ಭಾರತದ ಆರ್ಥಿಕತೆ ನಿರೀಕ್ಷಿತ ಚೇತರಿಕೆ ಇಲ್ಲ; ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5 ಕುಸಿತ

ತಯಾರಿಕಾ ಕ್ಷೇತ್ರ

ತಯಾರಿಕಾ ಕ್ಷೇತ್ರ

ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕಳೆದ ವರ್ಷದಕ್ಕಿಂತ ಶೇ. 7.5ರಷ್ಟು ಆರ್ಥಿಕ ಕುಸಿತ ಕಂಡಿದೆ. ಇದರೊಂದಿಗೆ ಭಾರತ ತಾಂತ್ರಿಕವಾಗಿ ಆರ್ಥಿಕ ಹಿಂಜರಿತದ ಹಂತಕ್ಕೆ ಪ್ರವೇಶಿಸಿದೆ.

  • News18
  • 3-MIN READ
  • Last Updated :
  • Share this:

ನವದೆಹಲಿ(ನ. 28): ಕೊರೋನಾ ವೈರಸ್​ನಿಂದ ನಲುಗಿಹೋಗಿರುವ ಭಾರತ ಆರ್ಥಿಕ ವಿಚಾರದಲ್ಲಿ ಬೇರೆಲ್ಲಾ ಪ್ರಮುಖ ರಾಷ್ಟ್ರಗಳಿಗಿಂತ ಹೆಚ್ಚು ಹಿನ್ನಡೆ ಅನುಭವಿಸುತ್ತಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಭಾರೀ ಕುಸಿತ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿದ್ದುದಕ್ಕಿಂತ ಈ ಬಾರಿ ಶೇ. 7.5ರಷ್ಟು ಜಿಡಿಪಿ ಇಳಿಕೆ ಕಂಡಿದೆ. ಇದಕ್ಕೂ ಮುಂಚಿನ ತ್ರೈಮಾಸಿಕದಲ್ಲಿ, ಅಂದರೆ ಏಪ್ರಿಲ್​ನಿಂದ ಜೂನ್ ತಿಂಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ 23.9ರಷ್ಟು ಕುಸಿತ ಕಂಡಿತ್ತು. ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಕುಸಿತ ಕಾಣುವ ಮೂಲಕ ಭಾರತದ ಆರ್ಥಿಕತೆ ತಾಂತ್ರಿಕ ಹಿಂಜರಿತದ ಹಂತ ಪ್ರವೇಶಿಸಿದೆ. ಸ್ವಾತಂತ್ರ್ಯೋತ್ತರದಲ್ಲಿ ಭಾರತಕ್ಕೆ ಇಂಥ ಸ್ಥಿತಿ ಬಂದಿರುವುದು ಇದೇ ಮೊದಲಾಗಿದೆ. ಆದರೆ, ಸಮಾಧಾನದ ವಿಷಯವೆಂದರೆ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಆರ್ಥಿಕತೆ ಚೇತರಿಕೆ ಕಂಡಿದೆ.


ಚೀನಾದಂಥ ಕೆಲವೇ ಕೆಲ ದೇಶಗಳನ್ನ ಹೊರತುಪಡಿಸಿ ಬಹುತೇಕ ದೇಶಗಳ ಆರ್ಥಿಕತೆ ಹಿನ್ನಡೆ ಕಂಡಿದೆ. ಆದರೆ, ಎಲ್ಲ ಪ್ರಮುಖ ದೇಶಗಳಿಗೆ ಹೋಲಿಸಿದರೆ ಹೆಚ್ಚು ಹೊಡೆತ ಕಂಡಿರುವುದು ಭಾರತವೇ. ಜುಲೈ-ಸೆಪ್ಟೆಂಬರ್​ನ ತ್ರೈಮಾಸಿಕ ಅವಧಿಯಲ್ಲಿ ಚೀನಾ ಶೇ. 4.9 ರಷ್ಟು ಆರ್ಥಿಕ ಬೆಳವಣಿಗೆ ಕಂಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದ ರಾಷ್ಟ್ರಗಳು ಕೂಡ ಆರ್ಥಿಕವಾಗಿ ಬೆಳವಣಿಗೆ ಸಾಧಿಸಿವೆ. ಕೊರೋನಾದಿಂದ ಅತಿ ಹೆಚ್ಚು ಜರ್ಝರಿತಗೊಂಡಿದ್ದ ಅಮೆರಿಕ ಸೇರಿದಂತೆ ಜಪಾನ್ ಮತ್ತು ಜರ್ಮನಿ ದೇಶಗಳು ಕೂಡ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಭಾರತವೂ ಚೇತರಿಸಿಕೊಂಡಿರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿ ದೇಶದಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿ ಸೃಷ್ಟಿಯಾಗಿದೆ.


ಇದನ್ನೂ ಓದಿ: ಹೋರಾಟ ನಿಲ್ಲಿಸಿ ಮಾತುಕತೆಗೆ ಬನ್ನಿ; ದೆಹಲಿಗೆ ಲಗ್ಗೆ ಇಟ್ಟಿರುವ ರೈತರಿಗೆ ಕರೆ ನೀಡಿದ ಕೃಷಿ ಸಚಿವ ತೋಮರ್


ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಭಾರತದ ಆರ್ಥಿಕತೆ ವೇಗವಾಗಿ ಲಯಕ್ಕೆ ಬರುವ ನಿರೀಕ್ಷೆ ಸಹಜವಾಗಿ ಇತ್ತು. ಬಹುತೇಕ ಮಾರುಕಟ್ಟೆಗಳು ತೆರೆದವು, ಕಾರ್ಖಾನೆ, ಕಚೇರಿಗಳು ಪುನಾರಂಭಗೊಂಡು. ಹಬ್ಬದ ಸೀಸನ್ ಬಂದು ಜನರು ಯಥಾಪ್ರಕಾರ ಖರೀದಿಗೆ ಮುಂದಾದರು. ಆರ್ಥಿಕತೆ ಮತ್ತೆ ಮಾಮೂಲಿಯ ಸ್ಥಿತಿಗೆ ಮರಳಿದೆ ಎಂದು ಮೇಲ್ನೋಟಕ್ಕೆ ಇದು ಸೂಚಿಸಿತ್ತು. ಆದರೆ, ಕಟ್ಟಡ ನಿರ್ಮಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರ ಮಾತ್ರ ಚೇತರಿಸಿಕೊಳ್ಳಲಿಲ್ಲ. ಇದು ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಹಿನ್ನಡೆ ಆಗಲು ಪ್ರಮುಖ ಕಾರಣವೆನ್ನಲಾಗಿದೆ.


ಇನ್ನು, ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಒಟ್ಟಾರೆಯಾಗಿ ಶೇ. 9.5ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಆರ್​ಬಿಐ ಅಭಿಪ್ರಾಯಪಟ್ಟಿದೆ. ವಿಶ್ವದ ಅನೇಕ ಹಣಕಾಸು ವಿಶ್ಲೇಷಕ ಸಂಸ್ಥೆಗಳು ಇದಕ್ಕಿಂತ ಕೆಟ್ಟ ಸ್ಥಿತಿಯ ಅಂದಾಜು ಮಾಡಿವೆ. ಐಎಂಎಫ್ ಪ್ರಕಾರ ಭಾರತದ ಜಿಡಿಪಿ 2020ರ ವರ್ಷದಲ್ಲಿ ಶೇ. 10.3ರಷ್ಟು ಇಳಿಕೆ ಕಾಣಬಹುದು ಎಂದು ಅಭಿಪ್ರಾಯಪಟ್ಟಿದೆ. ಆಕ್ಸ್​ಫರ್ಡ್ ಎಕನಾಮಿಕ್ಸ್ ಸಂಸ್ಥೆಯ ಪ್ರಕಾರ 2025ರವರೆಗೂ ಭಾರತದ ಆರ್ಥಿಕತೆ ಶೋಚನೀಯ ಸ್ಥಿತಿಯಲ್ಲೇ ಮುಂದುವರಿಯುವ ಸಾಧ್ಯತೆ ಇದೆಯಂತೆ.

First published: