Ukraine Crisis: ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಿದ್ಯಾರ್ಥಿಗಳು

ಉದ್ವಿಗ್ನ ಉಕ್ರೇನ್‍ನ ಸಹವಾಸ ಬೇಡವೆಂದು ದೇಶಕ್ಕೆ ಮರಳಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಭಾರೀ ಮೊತ್ತದ ಟಿಕೆಟ್ ದರಗಳು ಅಡ್ಡಿಯಾಗುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಷ್ಯಾ ಮತ್ತು ಉಕ್ರೇನ್ ನಡುವಿನ (Ukraine Crisis) ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಲೇ ಇದೆ. ಹಾಗಾಗಿ ಭಾರತ (Indian Citizens) ಅಲ್ಲಿ ವಾಸಿಸುತ್ತಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಾಸು ಕರೆತರಲು ಪ್ರಯತ್ನಗಳನ್ನು ಮಾಡತೊಡಗಿದೆ. ಇಂತಹ ಸಂದರ್ಭದಲ್ಲಿ, ಅಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು (Indian Students) ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ಬಳಿ ಈಗ ಎರಡು ಆಯ್ಕೆಗಳಿವೆ - ಭಾರತೀಯ ರಾಯಭಾರಿ ಕಚೇರಿಯ ಎಚ್ಚರಿಕೆಗಳನ್ನು ಬದಿಗಿಟ್ಟು ಅಲ್ಲಿನ ಅನಿಶ್ಚಿತತೆಯ ಪರಿಸ್ಥಿತಿಯ ನಡುವೆಯೇ ಅಲ್ಲಿ ಉಳಿದು, ಆಫ್‍ಲೈನ್ ತರಗತಿಗಳಿಗೆ ಹಾಜರಾಗುವುದು, ಇಲ್ಲವೇ, ಲಕ್ಷಗಟ್ಟಲೆ ಖರ್ಚು ಮಾಡಿದ ಬಳಿಕ ಭಾರತಕ್ಕೆ ಮರಳುವುದು ಮತ್ತು ಕಲಿಕೆಯ ನಷ್ಟವನ್ನು ಅನುಭವಿಸುವುದು.

ಕೆಲವು ವಿಶ್ವವಿದ್ಯಾನಿಲಯಗಳು ಆನ್‍ಲೈನ್ ಶಿಕ್ಷಣಕ್ಕೆ ಬೆಂಬಲ ನೀಡುತ್ತಿವೆ, ಆದರೆ ವಿದ್ಯಾರ್ಥಿಗಳು, ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳು, ಆನ್‍ಲೈನ್ ಕೋರ್ಸ್‍ಗಳಿಂದ ವೈದ್ಯರನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಅದಲ್ಲದೆ, ಭಾರತದ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‍ಎಂಸಿ) ಆನ್‍ಲೈನ್ ಎಂಬಿಬಿಎಸ್ ಪದವಿಯನ್ನು ಮಾನ್ಯವೆಂದು ಸ್ವೀಕರಿಸಲು ನಿರಾಕರಿಸಿದೆ.

ಸ್ವದೇಶಕ್ಕೆ ಮರಳಲು ಆಗದೇ ತೊಂದರೆ

ಉದ್ವಿಗ್ನ ಉಕ್ರೇನ್‍ನ ಸಹವಾಸ ಬೇಡವೆಂದು ದೇಶಕ್ಕೆ ಮರಳಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಭಾರೀ ಮೊತ್ತದ ಟಿಕೆಟ್ ದರಗಳು ಅಡ್ಡಿಯಾಗುತ್ತಿವೆ. ಸಾಮಾನ್ಯವಾಗಿ 50,000 ರೂ. ಗಳಿಂದ 70,000 ರೂ.ಗಳಿಗೆ ಲಭ್ಯವಿರುತ್ತಿದ್ದ ಟಿಕೆಟ್‍ಗಳ ಬೆಲೆ ಪ್ರಸ್ತುತ 1 ಲಕ್ಷ ರೂ.ಗೆ ಏರಿಸಲ್ಪಟ್ಟಿದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ಕೋರ್ಸ್‍ನ ಎರಡನೇ ಮತ್ತು ಮೂರನೇ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಮೇ –ಜೂನ್‍ನಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಯ ದಿನಾಂಕಗಳು ಮತ್ತು ವಿಧಾನಗಳ ಬಗ್ಗೆ ಸ್ಪಷ್ಟತೆ ಇಲ್ಲದ ಬಹಳಷ್ಟು ಮಂದಿ, ವಾಪಾಸಾಗಲು ಕಾಯುತ್ತಿದ್ದಾರೆ.

ಟಿಕೆಟ್​ ದರ ದುಬಾರಿ

“ಸ್ಥಳೀಯವಾಗಿ, ಪರಿಸ್ಥಿತಿ ಸರಿಯಿದೆ, ಆದರೆ ಸ್ಥಳೀಯರು ಕೂಡ ಕಠಿಣ ಸಮಯವನ್ನು ಎದುರಿಸಲು ತಯಾರಿ ನಡೆಸುತ್ತಿದ್ದಾರೆ” ಎಂದು ಇವಾನೋ ಫ್ರಾಂಕ್‍ವಿಸ್ಕ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಬಿಹಾರ್ ಮೂಲದ ಅನುಭವ್ ಆರ್ಯ ಹೇಳಿದ್ದಾರೆ. ಅವರ ಹೆತ್ತವರು ಮತ್ತು ಕುಟುಂಬ ಸದಸ್ಯರು ಚಿಂತಿತರಾಗಿದ್ದು ದೇಶಕ್ಕೆ ವಾಪಾಸು ಮರಳಲು ಒತ್ತಾಯಿಸುತ್ತಿದ್ದಾರೆ ಎನ್ನುವ ಆರ್ಯ, “ಈ ದರದಲ್ಲಿ ಟಿಕೆಟ್ ಬುಕ್ ಮಾಡುವುದು ನಿಜಕ್ಕೂ ಕಷ್ಟ” ಎಂದು ನ್ಯೂಸ್ 18 ಗೆ ತಿಳಿಸಿದ್ದಾರೆ. “ಸುರಕ್ಷಿತವಾಗಿರುವುದು ಸದ್ಯದ ಆದ್ಯತೆ” ಎನ್ನುವುದು ಅವರ ಅಭಿಪ್ರಾಯ.

ಭಾರತೀಯರು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳು, ಆನ್‍ಲೈನ್ ಕ್ಲಾಸ್‍ಗಳನ್ನು ಮಾಡುವಂತೆ ಒತ್ತಾಯಿಸಿ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸಿದ್ದರು. ಮಾರ್ಚ್ 12 ರ ವರೆಗೆ ಆನ್‍ಲೈನ್ ತರಗತಿಗಳಲ್ಲಿ ಮುಂದುವರೆಯಲು ಅವರಿಗೆ ವಿಶ್ವವಿದ್ಯಾನಿಲಯ ಅವಕಾಶ ನೀಡಿದೆ.

ಇದನ್ನು ಓದಿ: Money Laundering Case: ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ಬಂಧನ

ಶಿಕ್ಷಣಕ್ಕೂ ಅಡ್ಡಿ

“ಒಂದು ವೇಳೆ ವಿಶ್ವ ವಿದ್ಯಾನಿಲಯ 20 ದಿನಗಳ ಆನ್‍ಲೈನ್ ಶಿಕ್ಚಣಕ್ಕೆ ಅನುಮತಿ ನೀಡಿದರೆ ಮತ್ತು ಆ ಬಳಿಕ ಪರಿಸ್ಥಿತಿ ಸುಧಾರಣೆ ಆಗತೊಡಗಿದರೆ ನಾವು ಮರಳಿ ಬರಬೇಕಾಗುತ್ತದೆ. ಸದ್ಯದ ದರವನ್ನು ಪರಿಗಣಿಸಿದರೆ, ಹೋಗಲು ಮತ್ತು ಬರಲು ಸುಮಾರು 2 ಲಕ್ಷ ರೂ. ಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ಅಷ್ಟೊಂದು ಖರ್ಚು ಮಾಡಲು ನಮಗೆ ಸಾಧ್ಯವಿಲ್ಲ” ಎಂದಿದ್ದಾರೆ ಅವರು.

ಖಾರ್‍ಕಿವ್‍ನ ವಿಶ್ವವಿದ್ಯಾನಿಲಯದಲ್ಲಿ 6 ನೇ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ಉತ್ತರ ಪ್ರದೇಶದ ಬರೇಲಿ ಮೂಲದ ವಿದ್ಯಾರ್ಥಿಯೊಬ್ಬರು ನ್ಯೂಸ್ 18 ಜೊತೆ ಮಾತನಾಡುತ್ತಾ, “ ಕೆಲವು ವಿಶ್ವ ವಿದ್ಯಾನಿಲಯಗಳು ಆನ್‍ಲೈನ್ ತರಗತಿಗಳಿಗೆ ಬೆಂಬಲ ನೀಡುತ್ತಿದ್ದರೂ, 3 ನೇ ಮತ್ತು 6 ನೇ ವರ್ಷದ ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಇಚ್ಚಿಸುತ್ತಿಲ್ಲ, ಏಕೆಂದರೆ ನಮಗೆ ಮೇ ಮತ್ತು ಜೂನ್‍ನಲ್ಲಿ ಪರೀಕ್ಷೆಗಳಿವೆ.

ಒತ್ತಡದಲ್ಲಿ ವಿದ್ಯಾರ್ಥಿಗಳು

ಈ ಪರೀಕ್ಷೆಗಳನ್ನು ಪಾಸು ಮಾಡದೆ ನಾವು ಪದವಿ ಪಡೆಯಲು ಸಾಧ್ಯವಿಲ್ಲ. ಅದರ ಜೊತೆಗೆ, ನಾವು ಉಕೇನ್‍ನಲ್ಲಿ ಇರುವುದರ ಬಗ್ಗೆ ಚಿಂತಿತರಾಗಿರುವ ಪೋಷಕರಿಂದ ಒತ್ತಡವನ್ನು ಕೂಡ ಎದುರಿಸುತ್ತಿದ್ದೇವೆ. ನಮಗೆ ನಮ್ಮ ಉಕ್ರೇನಿಯನ್ ಪರೀಕ್ಷೆಗಳು ಮತ್ತು ವಿಮಾನ ದರಗಳಲ್ಲಿನ ಕಡಿತದ ಬಗ್ಗೆ ಸಂಪೂರ್ಣ ಮಾಹಿತಿ ಬೇಕು” ಎಂದಿದ್ದಾರೆ.

ಇದನ್ನು ಓದಿ : ಮಣಿಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಅಬ್ಬರ, ಗದ್ದಲಗಳೇ ಇಲ್ಲ!

ಉಕ್ರೇನ್‍ನಿಂದ ಎಂಬಿಬಿಎಸ್ ಪದವಿ ಪಡೆದಿರುವ ಗುಜರಾತಿನ ಸುರೇಂದ್ರ ನಗರದ ಕೇತುಲ್ ಹೇಳುವಂತೆ, ಅಲ್ಲಿನ ಬೀದಿಗಳಲ್ಲಿ ಘರ್ಷಣೆ ಶುರುವಾಗಿಲ್ಲವಾದರೂ, ಅನಿಶ್ಚಿತತ ಪರಿಸ್ಥಿತಿ ವಿದ್ಯಾರ್ಥಿಗಳಲ್ಲಿ ಭಯ ಉಂಟು ಮಾಡುತ್ತಿದೆ.

ಭಾರತ ರಾಯಭಾರಿ ಕಚೇರಿಗೆ ಸಂಪರ್ಕ

ಉಕ್ರೇನಿನ ಬೊಗೊಮೊಲೆಟ್ಸ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯ ಮೂರನೇ ವರ್ಷದ ವಿದ್ಯಾರ್ಥಿ ಅಫ್ಜಲ್ (ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ) ತಾನಿರುವ ಸ್ಥಳದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದರೂ ಕೂಡ ದೇಶಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ. “ನಾನು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ ಅವರು ಸ್ಥಳಾಂತರ ಅಗತ್ಯವೆನಿಸುವ ಪರಿಸ್ಥಿತಿ ಬರಬಹುದು ಎಂದರು” ಎಂದು ಅಫ್ಜಲ್ ತಿಳಿಸಿದ್ದಾರೆ.

ಕೋವಿಡ್ 19 ಕಾರಣದಿಂದ ಸೀಮಿತ ತರಗತಿಗಳಿರುವುದರಿಂದ ಪ್ರಾಯೋಗಿಕ ಕಲಿಕೆಯನ್ನು ತಪ್ಪಿಸಿಕೊಳ್ಳುತ್ತೇನೆ ಎಂಬ ಚಿಂತೆ ಅವರದ್ದು.
Published by:Seema R
First published: