ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ (Turkey and Syria) ಸಂಭವಿಸಿದ ಭಾರಿ ಭೂಕಂಪದಿಂದಾಗಿ (Earthquake) ಅಲ್ಲಿರುವ ದೊಡ್ಡ ದೊಡ್ಡ ಕಟ್ಟಡಗಳು ನೆಲಕ್ಕುರುಳಿವೆ. ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಭೂಕಂಪದಿಂದ ನಿರಾಶ್ರಿತರಾಗಿದ್ದಾರೆ ಎಂಬ ಸುದ್ದಿ ನಮಗೆಲ್ಲಾ ಗೊತ್ತೇ ಇದೆ. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬ ಗರ್ಭಿಣಿ (Pregnant) ತಾಯಿ ಮಗುವಿಗೆ ಜನ್ಮ ನೀಡಿ ಅಲ್ಲಿಯೇ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದು, ನವಜಾತ ಶಿಶು ಮಾತ್ರ ಅಲ್ಲಿ ಬದುಕುಳಿದಿರುವ ಒಂದು ಸುದ್ದಿಯನ್ನು ನಾವು ಮೊನ್ನೆ ನೋಡಿದ್ದೆವು. ಮತ್ತೊಂದು ಘಟನೆಯಲ್ಲಿ ಎರಡು ತಿಂಗಳ ಶಿಶು ಕೂಡ ಜೀವಂತವಾಗಿ ಪತ್ತೆಯಾಗಿದ್ದ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ (Social Media) ವೈರಲ್ ಆಗಿದ್ದವು. ಇದೀಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಹರಿದಾಡುತ್ತಿದೆ. ಅದು ನಮ್ಮ ಭಾರತೀಯ ಯೋಧನಿಗೆ (Indian Soldier) ಸಂಬಂಧಿಸಿದ್ದು ಎನ್ನುವುದು ಮತ್ತೊಂದು ವಿಶೇಷ.
ಭೂಕಂಪ ಪೀಡಿತ ಟರ್ಕಿ ನೆರವಿಗೆ ಹೋಗಿದ್ದ ಯೋಧ
ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾ ಸಂತ್ರಸ್ತರಿಗೆ ನೆರವು ನೀಡಲು ಭಾರತ 'ಆಪರೇಷನ್ ದೋಸ್ತ್' ಕಾರ್ಯಾಚರಣೆ ಪ್ರಾರಂಭಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಭಾರತ ತನ್ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 2 ತಂಡವನ್ನು ಅಲ್ಲಿಗೆ ಕಳುಹಿಸಿದ್ದು, ಈ 100 ಸದಸ್ಯರಲ್ಲಿ ಹವಲ್ದಾರ್ ರಾಹುಲ್ ಚೌಧರಿ ಎಂಬ ಯೋಧ ಕೂಡ ಒಬ್ಬರಾಗಿದ್ದರು. ಇದೀಗ ವಿದೇಶದಲ್ಲಿರುವಾಗಲೇ ಅವರಿಗೆ ಶುಭಸುದ್ದಿಯೊಂದು ಸಿಕ್ಕಿದೆ.
ತುಂಬು ಗರ್ಭಿಣಿ ಬಿಟ್ಟು ತೆರಳಿದ್ದ ಯೋಧ
ಉತ್ತರ ಪ್ರದೇಶದ ಹಾಪುರ್ ನಿವಾಸಿಯಾಗಿರುವ ರಾಹುಲ್ ಚೌಧರಿ ಟರ್ಕಿಗೆ ತೆರಳು ಮುನ್ನವೇ ತನ್ನ ಮಗುವನ್ನು ಜಗತ್ತಿಗೆ ಸ್ವಾಗತಿಸಲು ಸಿದ್ಧರಾಗಿದ್ದರು, ಅಂದರೆ ಅವರ ಪತ್ನಿ ಗರ್ಭಿಣಿಯಾಗಿದ್ದರು. ಆದಾಗ್ಯೂ, ತಮ್ಮ ಹಿರಿಯರು ಮತ್ತು ಪತ್ನಿಯೊಂದಿಗೆ ಚರ್ಚಿಸಿದ ನಂತರ, ಅವರು ರಾಷ್ಟ್ರದ ಸೇವೆ ಮಾಡಲು ಟರ್ಕಿ ವಿಮಾನ ಹತ್ತಿದ್ದರು. ಅತ್ತ ರಕ್ಷಣಾ ಕಾರ್ಯಾಚಾರಣೆಯಲ್ಲಿ ತೊಡಗಿಕೊಂಡಿರುವ ಯೋಧಾ ರಾಹುಲ್ ಚೌಧರಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಚಾರವಾಗಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ರಾಹುಲ್ ಚೌಧರಿ “ ಫೆಬ್ರವರಿ 8 ರಂದು ತನ್ನ ಹೆಂಡತಿಯ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಿಗದಿಯಾಗಿದೆ ಎಂದು ನಾನು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೆ. ಆಗ ಅವರು ನನ್ನ ಹೆಂಡತಿಯೊಂದಿಗೆ ಮಾತನಾಡಲು ಹೇಳಿದರು. ನಾನು ಪತ್ನಿಗೆ ಈ ಬಗ್ಗೆ ಹೇಳಿದಾಗ, ಅವಳು ನನ್ನನ್ನು ಸೇನಾ ತಂಡದೊಂದಿಗೆ ಹೋಗಲು ಹೇಳಿದಳು. ನಾನು ಮೊದಲು ನನ್ನ ದೇಶಕ್ಕೆ ಸೇವೆ ಸಲ್ಲಿಸಬೇಕೆಂದು ಅವಳು ನನಗೆ ಹೇಳಿದಳು" ಎಂದು ರಾಹುಲ್ ಚೌಧರಿ ಅವರು ತಿಳಿಸಿದ್ದಾರೆ.
ಹುಟ್ಟಿದ ಮಗುವಿಗೆ ‘ಟರ್ಕಿ ಚೌಧರಿ’ ಅಂತಾ ಹೆಸರು
ರಾಹುಲ್ ಚೌಧರಿ ಆ ಕಡೆ ಟರ್ಕಿಗೆ ಹೋಗಲು ವಿಮಾನವನ್ನು ಹತ್ತುತ್ತಿದ್ದಂತೆ, ಅವರ ಹೆಂಡತಿಯನ್ನು ಆಪರೇಷನ್ ಥಿಯೇಟರ್ಗೆ ಕರೆದೊಯ್ಯಲಾಗಿದೆ. ಟರ್ಕಿಯಲ್ಲಿ ವಿಮಾನ ಇಳಿಯುವ ಸಮಯಕ್ಕೆ ಪತ್ನಿ ಗಂಡು ಮಗು ಜನ್ಮ ನೀಡಿದ್ದಾರೆ ಎಂಬ ಸುದ್ದಿಯನ್ನು ರಾಹುಲ್ಗೆ ತಿಳಿದಿದೆ. ಆಗ ಸೇನಾ ಆಸ್ಪತ್ರೆಯಲ್ಲಿ ಆ ಮಗುವಿಗೆ ರಾಹುಲ್ ಅವರ ಸ್ನೇಹಿತರು ಮತ್ತು ಸಹದ್ಯೋಗಿಗಳು 'ಟರ್ಕಿ ಚೌಧರಿ' ಅಂತ ಹೆಸರನ್ನು ಸೂಚಿಸಿದ್ದಾರೆ.
ಮತ್ತೊಬ್ಬ ಯೋಧನಿಗೂ ಸಿಕ್ತು ಗುಡ್ ನ್ಯೂಸ್
ರಾಹುಲ್ ಚೌಧರಿ ಅವರಷ್ಟೆ ಅಲ್ಲದೆ ಉತ್ತರ ಪ್ರದೇಶದ ಗೋರಖ್ಪುರ್ನ ಯೋಧ ಕಮಲೇಶ್ ಕುಮಾರ್ ಚೌಹಾಣ್ ಎಂಬ ಮತ್ತೊಬ್ಬ ಸೇನಾ ಸಿಬ್ಬಂದಿ ಸಹ ಟರ್ಕಿಯಲ್ಲಿ ಇಳಿದ ನಂತರ, ಅವರು ಗಂಡು ಮಗುವಿಗೆ ತಂದೆಯಾಗಿರುವ ಸುದ್ದಿಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ ಇದೀಗ 35,000 ದಾಟಿದೆ. ಸೋಮವಾರ, ಭೂಕಂಪದಿಂದ ಬದುಕುಳಿದವರ ಹುಡುಕಾಟ ಅಂತಿಮ ಹಂತಕ್ಕೆ ತಲುಪಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ತಂಡಗಳನ್ನು ಕಳುಹಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ