ನವದೆಹಲಿ(ಮಾ.02): ಉತ್ತರಾಖಂಡ ರಾಜ್ಯದ ಜೋಶಿ ಮಠದ ಸುತ್ತಮುತ್ತ ಸಂಭವಿಸಿದ ಭೂಮಿ ಬಿರುಕು, ಟರ್ಕಿಯ ಭೀಕರ ಭೂಕಂಪ ಮತ್ತು ಸಾವು-ನೋವು, ಚೀನಾದ ತಜಕಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಹೀಗೆ ಜಗತ್ತು ಭೂಕಂಪದ ದೊಡ್ಡ ಅಪಾಯವನ್ನು ಎದುರಿಸುತ್ತಿರುವ ಮುನ್ಸೂಚನೆಯಂತೆ ಒಂದರ ಹಿಂದೆ ಒಂದು ಘಟನೆಗಳು ನಡೆಯುತ್ತಿವೆ.
ಭಾರತಕ್ಕೂ ಇದೆ ಭೂಕಂಪದ ಅಪಾಯ
ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲೂ ಭೂಕಂಪದ ದೊಡ್ಡ ಅಪಾಯದ ಸೂಚನೆ ಕಂಡು ಬಂದಿದೆ. ಒಂದೆರೆಡು ವರ್ಷಗಳ ಹಿಂದೆ ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್) ಬಿಡುಗಡೆ ಮಾಡಿದ ವರದಿಯು ದೇಶದ ಶೇ.59ರಷ್ಟು ಪ್ರದೇಶದಲ್ಲಿ ವಿವಿಧ ತೀವ್ರತೆಯ ಭೂಕಂಪದ ಸಾಧ್ಯತೆ ಇದ್ದು, ಭಾರತ ಭೂಕಂಪದ ಅಪಾಯದ ಅಂಚಿನಲ್ಲಿವೆ ಎಂದು ತಿಳಿಸಿತ್ತು.
ಜೊತೆಗೆ ಕೆಲವು ಸ್ಥಳಗಳನ್ನು ಭೂಕಂಪದ ಜೋನ್‌ಗಳಾಗಿ ಉಲ್ಲೇಖಿಸಿತ್ತು. ಹೀಗಾಗಿ ಭಾರತಕ್ಕೂ ಭೂಕಂಪದ ಭಯವಿದ್ದು, ಕೆಲ ವಲಯಗಳು ಡೇಂಜರ್ ಜೋನ್‌ನಲ್ಲಿವೆ.
ಇದನ್ನೂ ಓದಿ: Earthquake In Tajikistan China: ಚೀನಾ, ತಜಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 7.2 ತೀವ್ರತೆಯ ಪ್ರಬಲ ಭೂಕಂಪ!
ಗುಜರಾತ್, ಹಿಮಾಚಲ ಪ್ರದೇಶ, ಬಿಹಾರ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಜಮ್ಮು ಮತ್ತು ಕಾಶ್ಮೀರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳು, ದೆಹಲಿಯು ಸೋಹ್ನಾ, ಮಥುರಾ ಮತ್ತು ದೆಹಲಿ-ಮೊರಾದಾಬಾದ್ ಭೂಕಂಪದ ಅಪಾಯ ಎದುರಿಸುತ್ತಿರುವ ಪ್ರದೇಶಗಳು ಎಂದು ವರದಿ ತಿಳಿಸಿದೆ.
ಪ್ರತಿ ವರ್ಷ 5 ಸೆಂಟಿ ಮೀಟರ್ ಚಲಿಸುತ್ತಿದೆ ಭಾರತದ ಟೆಕ್ಟೋನಿಕ್ ಪ್ಲೇಟ್
ಇತ್ತೀಚೆಗೆ ಪ್ರಮುಖ ಹವಾಮಾನ ವಿಜ್ಞಾನಿ ಮತ್ತು ಭೂವಿಜ್ಞಾನ ತಜ್ಞರು ಭೂಕಂಪದ ಮತ್ತೊಂದು ಸೂಚನೆ ನೀಡಿದ್ದಾರೆ. ತಜ್ಞರು ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ ಸುಮಾರು 5 ಸೆಂಟಿ ಮೀಟರ್ ಚಲಿಸುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ವಿದ್ಯಾಮಾನ ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಪ್ರಮುಖ ಭೂಕಂಪಗಳ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.
"ಯಾವುದೇ ಟೈಂನಲ್ಲಾದರೂ ಭೂಕಂಪ ಸಂಭವಿಸಬಹುದು"
ಮಂಗಳವಾರ ಎಎನ್‌ಐ ಜೊತೆ ಮಾತನಾಡಿದ ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್, "ಭೂಮಿಯ ಮೇಲ್ಮೈ ನಿರಂತರವಾಗಿ ಚಲನೆಯಲ್ಲಿರುವ ವಿವಿಧ ಪ್ಲೇಟ್‌ಗಳನ್ನು ಒಳಗೊಂಡಿದೆ.
ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ 5 ಸೆಂ.ಮಿ ಚಲಿಸುತ್ತಿದೆ. ಇದು ಹಿಮಾಲಯದ ಉದ್ದಕ್ಕೂ ಒತ್ತಡವನ್ನು ನಿರ್ಮಿಸುತ್ತಿದೆ. ಭವಿಷ್ಯದಲ್ಲಿ ಇದು ಪ್ರಬಲ ಭೂಕಂಪಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ" ಎಂದು ಅವರು ವಿವರಿಸಿದರು.
ಇದನ್ನೂ ಓದಿ: Earthquake: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪದ ಅನುಭವ; ತುಮಕೂರಿನಲ್ಲಿ ತಿಮಿಂಗಲ ವಾಂತಿ ದಂಧೆ
"ನಾವು ಉತ್ತರಾಖಂಡದಲ್ಲಿ 18 ಭೂಕಂಪನ ಕೇಂದ್ರಗಳ ಪ್ರಬಲ ಜಾಲವನ್ನು ಹೊಂದಿದ್ದೇವೆ. ಹಿಮಾಚಲ ಮತ್ತು ಉತ್ತರಾಖಂಡ ಸೇರಿದಂತೆ ನೇಪಾಳದ ಪಶ್ಚಿಮ ಭಾಗದ ನಡುವಿನ ಭೂಕಂಪನ ಅಂತರ ಎಂದು ಉಲ್ಲೇಖಿಸಲಾದ ಪ್ರದೇಶವು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಭೂಕಂಪಗಳಿಗೆ ಗುರಿಯಾಗುತ್ತದೆ" ಎಂದು ಪೂರ್ಣಚಂದ್ರ ರಾವ್ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭೂಕಂಪ
ಇನ್ನೂ ಈ ಎಲ್ಲಾ ವರದಿಗಳಿಗೆ ಸಾಕ್ಷಿ ಎನ್ನುವಂತೆ ಸೋಮವಾರ ರಾತ್ರಿ 10.38 ರ ಹೊತ್ತಿಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಉತ್ತರಕ್ಕೆ 56 ಕಿಮೀ ದೂರದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ 56 ಕಿಮೀ ಉತ್ತರಕ್ಕೆ ರಾತ್ರಿ 10:38 ರ ಸುಮಾರಿಗೆ 3.6 ರ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ನೆಲದಿಂದ 10 ಕಿಮೀ ಆಳದಲ್ಲಿದೆ" ಎಂದು ಎನ್‌ಸಿಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಆಂಧ್ರಪ್ರದೇಶದಲ್ಲಿ ಭೂಕಂಪ
ಫೆಬ್ರವರಿ 19 ರಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗಾಮ ಪಟ್ಟಣದಲ್ಲಿ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ