ಚೀನಾದಲ್ಲಿ ಮತ್ತೆ ಕೋವಿಡ್-19 (Covid-19) ಮರಣ ಮೃದಂಗ ಬಾರಿಸುತ್ತಿದ್ದು, ಪ್ರತಿದಿನ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದಂತೆ ಇಡೀ ವಿಶ್ವವೇ ಮತ್ತೊಮ್ಮೆ ಚಿಂತೆಗೀಡಾಗಿದೆ. ಆರೋಗ್ಯ ಕಾಳಜಿ (Health Care) ಬಗ್ಗೆ ಮತ್ತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮತ್ತೊಂದು ಕಡೆ ಚೀನಾದಲ್ಲಿ ಕೋವಿಡ್ ಉಲ್ಬಣವಾಗುತ್ತಿದ್ದಂತೆ, ಭಾರತೀಯರು ಬೂಸ್ಟರ್ ಕೋವಿಡ್ (Covid Booster Dose) ಲಸಿಕೆಯನ್ನು ತೆಗೆದುಕೊಳ್ಳಬೇಕೇ ಎಂಬ ಪ್ರಶ್ನೆ ಸಹ ಉದ್ಭವವಾಗುತ್ತಿದೆ.
ಚೀನಾದ ಕೋವಿಡ್ ಸದ್ಯ, ಭಾರತ ಸೇರಿ ಜಗತ್ತಿಗೆ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಭಾರತದಲ್ಲಿ ವೈದ್ಯರು ಬೂಸ್ಟರ್ ಶಾಟ್ ತೆಗೆದುಕೊಳ್ಳದಿರುವವರು ಅದನ್ನು ತೆಗದುಕೊಳ್ಳುವಂತೆ ಸೂಚಿಸುತ್ತಿದ್ದಾರೆ.
ಕೇಂದ್ರ ಆರೋಗ್ಯ ಸಚಿವರ ಒತ್ತಾಯ
ಜೊತೆಗೆ ಭಾರತದ ವಿಮಾನ ನಿಲ್ದಾಣಗಳಲ್ಲಿ ಬೂಸ್ಟರ್ ಶಾಟ್ಗಳು, ವ್ಯಾಕ್ಸಿನೇಷನ್, ಮಾಸ್ಕ್ ಮತ್ತು ಸ್ಕ್ರೀನಿಂಗ್ ಮೇಲೆ ಕೇಂದ್ರೀಕರಿಸಿದೆ. ಕೋವಿಡ್ -19 ವಿರುದ್ಧ ಲಸಿಕೆಯನ್ನು ಪಡೆಯುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಹ ಜನರನ್ನು ಒತ್ತಾಯಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಬೂಸ್ಟರ್ ಡೋಸ್ ಅನ್ನು ನಿರ್ಲಕ್ಷ್ಯಿಸದೇ ಅರ್ಹರು ಇದನ್ನು ಮುನ್ನೆಚ್ಚರಿಕೆಯ ಡೋಸ್ ಆಗಿ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.
27-28% ರಷ್ಟು ಜನ ಮಾತ್ರ ಬೂಸ್ಟರ್ ಡೋಸ್
ಬುಧವಾರ, ನೀತಿ ಆಯೋಗದ ವಿ.ಕೆ ಪೌಲ್ ಅವರು ಇಲ್ಲಿಯವರೆಗೆ ಭಾರತದ ಜನಸಂಖ್ಯೆಯ ಶೇಕಡಾ 27-28 ರಷ್ಟು ಮಾತ್ರ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ, ಜಾಗತಿಕವಾಗಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಡೋಸ್ ತೆಗೆದುಕೊಳ್ಳುವುದು ಅಗತ್ಯ
ದೆಹಲಿಯ ಸಾಕೇತ್ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಡಾ. ರೋಮೆಲ್ ಟಿಕೂ ಮಾತನಾಡಿ, ಬೂಸ್ಟರ್ ಶಾಟ್ಗಳನ್ನು ತೆಗೆದುಕೊಳ್ಳುವುದು ಈ ಸಮಯದಲ್ಲಿ ತುಂಬಾನೇ ಮುಖ್ಯ ಆದರೆ ಯಾರು ಇದಕ್ಕೆ ಅರ್ಹರು ಎಂದು ಪರಿಗಣಿಸಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೋವಿಡ್ ಇದೀಗ ಭಾರತದಲ್ಲಿ ಅಷ್ಟೇನೂ ಪ್ರಮಾಣದಲ್ಲಿ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಸಂಭವಿಸಬಹುದು. ಆದ್ದರಿಂದ ಬೂಸ್ಟರ್ಗೆ ಅರ್ಹರಾಗಿರುವವರು ಸುರಕ್ಷತೆಗಾಗಿ ಬೂಸ್ಟರ್ಗಳನ್ನು ತೆಗೆದುಕೊಳ್ಳುವುದು ಉಚಿತ ಎಂದು ಹೇಳಿದರು.
ಇನ್ನೂ 3 ತಿಂಗಳು ಕಾಯಬಹುದಂತೆ
ಕಳೆದ ಒಂದು ತಿಂಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾದವರು ಬೂಸ್ಟರ್ ಶಾಟ್ ತೆಗೆದುಕೊಳ್ಳುವ ಅಗತ್ಯತೆ ಇಲ್ಲ. ಅವರಿಗೆ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಇರುತ್ತದೆ. ಅವರು ಇನ್ನೂ ಮೂರು ತಿಂಗಳು ಕಾಯಬಹುದು. ನಂತರ ತೆಗೆದುಕೊಳ್ಳಬಹುದು ಎಂದು ಡಾ. ಟಿಕೂ ಹೇಳಿದರು.
ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿರುವುದರಿಂದ ಕೋವಿಡ್ ರೂಪಾಂತರದಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಕೋವಿಡ್ ವಿರುದ್ಧ ಬೂಸ್ಟರ್ ದೊಡ್ಡ ಅಸ್ತ್ರ
ಫೋರ್ಟಿಸ್ ಆಸ್ಪತ್ರೆ ಶಾಲಿಮಾರ್ ಬಾಗ್ನ ಶ್ವಾಸಕೋಶಶಾಸ್ತ್ರದ ನಿರ್ದೇಶಕ ಮತ್ತು ಎಚ್ಒಡಿ ಡಾ.ವಿಕಾಸ್ ಮೌರ್ಯ ಈ ಬಗ್ಗೆ ಮಾತನಾಡಿ, "ಬೂಸ್ಟರ್ ಲಸಿಕೆ ಕೊರೋನಾ ವಿರುದ್ಧ ಹೋರಾಡಲು ಆನೆಬಲ ನೀಡುತ್ತದೆ. ಬೂಸ್ಟರ್ ಶಾಟ್ಗಳನ್ನು ತೆಗೆದುಕೊಳ್ಳದವರು ಮುಂದೆ ಬಂದು ಅದನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ: Reservation: ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಮೀಸಲಾತಿ ಸಮಸ್ಯೆ?
ಬೂಸ್ಟರ್ ಶಾಟ್ಗಳನ್ನು ತೆಗೆದುಕೊಳ್ಳಲು ಜನರನ್ನು ಉತ್ತೇಜಿಸಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು ವೃದ್ಧರನ್ನು ಉದ್ದೇಶಿಸಿ ಹೊಸ ತಂತ್ರವನ್ನು ರಚಿಸಬೇಕಾಗಿದೆ ಎಂದು ಅವರು ಹೇಳಿದರು.
ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಜನ
ಕೋವಿಡ್ ಲಸಿಕೆ ಮೇಲಿರುವ ಕೆಲವು ಅಪವಾದಗಳನ್ನು ನಿರ್ಲಕ್ಷ್ಯಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ವಕಾಲತ್ತು ಲೋಕಲ್ ಸರ್ಕಲ್ಸ್ ನಡೆಸಿದ ಅಧ್ಯಯನವು 64 ಪ್ರತಿಶತದಷ್ಟು ಜನರು ಕೋವಿಡ್ -19 ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ: BF7: ಜಗತ್ತಿಗೆ ಆವರಿಸುತ್ತಿದೆ ಕೊರೊನಾ ರೂಪಾಂತರಿ: ಬಿಎಫ್ 7 ಬಗ್ಗೆ ನಿಮಗೆಷ್ಟು ಗೊತ್ತು?
ವೈದ್ಯರು ಈ ಮೇಲೆ ಹೇಳಿದಂತೆ ಚೀನಾದಲ್ಲಿ ಉಲ್ಬಣವಾಗಿರುವ ಕೋವಿಡ್ ದೇಶಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಬೂಸ್ಟರ್ ತೆಗೆದುಕೊಳ್ಳದವರು ಇದನ್ನು ತೆಗೆದುಕೊಳ್ಳಲು ಮುಂದಾಗಬೇಕು. ಬೂಸ್ಟರ್ ಶಾಟ್ಗಳ ಬಗ್ಗೆ ಮಾಹಿತಿಯನ್ನು ಭಾರತ ಸರ್ಕಾರದ ಕೋ-ವಿನ್ ಪೋರ್ಟಲ್ನಲ್ಲಿ ಪಡೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ