News18 India World Cup 2019

ಜೂನ್ 17ರಂದು ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರ: ಭಾರತೀಯ ವೈದ್ಯಕೀಯ ಸಂಸ್ಥೆ ಘೋಷಣೆ

ಜೂನ್ 16ರವರೆಗೂ ವೈದ್ಯರ ಸಾಂಕೇತಿಕ ಪ್ರತಿಭಟನೆ ಮುಂದುವರಿಯುತ್ತದೆ; ಜೂನ್ 17ರಂದು ದೇಶವ್ಯಾಪಿ ಮೂರೂವರೆ ಲಕ್ಷಕ್ಕೂ ಅಧಿಕ ವೈದ್ಯರು ಮುಷ್ಕರ ನಡೆಸಲಿದ್ದಾರೆ ಎಂದು ವೈದ್ಯಕೀಯ ಸಂಸ್ಥೆ ತಿಳಿಸಿದೆ.

Vijayasarthy SN | news18
Updated:June 14, 2019, 6:45 PM IST
ಜೂನ್ 17ರಂದು ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರ: ಭಾರತೀಯ ವೈದ್ಯಕೀಯ ಸಂಸ್ಥೆ ಘೋಷಣೆ
ಬೆಂಗಳೂರಿನಲ್ಲಿ ಪ್ರತಿಭಟನಾ ನಿರತ ವೈದ್ಯರು
Vijayasarthy SN | news18
Updated: June 14, 2019, 6:45 PM IST
ನವದೆಹಲಿ(ಜೂನ್ 14): ಕೋಲ್ಕತಾದ ತರಬೇತಿ ವೈದ್ಯರೊಬ್ಬರ ಮೇಲಿನ ಹಲ್ಲೆ ಘಟನೆ ಖಂಡಿಸಿ ದೇಶದ ಹಲವೆಡೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ವೈದ್ಯ ಸಮೂಹದ ಬೆಂಬಲಕ್ಕೆ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ನಿಂತಿದೆ. ಈ ಸಂಬಂಧ ಜೂನ್ 17, ಸೋಮವಾರದಂದು ದೇಶವ್ಯಾಪಿ ಮುಷ್ಕರ ನಡೆಸಲು ಐಎಂಎ ನಿರ್ಧರಿಸಿದೆ. ಇವತ್ತು ನಡೆಯುತ್ತಿರುವ ವೈದ್ಯರ ಪ್ರತಿಭಟನೆಯು ಇನ್ನೂ 2 ದಿನ ಮುಂದುವರಿಯಲಿದೆ ಎಂದೂ ವೈದ್ಯಕೀಯ ಸಂಸ್ಥೆ ತಿಳಿಸಿದೆ.

ಜೂನ್ 17ರಂದು ದೇಶದ ಬಹುತೇಕ ವೈದ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಅಂದು ಬೆಳಗ್ಗೆ 6ಗಂಟೆಯಿಂದ ತುರ್ತು ಸೇವೆಯಂತಹ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬಹುತೇಕ ವೈದ್ಯಕೀಯ ಸೇವೆಗಳು 24 ಗಂಟೆ ಸ್ಥಗಿತಗೊಳ್ಳಲಿವೆ. ಅಂದು ಓಪಿಡಿ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಅಲ್ಲ, ಅಗತ್ಯ ಅಲ್ಲದ ಯಾವುದೇ ವೈದ್ಯಕೀಯ ಸೇವೆಗಳು ಅಂದು ಇರುವುದಿಲ್ಲ. ಅಂದು ನಡೆಯುವ ಬೃಹತ್ ಪ್ರತಿಭಟನೆ ಮತ್ತು ಮುಷ್ಕರದಲ್ಲಿ 3.5 ಲಕ್ಷ ವೈದ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯರ ಪ್ರತಿಭಟನೆ; ಬೆಂಗಳೂರು, ದೆಹಲಿ, ಹೈದರಾಬಾದ್ ಸೇರಿ ಹಲವೆಡೆ ಬೆಂಬಲ, ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

ಇವತ್ತು ಧರಣಿನಿರತ ವೈದ್ಯರಿಗೆ ಬೆಂಬಲ ಸೂಚಕವಾಗಿ ದೇಶದ ಹಲವೆಡೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ತಲೆಗೆ ಹೆಲ್ಮೆಟ್ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಶನಿವಾರ ಮತ್ತು ಭಾನುವಾರವೂ ವೈದ್ಯರ ಈ ಸಾಂಕೇತಿಕ ಪ್ರತಿಭಟನೆಗಳು ಮುಂದುವರಿಯಲಿದೆ ಎಂದು ಐಎಂಎ ತಿಳಿಸಿದೆ.

ಜೂನ್ 10ರಂದು ಕೋಲ್ಕತಾದ ಎನ್​ಆರ್​ಎಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಮೊಹಮ್ಮದ್ ಶಾಹಿದ್ ಎಂಬ ರೋಗಿ ಸಾವನ್ನಪ್ಪಿದ್ದರು. ಇಂಟರ್ನ್ ಡಾಕ್ಟರ್ ಪರಿಬಾಹ ಮುಖ್ಯೋಪಾಧ್ಯಾಯ್ ಅವರ ನಿರ್ಲಕ್ಷದಿಂದಲೇ ಈ ಸಾವಾಗಿದೆ ಎಂದು ಆರೋಪಿಸಿ ರೋಗಿಯ ಕಡೆಯವರು ಅವರ ಮೇಲೆ ಹಲ್ಲೆ ಎಸಗಿದ್ದರು. ಇದರಿಂದ ಈ ಕಿರಿಯ ವೈದ್ಯರ ತಲೆಬುರುಡೆಗೆ ಗಂಭೀರ ಗಾಯವಾಗಿ ಈಗಲೂ ಸಾವು ಬದುಕಿನ ಹೋರಾಟದಲ್ಲಿದ್ದಾರೆ.

ಇದನ್ನು ಓದಿ: 'ಕೆಲಸಕ್ಕೆ ಹಾಜರಾಗಿ, ಇಲ್ಲ.....'; ಪ್ರತಿಭಟನಾನಿರತ ವೈದ್ಯರಿಗೆ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಖಡಕ್​ ಎಚ್ಚರಿಕೆ
Loading...

ಈ ಘಟನೆಯು ವೈದ್ಯ ಸಮೂಹವನ್ನು ಬಡಿದೆಬ್ಬಿಸಿದೆ. ಜನರನ್ನು ಬದುಕಿಸುವ ವೈದ್ಯರ ಮೇಲೆ ಅಪನಂಬಿಕೆ ಹೆಚ್ಚಾಗಿದೆ. ಅವರ ಮೇಲೆ ಹಲ್ಲೆಯಾಗುವ ಘಟನೆಗಳು ಹೆಚ್ಚಾಗಿವೆ. ನಿರ್ಭೀತಿಯಿಂದ ಚಿಕಿತ್ಸೆ ನೀಡುವಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂಬುದು ವೈದ್ಯರ ಅಳಲಾಗಿದೆ. ತಮಗೆ ಸೂಕ್ತ ಭದ್ರತೆ ನೀಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಕೋಲ್ಕತಾದಲ್ಲಿ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು. ಆದರೆ, ವೈದ್ಯರ ಬೇಡಿಕೆಗೆ ಮಮತಾ ಬ್ಯಾನರ್ಜಿ ಇದೂವರೆಗೂ ಮಣಿದಿಲ್ಲ. ಬದಲಾಗಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರವು ವೈದ್ಯರ ಪ್ರತಿಭಟನೆಯ ಹಿಂದೆ ಪಿತೂರಿ ನಡೆಸಿದೆ ಎಂದು ಬಂಗಾಳ ಮುಖ್ಯಮಂತ್ರಿಗಳು ಪ್ರತ್ಯಾರೋಪ ಮಾಡಿದ್ದಾರೆ.

ಇನ್ನು, ಇವತ್ತು ಕೋಲ್ಕತಾದಲ್ಲಿ ಪ್ರತಿಭಟನಾನಿರತ ವೈದ್ಯರ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆಯೂ ಆಗಿದೆ. ಇದರಿಂದ ಕೆಲ ವೈದ್ಯರಿಗೆ ಗಾಯಗಳಾಗಿವೆ. 200ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ಧಾರೆ.

ಇದೇ ವೇಳೆ, ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಭದ್ರತೆ ನಿಯೋಜಿಸಬೇಕೆಂದು ಕೋರಿ ಅಲೋಕ್ ಶ್ರೀವಾಸ್ತವ ಎಂಬ ವಕೀಲರು ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ.
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...