Afghanistan Crisis- ಅಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದ 390 ಮಂದಿ

ಭಾರತೀಯ ನಾಗರಿಕರು

ಭಾರತೀಯ ನಾಗರಿಕರು

ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದ 390 ಮಂದಿಯನ್ನ ಭಾರತಕ್ಕೆ ಕರೆತರಲಾಗಿದೆ. ದುಶಾಂಬೆ, ದೋಹಾ ಹಾಗೂ ಕಾಬೂಲ್ ಏರ್​ಪೋರ್ಟ್​ಗಳಿಂದ ಇವರನ್ನ ಭಾರತೀಯ ಮಿಲಿಟರಿ ವಿಮಾನಗಳ ಮೂಲಕ ದೆಹಲಿಗೆ ಸಾಗಿಸಲಾಗಿದೆ.

 • News18
 • 4-MIN READ
 • Last Updated :
 • Share this:

  ನವದೆಹಲಿ (ಆ. 22): ತಾಲಿಬಾನ್ ಅಧಿಕಾರಕ್ಕೆ ಬರುತ್ತಲೇ ಅಫ್ಘಾನಿಸ್ತಾನದಿಂದ ಹೊರಹೋಗಲು ಸಾವಿರಾರು ಜನರು ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿವೆ. ಭಾರತ ವಿವಿಧ ರೀತಿಯಲ್ಲಿ ತನ್ನ ನಾಗರಿಕರನ್ನ ಅಲ್ಲಿಂದ ತೆರವುಗೊಳಿಸಿ ವಾಪಸ್ ಕರೆಸಿಕೊಳ್ಳುತ್ತದೆ. ನೇಪಾಳದ ಇಬ್ಬರು ನಾಗರಿಕರು ಸೇರಿ 390 ಜನರನ್ನ ಭಾರತದ ಮಿಲಿಟರಿ ವಿಮಾನಗಳು ಆಫ್ಘಾನಿಸ್ತಾನದಿಂದ ಕರೆ ತಂದಿವೆ. ಇವರೆಲ್ಲಾ ದೆಹಲಿ ಬಳಿಯ ಹಿಂದೋನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿಯನ್ನ ಕರೆತರಲಾಗಿದೆ. 135 ಮಂದಿಯನ್ನ ಕತಾರ್​ನ ರಾಜಧಾನಿ ದೋಹಾಗೆ ಸಾಗಿಸಿ ಅಲ್ಲಿಂದ ಭಾರತಕ್ಕೆ ತರಲಾಗಿದೆ. ಇನ್ನು, ಕಾಬೂಲ್​ನಿಂದ ತಜಿಕಿಸ್ತಾನದ ದುಶಾನಬೆಗೆ ಸಾಗಿಸಲಾಗಿದ್ದ 87 ಮಂದಿಯನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇವರೆಲ್ಲರಿಗೂ ವಿಮಾನ ನಿಲ್ದಾಣದಲ್ಲಿ ಆರ್​ಟಿ ಪಿಸಿಆರ್ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಅದರ ರಿಪೋರ್ಟ್ ಬಂದ ಬಳಿಕ ಅವರ ಊರುಗಳಿಗೆ ಕಳುಹಿಸುವ ಸಾಧ್ಯತೆ ಇದೆ.


  ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಪ್ರಜೆಗಳಿಗೂ ಭಾರತಕ್ಕೆ ಬರಲು ಅವಕಾಶ ನೀಡಲಾಗಿದೆ. ಹಲವು ಆಫ್ಘನ್ ಸಿಖ್ ಮತ್ತು ಹಿಂದೂಗಳು ಭಾರತಕ್ಕೆ ಬರಲು ಹಾತೊರೆಯುತ್ತಿದ್ದಾರೆ. ಆದರೆ, ತಾವೆಲ್ಲರೂ ಅಫ್ಘನ್ನರಾಗಿರುವುದಿರಂದ ಭಾರತಕ್ಕೆ ಹೋಗದಿರಿ ಎಂದು ತಾಲಿಬಾನ್ ತಾಕೀತು ಮಾಡುತ್ತಿದೆ.


  ಅಮೆರಿಕ ತನ್ನ ದೇಶದ ನಾಗರಿಕರನ್ನ ಸುರಕ್ಷಿತವಾಗಿ ಕರೆತರಲು ಕಾಬೂಲ್​ನಲ್ಲಿ ತನ್ನ ಕೆಲ ಸೈನಿಕರನ್ನ ನಿಯೋಜಿಸಿದೆ. ಆದರೆ, ಅಫ್ಘಾನಿಸ್ತಾನದ ವಿವಿಧೆಡೆ ಇರುವ ಅಮೆರಿಕನ್ ನಾಗರಿಕರಿಗೆ ಈಗ ಇಸ್ಲಾಮಿಕ್ ಸ್ಟೇಟ್ ಸಂಘಟನೆಯಿಂದ ದಾಳಿ ಆಗುವ ಅಪಾಯ ಇದೆ ಎಂಬ ಮಾಹಿತಿ ಅಮೆರಿಕಕ್ಕೆ ಸಿಕ್ಕಿದೆ. ಅಮೆರಿಕ ಇತರೆ ರಾಷ್ಟ್ರಗಳ ಪ್ರಜೆಗಳ ಸುರಕ್ಷತೆಗಾಗಿ ಅಮೆರಿಕ ಕಾರ್ಯತಂತ್ರ ರೂಪಿಸುತ್ತಿದೆ. ಈ ನಾಗರಿಕರನ್ನ ಕಾಬೂಲ್ ನಗರಕ್ಕೆ ಕರೆತರುವ ಬಗ್ಗೆ ಆಲೋಚನೆ ನಡೆಸಿದೆ.


  ಫ್ರಾನ್ಸ್ ದೇಶ ಕೂಡ ತೆರವು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ. ತನ್ನ ನಾಗರಿಕರನ್ನಷ್ಟೇ ಅಲ್ಲ ಅಫ್ಘಾನಿಸ್ತಾನದಿಂದ ಹೊರಹೋಗಲು ಬಯಸುವ ವ್ಯಕ್ತಿಗಳಿಗೂ ಫ್ರಾನ್ಸ್ ನೆರವಾಗಿದೆ. ಇಲ್ಲಿಯವರೆಗೆ ತಾನು 570ಕ್ಕೂ ಹೆಚ್ಚು ಮಂದಿಯನ್ನ ಅಫ್ಘಾನಿಸ್ತಾನದಿಂದ ಹೊರಗೆ ಕರೆತಂದಿದ್ದೇವೆ. ಇವರಲ್ಲಿ 407 ಮಂದಿ ಅಫ್ಘಾನ್ ನಾಗರಿಕರಿದ್ದಾರೆ ಎಂದು ಫ್ರಾನ್ಸ್ ಹೇಳಿರುವುದಾಗಿ ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


  ಇದನ್ನೂ ಓದಿ: AFC Cup- ಎಎಫ್​​ಸಿ ಕಪ್​ನಿಂದ ಬೆಂಗಳೂರು ಔಟ್; ಕ್ವಾರ್ಟರ್​ಫೈನಲ್ ಅಂಚಿನಲ್ಲಿ ಮೋಹನ್ ಬಗಾನ್


  ಇನ್ನು, ಕಾಬೂಲ್​ನಲ್ಲಿ ತಾಲಿಬಾನಿಗಳ ಕೈಗೆ ಸಿಕ್ಕಿಕೊಂಡಿದ್ದ 150 ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ಧಾರೆ. ಪಾಸ್​ಪೋರ್ಟ್ ಮತ್ತಿತರ ದಾಖಲೆಗಳನ್ನ ಪರಿಶೀಲಿಸಲು ತಾಲಿಬಾನ್ ಈ ಜನರನ್ನ ಪ್ರತ್ಯೇಕ ಸ್ಥಳವೊಂದಕ್ಕೆ ಕರೆದೊಯ್ದಿತ್ತು. ಆರಂಭದಲ್ಲಿ ಇದು ತಾಲಿಬಾನ್​ನಿಂದ ಭಾರತೀಯರ ಅಪಹರಣವಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ದಾಖಲೆಗಳ ಪರಿಶೀಲನೆ ವಿಚಾರ ನಂತರ ತಿಳಿದುಬಂದಿತು. ಈ 150 ಜನರು ಸೇರಿ ಒಟ್ಟು 168 ಜನರು ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತದ ಮಿಲಿಟರಿ ವಿಮಾನದ ಮೂಲಕ ದೆಹಲಿಗೆ ಬಂದಿದ್ದಾರೆ.


  ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕೆಲ ಕನ್ನಡಿಗರು ತವರಿಗೆ ಸುರಕ್ಷಿತವಾಗಿ ಮರಳಿದ್ಧಾರೆ. ಇನ್ನೂ ಹಲವು ಅಲ್ಲಿ ವಿವಿಧೆಡೆ ಸಿಲುಕಿರುವ ಬಗ್ಗೆ ವರದಿಗಳಿವೆ. ಅಫ್ಘಾನಿಸ್ತಾನಕ್ಕೆ ಧರ್ಮಪ್ರಚಾರಕ್ಕೆ ಹೋಗಿ ಸಿಕ್ಕಿಕೊಂಡಿರುವ ಮಂಗಳೂರಿನ ಜೆರೆವೋ ಸಿಕ್ವೇರಾ ಮತ್ತು ತೀರ್ಥಹಳ್ಳಿಯ ರಾಬರ್ಟ್ ಕ್ಲೈವ್ ಅವರು ನೆರವಿಗಾಗಿ ಯಾಚಿಸಿದ್ದಾರೆ. ಇವರಿಬ್ಬರು ಪಾದ್ರಿಗಳನ್ನ ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ನಿನ್ನೆ ಭರವಸೆ ನೀಡಿದ್ದರು. ಇಂದು ದೆಹಲಿಯ ಹಿಂದೋಳ್ ವಿಮಾನ ನಿಲ್ದಾಣಕ್ಕೆ ಇವರು ಬಂದಿಳಿಯುವ ಸಾಧ್ಯತೆ ಇದೆ.


  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು