ವಾಷಿಂಗ್ಟನ್: ಖಲಿಸ್ತಾನಿ ಬೆಂಬಲಿಗ (Khalistani Leader) ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕೆ ಪಂಜಾಬ್ ಪೊಲೀಸರು (Punjab Police) ಕಾರ್ಯಾಚರಣೆ ನಡೆಸುತ್ತಿರುವುದನ್ನು ವಿರೋಧಿಸಿ ವಾಷಿಂಗ್ಟನ್ನಲ್ಲಿ (Washington) ಭಾರತೀಯ ಪತ್ರಕರ್ತನ (Indian Journalist) ಮೇಲೆ ಖಲಿಸ್ತಾನಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯ (Indian Embassy) ಹೊರಗೆ ನಡೆಯುತ್ತಿದ್ದ ಪ್ರತಿಭಟನೆಯ ವರದಿಗೆ ತೆರಳಿದ್ದ ಪಿಟಿಐ ವರದಿಗಾರನಿಗೆ ಬೆದರಿಕಿ ಹಾಕಿ, ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದೆ. ಶನಿವಾರ ಈ ಘಟನೆ ನಡೆದಿದ್ದು, ಪಿಟಿಐ ವರದಿಗಾರ ಲಲಿತ್ ಝಾ ಅವರನ್ನು ತಡೆದ ಖಾಲಿಸ್ತಾನಿ ಬೆಂಬಲಿಗರು ಅವಾಚ್ಯವಾಗಿ ನಿಂಧಿಸಿ, ಕೋಲುಗಳಿಂದ ಕಿವಿಗೆ ಹೊಡೆದಿದ್ದಾರೆ. ಲಲಿತ್ ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೊಲೀಸರಿಂದ ರಕ್ಷಣೆ
ಖಲಿಸ್ತಾನಿ ಬೆಂಬಲಿಗರು ನಿಂದಿಸಿ, ಹಲ್ಲೆ ಮಾಡಿದ ನಂತರ ಲಲಿತ್ ಪೊಲೀಸರಿಗೆ ಕರೆ ಮಾಡಿದ್ದಾರೆ, ತಕ್ಷಣ ಅಲ್ಲಿಗೆ ಬಂದ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಹಿರಿಯ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಅಮೆರಿಕಾದ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಇದೇ ಸಂದರ್ಭದಲ್ಲಿ ಖಲಿಸ್ತಾನಿಗಳು ರಾಯಭಾರ ಕಚೇರಿಯನ್ನು ಧ್ವಂಸಗೊಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಲ್ಲದೇ, ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧುಗೂ ಬೆದರಿಕೆ ಹಾಕಿದರೆಂದು ಲಲಿತ್ ಝಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತ ವಿರೋಧಿ ಘೋಷಣೆ
ಖಲಿಸ್ತಾನಿ ಬೆಂಬಲಿಗರು ಟರ್ಬನ್ (ಶಿರವಸ್ತ್ರ) ಧರಿಸಿದ್ದು, ವಯಸ್ಕರಿಂದ ವೃದ್ಧರವರೆಗೆ ಅನೇಕರು ಆಗಮಿಸಿ ಖಲಿಸ್ತಾನ ಪರ ಹಾಗೂ ಭಾರತದ ವಿರುದ್ಧ ಘೋಷಣೆ ಕೂಗಿದರು. ವಾಷಿಂಗ್ಟನ್, ಮೇರಿಲ್ಯಾಂಡ್, ವರ್ಜಿನಿಯಾ ಮುಂತಾದ ಪ್ರದೇಶಗಳಿಂದ ಆಗಮಿಸಿದ್ದ ಅವರು ಇಂಗ್ಲೀಷ್ ಹಾಗೂ ಪಂಜಾಬಿ ಭಾಷೆಯಲ್ಲಿ ಭಾರತದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಪಂಜಾಬ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಪಂಜಾಬ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದ
ವಾಷಿಂಗ್ಟನ್ನಲ್ಲಿ ಖಲಿಸ್ತಾನ್ ಪತ್ರಕರ್ತನನ್ನು ಬೆದರಿಸಿ ನಂತರ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಅವರ ವೈಯಕ್ತಿಕ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಭಯಪಟ್ಟು ಕಾನೂನು ಜಾರಿ ಸಂಸ್ಥೆಗೆ ಕರೆ ಮಾಡಬೇಕಾಯಿತು. ಅಧಿಕಾರಿಗಳು ನಮ್ಮ ಕರೆಗೆ ತಕ್ಷಣವೇ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ ಹೇಳುತ್ತೇವೆ ಎಂದು ಭಾರತ ರಾಯಭಾರ ಕಚೇರಿ ತಿಳಿಸಿದೆ
ಇಂತಹ ಚಟುವಟಿಕೆಗಳು ಖಲಿಸ್ತಾನಿ ಪ್ರತಿಭಟನಾಕಾರರು ಮತ್ತು ಅವರ ಬೆಂಬಲಿಗರ ಹಿಂಸಾತ್ಮಕ ಮತ್ತು ಸಮಾಜ-ವಿರೋಧಿ ಪ್ರವೃತ್ತಿಗಳನ್ನು ಒತ್ತಿ ಹೇಳುತ್ತವೆ. ಅವರು ವಾಡಿಕೆಯಂತೆ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ರಾಯಭಾರ ಕಚೇರಿ ಕಿಡಿ ಕಾರಿದೆ
ಹಲ್ಲೆ ಮಾಡಿದವರ ಮೇಲೆ ಕ್ರಮ ಬೇಡ
ಒಂದು ಹಂತದಲ್ಲಿ ಖಲಿಸ್ತಾನಿ ಬೆಂಬಲಿಗರ ನಡೆ ನೋಡಿ ನಾನು 911ಗೆ ಕರೆ ಮಾಡುವಷ್ಟು ಭಯ ಅನುಭವಿಸಿದ್ದೆ. ನಂತರ ನಾನು ಸೀಕ್ರೇಟ್ ಸರ್ವೀಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ನಡೆದ ಘಟನೆಯನ್ನು ವಿವರಿಸಿದೆ, ಅವರು ನನಗೆ ನೆರವಾದರು ಎಂದು ತಿಳಿಸಿದ್ದಾರೆ. ಆದರೆ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿರುವುದಾಗಿ ಝಾ ತಿಳಿಸಿದ್ದಾರೆ.
ಲಂಡನ್ನಲ್ಲೂ ಪ್ರತಿಭಟನೆ
ಅಮೆರಿಕಾದಲ್ಲಿ ಮಾತ್ರವಲ್ಲದೆ, ಲಂಡನ್ ಪಾರ್ಲಿಮೆಂಟ್ ಸ್ಕ್ವೇರ್ ಬಳಿ ಖಲಿಸ್ತಾನದ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಖಲಿಸ್ತಾನ ಧ್ವಜ ಹಾಗೂ ಬ್ಯಾನರ್ ಹಿಡಿದಿದ್ದ ಪ್ರತಿಭಟನಕಾರರು ಸಿಖ್ ಮೂಲಭೂತವಾದಿ ಅಮೃತ್‌ಪಾಲ್ ಸಿಂಗ್‌ಗೆ ಬೆಂಬಲ ಸೂಚಿಸಿದ್ದಾರೆ. ಸಹೋದರ ಅಮೃತ್‌ಪಾಲ್ ಹಾಗೂ ಸಿಖ್ ಸಮುದಾಯದ ಇತರ ಅಮಾಯಕ ಯುವಕರ ವಿರುದ್ಧ ಭಾರತದ ಪೊಲೀಸರು ಕೈಗೊಂಡಿರುವ ಕ್ರಮವು ತಾರತಮ್ಯದಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಬರೆದಿರುವ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ