Covaxin- ಕೋವ್ಯಾಕ್ಸಿನ್ ಲಸಿಕೆಗೆ ಕೊನೆಗೂ ಸಿಕ್ತು WHO ಅನುಮತಿ; ಇದರಿಂದ ಲಾಭ ಯಾರಿಗೆ?

WHO nod to Covaxin- ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ಕೊಟ್ಟಿದೆ. ಇದರಿಂದ ಯಾರ್ಯಾರಿಗೆ ಅನುಕೂಲ ಆಗುತ್ತದೆ ಎಂಬುದರ ವಿವರ ಇಲ್ಲಿದೆ.

ಕೋವ್ಯಾಕ್ಸಿನ್

ಕೋವ್ಯಾಕ್ಸಿನ್

 • News18
 • Last Updated :
 • Share this:
  ನವದೆಹಲಿ, ನ. 03: ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಯಾಗಿರುವ ಕೋವ್ಯಾಕ್ಸಿನ್ (Covaxin) ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO- World Health Organization) ಕೊನೆಗೂ ಒಪ್ಪಿಗೆಯ ಮುದ್ರೆ ಒತ್ತಿದೆ. ಹೈದರಾಬಾದ್​ನ ಭಾರತ್ ಬಯೋಟೆಕ್ ಸಂಸ್ಥೆಯ (Bharat Biotech of Hyderabad) ಕೋವ್ಯಾಕ್ಸಿನ್​ಗೆ ಡಬ್ಲ್ಯೂಎಚ್​ಒ ಅನುಮತಿ ಕೊಟ್ಟಿರುವುದು ಭಾರತಕ್ಕೆ ದೀಪಾವಳಿ ಉಡುಗೊರೆ ಸಿಕ್ಕಂತಾಗಿದೆ. ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗದ ದತ್ತಾಂಶಗಳನ್ನ ಹಲವು ದಿನಗಳ ಹಿಂದೆಯೇ ಕಳುಹಿಸಿಕೊಡಲಾಗಿತ್ತು. ಆದರೆ, ಅನುಮತಿ ಸಿಗುವುದು ಬಹಳ ವಿಳಂಬವಾಯಿತು. ಕಳೆದ ವಾರವಷ್ಟೇ ಡಬ್ಲ್ಯೂಎಚ್​ಒನ ಸಮಿತಿಯೊಂದು ಕೋವ್ಯಾಕ್ಸಿನ್​ನ ಪ್ರಯೋಗದ ಕೆಲ ಸ್ಪಷ್ಟೀಕರಣವನ್ನು ಕೇಳಿತ್ತು. ಇದೀಗ ಕೋವ್ಯಾಕ್ಸಿನ್​ನ ತುರ್ತು ಬಳಕೆಗೆ ಆರೋಗ್ಯ ಸಂಸ್ಥೆ ಅನುಮತಿ ಕೊಟ್ಟಿದೆ.

  “ಸರ್ಕಾರಿ ಸ್ವಾಮ್ಯದ ಐಸಿಎಂಆರ್ (ICMR) ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನ ತುರ್ತು ಬಳಕೆ ಪಟ್ಟಿಗೆ ಸೇರಿಸಲಾಗಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ಡಬ್ಲ್ಯೂ ಎಚ್ ಒ ಅನುಮತಿ ಕೊಟ್ಟಿರುವ ಲಸಿಕೆಗಳ ಸಂಖ್ಯೆ ಹೆಚ್ಚುತ್ತಿದ್ದು ಆ ಪಟ್ಟಿಗೆ ಕೋವ್ಯಾಕ್ಸಿನ್ ಸೇರಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

  ಡಬ್ಲ್ಯೂಎಚ್​ಒನ ಈ ನಿರ್ಧಾರವನ್ನು ಭಾರತ್ ಬಯೋಟೆಕ್ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಡಾ. ಕೃಷ್ಣ ಎಳ್ಳ (Bharat Biotech Chairman Dr. Krishna Ella) ಸ್ವಾಗತಿಸಿದ್ದಾರೆ. ಈ ನಡೆಯಿಂದಾಗಿ ಕೋವಿಡ್ ಲಸಿಕೆ ಎಲ್ಲರಿಗೂ ಸಮಾನವಾಗಿ ಸಿಗುವ ಕಾರ್ಯಕ್ಕೆ ನಾವೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಜಾಗತಿಕವಾಗಿ ನಮ್ಮ ಲಸಿಕೆಯನ್ನೂ ಬಳಸುವ ಅವಕಾಶ ಎಲ್ಲರಿಗೂ ಸಿಗುತ್ತದೆ ಎಂದು ಕೃಷ್ಣ ಎಳ್ಳ ಹೇಳಿದ್ದಾರೆ.

  ಕೋವ್ಯಾಕ್ಸಿನ್​ಗೆ ಡಬ್ಲ್ಯೂಎಚ್​ಒ ಅನುಮತಿ ಸಿಕ್ಕಿದ್ದು ಯಾರಿಗೆ ಲಾಭ?

  ಡಬ್ಲ್ಯೂ ಎಚ್ ಒನ ಮಾನ್ಯತೆ ಪಡೆದಿರುವುದರಿಂದ ಕೋವ್ಯಾಕ್ಸಿನ್ ಈಗ ಜಾಗತಿಕವಾಗಿ ಲಭ್ಯವಿರಲಿದೆ. ವಿಶ್ವಾದ್ಯಂತ ವಿವಿಧ ದೇಶಗಳು ಕೋವ್ಯಾಕ್ಸಿನ್ ಲಸಿಕೆಯನ್ನ ಮಾನ್ಯ ಮಾಡಲು ಅನುವು ಮಾಡಿಕೊಡುತ್ತದೆ. ಇದರಿಂದ ಭಾರತದಿಂದ ವಿದೇಶಕ್ಕೆ ಹೋಗುವ ಜನರಿಗೆ ಅನುಕೂಲವಾಗುತ್ತದೆ. ಈ ಮೊದಲಾದರೆ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ಇಲ್ಲದ ದೇಶಗಳಿಗೆ ಹೋಗಲು ಅನುಮತಿ ಇರಲಿಲ್ಲ. ಈಗ ಡಬ್ಲ್ಯೂ ಎಚ್ ಒ ಮಾನ್ಯತೆ ಕೊಟ್ಟಿರುವುದರಿಂದ ವಿವಿಧ ದೇಶಗಳೂ ಕೂಡ ಕೋವ್ಯಾಕ್ಸಿನ್ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸುವ ಸಾಧ್ಯತೆ ಇದೆ.

  ಇದನ್ನೂ ಓದಿ: KV Ramani: ತಮ್ಮ ಸಂಪತ್ತಿನ 80% ಭಾಗವನ್ನು ಶಿರಡಿ ಸಾಯಿ ಬಾಬಾಗೆ ದೇಣಿಗೆ ನೀಡಿದ ಲೋಕೋಪಕಾರಿ ಕೆ.ವಿ ರಮಣಿ..!

  ಇದಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಲಸಿಕೆ ಉತ್ಪಾದನೆ ವ್ಯಾಪ್ತಿ ಹೆಚ್ಚಾಗಲಿದೆ. ಹೆಚ್ಚೆಚ್ಚು ದೇಶಗಳಿಂದ ಕೋವ್ಯಾಕ್ಸಿನ್​ಗೆ ಬೇಡಿಕೆ ಬಂದರೆ ಭಾರತದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗುತ್ತದೆ. ಭಾರತದ ಆರ್ಥಿಕತೆಗೂ ಇದು ಲಾಭಕರ. ಹಾಗೆಯೇ, ವಿಶ್ವಕ್ಕೆ ಅಗತ್ಯವಾದ ಪ್ರಮಾಣದ ಲಸಿಕೆಯನ್ನ ಭಾರತ ಉತ್ಪಾದನೆ ಮಾಡಿ ರಫ್ತು ಮಾಡಲು ಸಾಧ್ಯ.

  ಯಾವ್ಯಾವ ಲಸಿಕೆಗಳಿಗೆ ಡಬ್ಲ್ಯೂ ಎಚ್ ಒ ಮಾನ್ಯತೆ ಸಿಕ್ಕಿದೆ?

  ಭಾರತದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆಯನ್ನ ಅಭಿವೃದ್ಧಿಪಡಿಸಿದ್ದು ಆಸ್ಟ್ರಾಜೆನೆಕಾ ಸಂಸ್ಥೆ, ಉತ್ಪಾದನೆ ಮಾಡಿದ್ದು ಸೀರಂ ಸಂಸ್ಥೆ. ಇದೇ ಲಸಿಕೆ ಬೇರೆ ದೇಶಗಳಲ್ಲಿ ಬೇರೆ ಹೆಸರಿನಲ್ಲಿ ಉತ್ಪಾದನೆ ಆಗಿದೆ. ಅದಕ್ಕೂ ಡಬ್ಲ್ಯೂಎಚ್​ಒ ಮಾನ್ಯತೆ ಇದೆ. ಜಾನ್ಸನ್ ಅಂಡ್ ಜಾನ್ಸನ್, ಮಾಡರ್ನಾ, ಫೈಜರ್ ಮತ್ತು ಸಿನೋಫಾರ್ಮ್ ಲಸಿಕೆಗಳಿಗೂ WHO ಅನುಮತಿ ಇದೆ. ಸಿನೋಫಾರ್ಮ್ ಲಸಿಕೆ ಚೀನಾದ್ದಾಗಿದೆ.

  ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ವಿ, ಝೈಕೋವಿ ಡಿ (ZyCoV-D- ಝೈಡಸ್ ಕೆಡಿಲಾ ಸಂಸ್ಥೆಯದ್ದು) ಮತ್ತು ಫೈಜರ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಇದೆ.

  ಇದನ್ನೂ ಓದಿ: Cooking Oil Price Drop: ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಬಂಪರ್ ಕೊಡುಗೆ..!

  ಡಬ್ಲ್ಯೂ ಎಚ್​ ಒ ಅನುಮತಿಗೆ ಮುಂಚೆಯೇ ಕೋವ್ಯಾಕ್ಸಿನ್​ಗೆ ಮಾನ್ಯತೆ ಕೊಟ್ಟ ದೇಶಗಳಿವು:
  1) ಆಸ್ಟ್ರೇಲಿಯಾ
  2) ಮಾರಿಷಸ್
  3) ಓಮನ್
  4) ಫಿಲಿಪ್ಪೈನ್ಸ್
  5) ನೇಪಾಳ
  6) ಮೆಕ್ಸಿಕೋ
  7) ಇರಾನ್
  8) ಶ್ರೀಲಂಕಾ
  9) ಗ್ರೀಸ್
  10) ಎಸ್ಟೋನಿಯಾ
  11) ಜಿಂಬಾಬ್ವೆ

  ಪ್ರಧಾನಿ ಮೋದಿ ಪ್ರಭಾವ ಕಾರಣವಾಯಿತಾ?

  ಕಳೆದ ವಾರ ಜಿ20 ಶೃಂಗ ಸಭೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ಡಬ್ಲ್ಯೂಎಚ್​ಒ ಮುಖ್ಯಸ್ಥ ಟೆಡ್ರೋಸ್ ಅಢಮೋಮ್ ಘೆಬ್ರೆಯೆಸುಸ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮುಂದಿನ ವರ್ಷ ಭಾರತ 500 ಕೋಟಿ ಕೋವಿಡ್ ಲಸಿಕೆಯ ಡೋಸ್​ಗಳನ್ನ ಉತ್ಪಾದನೆ ಮಾಡಲು ಸಿದ್ಧ ಎಂದು ತಿಳಿಸಿದ್ದ ಮೋದಿ ಅವರು ಇದಕ್ಕಾಗಿ ಭಾರತದ ಲಸಿಕೆಗಳಿಗೆ ಶೀಘ್ರದಲ್ಲೇ ಅನುಮತಿ ಕೊಡುವುದು ಅಗತ್ಯ ಇದೆ ಎಂದು ಒತ್ತಾಯಿಸಿದ್ದರು. ಅದಾಗಿ ಒಂದು ವಾರಕ್ಕೆ ಕೋವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಸಿಕ್ಕಿದೆ.
  Published by:Vijayasarthy SN
  First published: