ಇಮ್ರಾನ್​ ಖಾನ್​ಗೆ ಭಾರತ​ ತಂಡದಿಂದ ಬ್ಯಾಟ್​ ಗಿಫ್ಟ್​; ಕಾಶ್ಮೀರ ಸಮಸ್ಯೆ ಬಗೆಹರಿಸಲು ಬ್ಯಾಟ್​ ಬೀಸುತ್ತಾರ ಮೋದಿ-ಖಾನ್​?

news18
Updated:August 10, 2018, 7:45 PM IST
ಇಮ್ರಾನ್​ ಖಾನ್​ಗೆ ಭಾರತ​ ತಂಡದಿಂದ ಬ್ಯಾಟ್​ ಗಿಫ್ಟ್​; ಕಾಶ್ಮೀರ ಸಮಸ್ಯೆ ಬಗೆಹರಿಸಲು ಬ್ಯಾಟ್​ ಬೀಸುತ್ತಾರ ಮೋದಿ-ಖಾನ್​?
news18
Updated: August 10, 2018, 7:45 PM IST
- ನ್ಯೂಸ್​ 18 ಕನ್ನಡ

ಕರಾಚಿ (ಆಗಸ್ಟ್​ 10): ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಇಮ್ರಾನ್​ ಖಾನ್​ಗೆ ಭಾರತೀಯ ಕ್ರಿಕೆಟ್​ ತಂಡದ ಆಟಗಾರರ ಸಹಿಯಿರುವ ಬ್ಯಾಟನ್ನು ಗಿಫ್ಟ್​ ನೀಡಲಾಗಿದೆ. ಪಾಕಿಸ್ತಾನದ ಭಾರತ ಹೈ ಕಮೀಷನರ್​ ಅಜಯ್​ ಬಿಸಾರಿಯ ಅವರು ಇಮ್ರಾನ್​ ಖಾನ್​ರನ್ನು ಭೇಟಿ ಮಾಡಿ ಬ್ಯಾಟನ್ನು ಗಿಫ್ಟ್​ ಮಾಡಿದ್ದಾರೆ.

ಸುಮಾರು ಅರ್ಧ ಗಂಟೆಗಳ ಕಾಲ ಇಮ್ರಾನ್​ ಖಾನ್​ ಮತ್ತು ಅಜಯ್​ ಬಿಸಾರಿಯ ಉಬಯ ದೇಶಗಳ ನಡುವಿನ ಸಮಸ್ಯೆಗಳ ಬಗ್ಗೆ ಮತ್ತು ಶಾಂತಿ ಸೌಹಾರ್ದತೆ ಕಾಪಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುದೀರ್ಘವಾದ ಚರ್ಚೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಸಮಸ್ಯೆ, ಉಗ್ರವಾದಿಗಳನ್ನು ಹತ್ತಿಹಾಕಲು ಜಂಟಿ ಕಾರ್ಯಾಚರಣೆ ಮತ್ತು ಎರಡು ದೇಶಗಳ ನಡುವಿನ ಬಾಂಧವ್ಯ ಅಭಿವೃದ್ಧಿ ಬಗ್ಗೆ ಮಾತನಾಡಲಾಗಿದೆ.

ಭಾರತದ ಕ್ರಿಕಟ್​ ತಂಡದ ಆಟಗಾರರ ಸಹಿಯನ್ನು ಬ್ಯಾಟ್​ ಮೇಲೆ ತೆಗೆದುಕೊಂಡು ಗೌರವಪೂರ್ವಕವಾಗಿ ಇಮ್ರಾನ್​ ಖಾನ್​ಗೆ ನೀಡುವ ಮೂಲಕ, ಭಾರತ ಪಾಕಿಸ್ತಾನದ ಜತೆ ಉತ್ತಮ ಬಾಂಧವ್ಯ ಹೊಂದುವ ಇಚ್ಛೆಯನ್ನು ಹೊರಹಾಕಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಕೆಲ ಅಂಶಗಳನ್ನು ಅಜಯ್​ ಬಿಸಾರಿಯ ಅವರಿಗೆ ಇಮ್ರಾನ್​ ಖಾನ್​ ಭೇಟಿ ವೇಳೆ ಪ್ರಸ್ತಾಪಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಬಿಸಾರಿಯ ಮಾತನಾಡಿದ್ದಾರೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಎರಡೂ ದೇಶಗಳೂ ಒಂದಾಗಿ ಕೆಲಸ ಮಾಡುವ ಪ್ರಸ್ತಾವವನ್ನೂ ಬಿಸಾರಿಯ ಮಾಡಿದ್ದಾರೆನ್ನಲಾಗಿದೆ.

ಈ ಹಿಂದೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಇಮ್ರಾನ್​ ಖಾನ್​ರ ಪಾಕಿಸ್ತಾನ ತೆಹ್ರೀಕ್​ ಇ ಇನ್ಸಾಫ್​ ಹೊರಹೊಮ್ಮಿದ ನಂತರ ಪತ್ರಿಕಾಗೋಷ್ಠಿ ಮಾಡಿದ್ದರು. ಕಾಶ್ಮೀರ ಸಮಸ್ಯೆ ಬಗೆಹರಿಸಲು ಭಾರತ ಒಂದು ಹೆಜ್ಜೆ ಮುಂದರೆ ಪಾಕಿಸ್ತಾನವೂ ಬರಲಿದೆ ಎಂಬ ಹೇಳಿಕೆ ನೀಡಿದ್ದರು. ಜತೆಗೆ ಕಾಶ್ಮೀರ ಸಮಸ್ಯೆ ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರಯತ್ನಿಸಬೇಕು, ಒಬ್ಬರನ್ನೊಬ್ಬರು ದೂಷಿಸಿಸುತ್ತ ಕುಳಿತರೆ ಸಮಸ್ಯೆ ಹೆಚ್ಚಾಗುತ್ತದೆಯೇ ಹೊರತು ಇನ್ನೇನು ಆಗುವುದಿಲ್ಲ ಎಂದಿದ್ದರು.

ಈಗ ಭಾರತೀಯ ಹೈ ಕಮೀಷನರ್​ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟಿದೆ. ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಮ್ರಾನ್​ ಖಾನ್​ ಕೂಡ ಒಂದು ಹೆಜ್ಜೆ ಮುಂದೆ ಇಡುತ್ತಾರ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಒಂದು ಕಡೆಗಾದರೆ, ಪ್ರತ್ಯೇಕಾವಾದಿಗಳಿಂದ ಸೇನೆಯ ಮೇಲೆ ದಾಳಿಗಳಾಗುತ್ತಿವೆ ಎಂಬ ಆರೋಪ ಇನ್ನೊಂದು ಕಡೆಗೆ. ಒಟ್ಟಿನಲ್ಲಿ ಎರಡೂ ದೇಶಗಳು ಈಗಲಾದರೂ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ತೋರಿಸಿದರೆ ಭಾರತ - ಪಾಕಿಸ್ತಾನದ ಗಡಿ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆಯಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ