Viral Photo: ತಲೆ ಕೆಳಗೆ ಹಾಕಿ ಮರದ ಮೇಲೆ ಅಂಟಿಕೊಂಡಂತೆ ಕಾಣಿಸುತ್ತಿರುವ ಒರಾಂಗುಟನ್ನ ವಿಶಿಷ್ಟ ಫೋಟೋ ಸೆರೆಹಿಡಿದ ಭಾರತದ ಕೇರಳ ಮೂಲದವರಾದ, ಸದ್ಯ ಕೆನಡಾದಲ್ಲಿ ನೆಲೆಸಿರುವ ಛಾಯಾಗ್ರಾಹಕ ಥಾಮಸ್ ವಿಜಯನ್ ಅವರಿಗೆ 2021ರ ನೇಚರ್ ಟಿಟಿಎಲ್ ಫೋಟೋಗ್ರಾಫರ್ ಪ್ರಶಸ್ತಿ ಒಲಿದು ಬಂದಿದೆ. ಆಗ್ನೇಯ ಏಷ್ಯಾದ ಮಲಯ ದ್ವೀಪಸಮೂಹದ ಬೊರ್ನಿಯೊ ದ್ವೀಪದಲ್ಲಿ ಈ ಅದ್ಭುತ ಛಾಯಾಚಿತ್ರವನ್ನು ವಿಜಯನ್ ಅವರು ಸೆರೆಹಿಡಿದಿದ್ದರು. ಮೇಲೆ ನೀಲಿ ಆಕಾಶಕ್ಕೆ ಚಾಚಿರುವ ಮರಗಳ ನಡುವೆ ಒಂದು ಮರವನ್ನು ಅಪ್ಪಿಕೊಂಡು ತಲೆ ಕೆಳಗೆ ಹಾಕಿಕೊಂಡು ಇಳಿಯಲು ಯತ್ನಿಸುತ್ತಿದೆಯೇ ಎಂಬಂತೆ ಕಾಣಿಸುವಂತೆ ಭ್ರಮೆ ಮೂಡಿಸುವ ವಾಸ್ತವದಲ್ಲಿ ನೀರಿನ ಪ್ರತಿಬಿಂಬದಲ್ಲಿ ಸೆರೆಹಿಡಿದ ಈ ಚಿತ್ರವೂ ನೋಡುತ್ತಿದ್ದಂತೆಯೇ ತೀರ್ಪುಗಾರರ ಮನಗೆದ್ದಿದೆ.
“ದ ವರ್ಲ್ಡ್ ಈಸ್ ಗೋಯಿಂಗ್ ಅಪ್ ಸೈಡ್ ಡೌನ್" ಎಂಬ ಶೀರ್ಷಿಕೆಯ ಈ ಛಾಯಾಚಿತ್ರವು ಜಗತ್ತಿನೆಲ್ಲೆಡೆಯಿಂದ ಈ ಛಾಯಾಚಿತ್ರ ಸ್ಪರ್ಧೆಗೆ ಬಂದಿದ್ದ 8000ಕ್ಕಿಂತ ಅಧಿಕ ಫೋಟೋಗಳನ್ನು ಹಿಂದಿಕ್ಕಿ ಅಗ್ರ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯ ಜತೆಗೆ ವಿಜಯನ್ ಅವರಿಗೆ 1.5 ಸಾವಿರ ಪೌಂಡ್ ನಗದು ಕೂಡ ಲಭ್ಯವಾಗಿದೆ.
ಥಾಮಸ್ ಅವರ ಛಾಯಾಚಿತ್ರವು ನಿಜಕ್ಕೂ ಅನನ್ಯವಾಗಿದ್ದು, ನೋಡಿದ ಕೂಡಲೇ ತೀರ್ಪುಗಾರರ ಮಂಡಳಿಯ ಗಮನ ಸೆಳೆಯುವಂತಿತ್ತು ಎಂದು ನೇಚರ್ ಟಿಟಿಎಲ್ ನ ಸಂಸ್ಥಾಪಕ ವಿಲ್ ನಿಕೋಲ್ಸ್ ಪ್ರಶಂಸಿಸಿದ್ದಾರೆ.
“ಆಗ್ನೇಯ ಏಷ್ಯಾದಲ್ಲಿ ತಾಳೆ ಎಣ್ಣೆಗಾಗಿ ತಾಳೆಗಿಡಗಳ ತೋಟಗಳನ್ನು ನಿರ್ಮಿಸಲು ಸಾವಿರಾರು ವರ್ಷ ಹಳೆಯ ಮರಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದಾಗಿ ಒರಾಂಗುಟನ್ (ಒಂದು ವಿಧದ ಬಾಲವಿಲ್ಲದ ಕೋತಿ) ಗಳ ಸಂತತಿ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರವು ನನಗೆ ತುಂಬ ಮಹತ್ವದ್ದಾಗಿದೆ” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯನ್ ಹೇಳಿದ್ದಾರೆ.
ಹಳೆಯ ಮರಗಳು ಬಹಳ ಮಹತ್ವದ್ದು. ಎಣ್ಣೆಗೆ ಪರ್ಯಾಯವಾಗಿ ಬಳಸಲು ಮಾನವನಿಗೆ ಬಹಳಷ್ಟು ಆಯ್ಕೆಗಳಿವೆ. ಆದರೆ ಒರಾಂಗುಟನ್ಗಳು ತಮ್ಮ ಸ್ವಾಭಾವಿಕ ವಾಸಸ್ಥಳಗಳಿಗೆ ಪರ್ಯಾಯ ಆಯ್ಕೆಯನ್ನು ಹುಡುಕಲಾರವು. ಅವುಗಳ ಸಂತತಿ ತುಂಬ ವೇಗದಲ್ಲಿ ಕ್ಷೀಣಿಸುತ್ತಿದ್ದು, ಆತಂಕ ಮೂಡಿಸುತ್ತಿದೆ ಎಂದು ಈ ಮರಗಳ ಹಾಗೂ ಪ್ರಾಣಿಗಳ ನಡುವಿನ ಸಂಬಂಧದ ಮಹತ್ವವನ್ನು ವಿಜಯನ್ ವಿವರಿಸುತ್ತಾರೆ.
ಈ ಛಾಯಾಚಿತ್ರ ತೆಗೆದ ಸನ್ನಿವೇಶವನ್ನು ವಿಜಯನ್ ಅವರು ಹೀಗೆ ವಿವರಿಸುತ್ತಾರೆ. “ನಾನು ಬೊರ್ನಿಯೊದಲ್ಲಿ ಕೆಲವು ದಿನಗಳನ್ನು ಕಳೆದ ನಂತರ ನನ್ನ ತಲೆಯಲ್ಲಿ ಒಂದು ಫ್ರೇಮ್ ಹೊಳೆಯಿತು. ನೀರಿನೊಳಗಿನಿಂದ ಮೇಲೆದ್ದಿದ್ದ ಮರಗಳನ್ನು ನಾನು ಆಯ್ಕೆ ಮಾಡಿದೆ. ಕಾರಣ, ಅದರಲ್ಲಿ ಮರಗಳ ಹಾಗೂ ಆಕಾಶದ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನೀರೇ ಕನ್ನಡಿಯಂತಿದ್ದುದರಿಂದ ಅದು ಮೇಲಿನಿಂದ ಕೆಳಗೆ ಫೋಟೋ ತೆಗೆದ ಭ್ರಮೆ ಮೂಡಿಸುತ್ತಿತ್ತು. ಬಳಿಕ ನಾನು ಒಂದು ಮರವನ್ನು ಏರಿ ಗಂಟೆಗಳ ಕಾಲ ಕಾದು ಕುಳಿತೆ. ಕೆಲವು ದಿನಗಳಿಂದ ಅಲ್ಲೇ ಇದ್ದುದರಿಂದ ಒರಾಂಗುಟನ್ ಗಳ ನಿತ್ಯದ ದಾರಿ ನನಗೆ ಗೊತ್ತಿತ್ತು. ಮತ್ತು ತಾಳ್ಮೆಯು ನನಗೆ ಪ್ರತಿಫಲವನ್ನೂ ಕೊಟ್ಟಿತು” ಎಂದು ಹೇಳಿದರು. ವಿಜಯನ್ ಅವರು 8-15 ಎಂಎಂ ಲೆನ್ಸ್ ಜತೆಗೆ ನಿಕಾನ್ ಡಿ850 ಕ್ಯಾಮೆರಾದಲ್ಲಿ ಈ ಚಿತ್ರ ಸೆರೆಹಿಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ