Sushma ChakreSushma Chakre
|
news18-kannada Updated:October 7, 2019, 2:26 PM IST
ಯೋಧರ ಗರ್ಬಾ ನೃತ್ಯ
ನವರಾತ್ರಿ ವೇಳೆ ಗುಜರಾತ್, ಮಹಾರಾಷ್ಟ್ರದಲ್ಲಿ ಜನರು ಸಾಂಪ್ರದಾಯಿಕ ಉಡುಗೆ ತೊಟ್ಟು ಗರ್ಬಾ, ದಾಂಡಿಯಾ ನೃತ್ಯಗಳನ್ನು ಮಾಡುವ ಸಂಪ್ರದಾಯವಿದೆ. ಹಳದಿ, ಕೆಂಪು, ಹಸಿರಿನ ಲಂಬಾಣಿ ರೀತಿಯ ಉಡುಗೆಗಳನ್ನು ಧರಿಸುವ ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಿಕ ಸ್ಟೆಪ್ಗಳನ್ನು ಹಾಕಿ ಕುಣಿಯುತ್ತಾರೆ. ಸದ್ಯಕ್ಕೆ ಟ್ವಿಟ್ಟರ್ನಲ್ಲಿ ನಮ್ಮ ಸೈನಿಕರ ಗರ್ಬಾ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಸೈನಿಕರ ಎನರ್ಜಿ ಮತ್ತು ಉತ್ಸಾಹಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿವೆ.
ಈ ವಿಡಿಯೋಗೆ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನವರಾತ್ರಿ ಪ್ರಯುಕ್ತ 'ದಾಂಡಿಯಾ ಡ್ಯಾಡ್' ಎಂಬ ಸ್ಪರ್ಧೆಯನ್ನು ಆಯೋಜಿಸಿದ್ದರು. 'ನಿಮ್ಮ ಅಪ್ಪ ಮಾಡುವ ದಾಂಡಿಯಾ ನೃತ್ಯವನ್ನು ವಿಡಿಯೋ ಮಾಡಿ ಅದನ್ನು ನನಗೆ ಟ್ಯಾಗ್ ಮಾಡಿ. ಅತ್ಯುತ್ತಮವಾಗಿ ನೃತ್ಯ ಮಾಡಿದ ಇಬ್ಬರು ಅಪ್ಪಂದಿರ ಕುಟುಂಬಸ್ಥರಿಗೆ ಕ್ಲಬ್ ಮಹೀಂದ್ರಾ ವತಿಯಿಂದ 2 ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇನೆ. ಆಯ್ಕೆಯಾದ ಅಪ್ಪಂದಿರು ದೇಶದ ಯಾವ ಭಾಗದಲ್ಲಿ ಬೇಕೋ ಅಲ್ಲಿ ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಬಹುದು. ವಿಡಿಯೋ ಪೋಸ್ಟ್ ಮಾಡಲು ಅ. 8 ಕೊನೆಯ ದಿನ' ಎಂಬ ಆಫರ್ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅನೇಕ ಜನರು ದಾಂಡಿಯಾ ನೃತ್ಯದ ವಿಡಿಯೋವನ್ನು ಅವರಿಗೆ ಟ್ಯಾಗ್ ಮಾಡಿದ್ದರು. ದೀಪ್ತಿ ಎಂಬ ಯುವತಿಯೊಬ್ಬರು ಸೈನಿಕರ ಗರ್ಬಾ ನೃತ್ಯದ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಆನಂದ್ ಮಹೀಂದ್ರಾ ಅವರಿಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರಾ 'ನನ್ನ ದಾಂಡಿಯಾ ಡ್ಯಾಡ್ ಸ್ಪರ್ಧೆಗೆ ಯಾವುದೇ ಅತ್ಯುತ್ತಮ ವಿಡಿಯೋಗಳು ಸಿಕ್ಕಿಲ್ಲ. ಆದರೆ, ಸುನಾಮಿಯಂತೆ ವಿಡಿಯೋಗಳು ಹರಿದುಬರುತ್ತಿವೆ. ಈ ವಿಡಿಯೋ ನೋಡುತ್ತಿದ್ದ ನನಗೆ ಸೆಲ್ಯೂಟ್ ಮಾಡಬೇಕು ಎನಿಸುತ್ತಿದೆ. ಈ ವಿಡಿಯೋ ನೋಡಿದ ಮೇಲೆ ಹೌ ಈಸ್ ದಿ ಜೋಶ್? ಎಂಬ ಪ್ರಶ್ನೆ ಕೇಳುವುದೇ ಬೇಡ. ಸೈನಿಕರು ಈ ನೃತ್ಯ ಮಾಡಿರುವ ಜಾಗ ಎಲ್ಲಿ ಎಂಬುದು ಗೊತ್ತಿಲ್ಲ. ನಿಮಗೇನಾದರೂ ಮಾಹಿತಿ ಇದೆಯೇ?' ಎಂದು ಬಣ್ಣಿಸಿದ್ದಾರೆ.
ಭಾರತೀಯ ಸೇನೆಯ ಯೂನಿಫಾರಂ ಧರಿಸಿರುವ ಯೋಧರು ಎರಡು ಸಾಲಿನಲ್ಲಿ ನಿಂತು ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಜರಾತಿ ಗರ್ಬಾ ನೃತ್ಯ ಎಂದರೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಈ ನೃತ್ಯವೇ ಉತ್ತಮ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಳೆಯದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
First published:
October 7, 2019, 2:12 PM IST