಾಗೆ ತೆರಳುವುದನ್ನು ಬಿಟ್ಟು ಪಾಕಿಸ್ತಾನದ ಕರಾಚಿಗೆ ಹೋಗಿ ಲ್ಯಾಂಡ್ ಆಗಿದೆ ನೋಡಿ.
ಆದರೆ ವಿಮಾನದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಲ್ಯಾಂಡಿಂಗ್ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದೆ ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Explained: ವಿದೇಶದಲ್ಲಿ ಮೋದಿ ವಿರುದ್ಧ ರಾಹುಲ್ ಕಿಡಿ, ದೇಶದ್ರೋಹದ ಆರೋಪ ಮಾಡಿದ ಬಿಜೆಪಿ, ತಜ್ಞರು ಹೇಳೋದೇನು?
ವಿಮಾನವನ್ನು ಕರಾಚಿಯಿಂದ ಟೇಕ್ ಆಫ್ ಮಾಡಲು ಅನುಮತಿಸಲಾಯಿತು ಮತ್ತು ಸಾವನ್ನಪ್ಪಿದ ಪ್ರಯಾಣಿಕನ ಶವದೊಂದಿಗೆ ದೆಹಲಿಗೆ ಮರಳಲಾಯಿತು.
ಸುಮಾರು 60 ವರ್ಷ ವಯಸ್ಸಿನ ನೈಜೀರಿಯಾದ ವ್ಯಕ್ತಿ ಅಬ್ದುಲ್ಲಾ ಅವರನ್ನು ಉಳಿಸಲು ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಸುಮಾರು ಐದು ಗಂಟೆಗಳ ಕಾಲ ಕರಾಚಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ರಂತೆ ಫ್ಲೈಟ್
ಕರಾಚಿ ವಿಮಾನ ನಿಲ್ದಾಣದಲ್ಲಿ ಸುಮಾರು ಐದು ಗಂಟೆಗಳ ಕಾಲ ನಿಲ್ಲಿಸಲಾಗಿದ್ದ ವಿಮಾನ ಎ 320-271 ಎನ್, ಕರಾಚಿಯ ಅಧಿಕಾರಿಗಳು ಪ್ರಯಾಣಿಕನ ಮರಣ ಪ್ರಮಾಣಪತ್ರವನ್ನು ನೀಡಿದ ನಂತರವಷ್ಟೆ ದೆಹಲಿಗೆ ಮರಳಿತು ಮತ್ತು ಎಲ್ಲಾ ಔಪಚಾರಿಕತೆಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾಚಿಯ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಪ್ರಯಾಣಿಕರು ವಿಮಾನದಲ್ಲಿ ಅನಾರೋಗ್ಯಕ್ಕೆ ಒಳಗಾದರು ಮತ್ತು ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಕ್ಯಾಪ್ಟನ್ ವಿನಂತಿಸಿದರು ಎಂದು ಹೇಳಿದರು.
"ಈ ಸುದ್ದಿಯಿಂದ ನಾವು ತುಂಬಾನೇ ದುಃಖಿತರಾಗಿದ್ದೇವೆ ಮತ್ತು ನಮ್ಮ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗಿವೆ. ಸಂಬಂಧಿತ ಅಧಿಕಾರಿಗಳ ಸಮನ್ವಯದೊಂದಿಗೆ ವಿಮಾನದ ಇತರ ಪ್ರಯಾಣಿಕರನ್ನು ವರ್ಗಾಯಿಸಲು ನಾವು ಪ್ರಸ್ತುತ ವ್ಯವಸ್ಥೆ ಮಾಡುತ್ತಿದ್ದೇವೆ" ಎಂದು ಇಂಡಿಗೋ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕನ ಸಾವಿನ ನಂತರ ಹೇಳಿಕೆ ಬಿಡುಗಡೆ ಮಾಡಿದ ಇಂಡಿಗೋ
"ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನವೊಂದು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಕರಾಚಿ ಕಡೆಗೆ ತಿರುಗಿಸಲಾಯಿತು. ದುರದೃಷ್ಟವಶಾತ್, ವಿಮಾನ ಲ್ಯಾಂಡ್ ಆದಾಗ, ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಅನಾರೋಗ್ಯಕ್ಕೆ ಈಡಾದ ಪ್ರಯಾಣಿಕನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿತು. ವಿಮಾನದಲ್ಲಿದ್ದ ಇತರ ಪ್ರಯಾಣಿಕರನ್ನು ವರ್ಗಾಯಿಸಲು ವ್ಯವಸ್ಥೆ ಮಾಡುತ್ತಿದ್ದೇವೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
Doha bound IndiGo flight diverted to Pakistan's Karachi due to a medical emergency onboard, says an airline official to ANI. pic.twitter.com/KuVJoIJmwm
— ANI (@ANI) March 13, 2023
ಇಂತಹ ಘಟನೆ ನಡೆದಿದ್ದು ಇದೇನು ಮೊದಲೇನಲ್ಲ ಬಿಡಿ.. ಇಂತಹದೇ ಘಟನೆ ಇದೇ ವರ್ಷ ಎಂದರೆ 2023 ರ ಮೊದಲ ಮೂರು ತಿಂಗಳಲ್ಲಿ ಹೀಗೆ ವೈದ್ಯಕೀಯ ತುರ್ತುಸ್ಥಿತಿಯ ಕಾರಣದಿಂದಾಗಿ ವಿಮಾನ ಬೇರೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದರಲ್ಲಿ ಇದು ಇತ್ತೀಚಿನದು ಅಂತ ಹೇಳಬಹುದು.
ಫೆಬ್ರವರಿ 20 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನವನ್ನು ಹೀಗೆ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಲಂಡನ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಜನವರಿ ತಿಂಗಳ ಮಧ್ಯದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು, ಅದರಲ್ಲಿ ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ಬಿಕ್ಕಟ್ಟಿನ ನಂತರ ಇಂದೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ