HOME » NEWS » National-international » INDIAN DOCTOR MOM BECOME BODYBUILDER INSPIRING STORY OF MAYA RATHOD KVD

ವೈದ್ಯೆ, ತಾಯಿ ಆಗಿರುವವಳಿಗೆ ಬಾಡಿ ಬಿಲ್ಡಿಂಗ್ ಏಕೆ ಎಂದು ಅತ್ತೆ-ಮಾವ ಕೊಂಕು ಮಾತಾಡಿದ್ದರು, ಆದರೆ ಈಗ..

ಹೆತ್ತವರು ಬೇಡಮ್ಮ ನೀನು ಹೆಣ್ಣು ಮಗು. ಬಿದ್ದು ಗಾಯ ಮಾಡಿಕೊಂಡರೆ ಮುಂದೆ ನಿನ್ನನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರಂತೆ.

Kavya V | news18-kannada
Updated:June 10, 2021, 8:09 PM IST
ವೈದ್ಯೆ, ತಾಯಿ ಆಗಿರುವವಳಿಗೆ ಬಾಡಿ ಬಿಲ್ಡಿಂಗ್ ಏಕೆ ಎಂದು ಅತ್ತೆ-ಮಾವ ಕೊಂಕು ಮಾತಾಡಿದ್ದರು, ಆದರೆ ಈಗ..
ಬಾಡಿ ಬಿಲ್ಡರ್​​ ಡಾ.ಮಾಯಾ
  • Share this:
ಅದೆಷ್ಟೋ ಕನಸುಗಳು ಯಾರಾದರು ಏನಾದರೂ ಅಂದುಕೊಳ್ಳುತ್ತಾರೆ ಎಂಬ ಒಂದೇ ಹೆದರಿಕೆಗೆ ಬಲಿಯಾಗುತ್ತವೆ. ಸಮಾಜ ಏನು ಅಂದುಕೊಳ್ಳುತ್ತೋ ಅನ್ನೋ ಚೌಕಟ್ಟಿನಲ್ಲೇ ಪ್ರತಿಭೆಗಳು ಕಮರಿ ಹೋಗುತ್ತವೆ. ಆದರೆ ಇನ್ನು ಕೆಲವರು ಆ ಚೌಕಟ್ಟುಗಳನ್ನು ಮೀರಿ ಅಸಾಧಾರಣವಾದದ್ದನ್ನು ಸಾಧಿಸಿ ತೋರಿಸುತ್ತಾರೆ. ಡಾ. ಮಾಯಾ ರಾಥೋಡ್​​ ಕೂಡ ಅಂತವರ ಸಾಲಿನಲ್ಲಿ ನಿಲ್ಲುವ ಅಸಾಧಾರಣ ಪ್ರತಿಭೆ. ಲಿಂಗ ತಾರತಮ್ಯವನ್ನು ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಧಕಿ. ಗಂಡನಿಗೆ ಹೆಂಡತಿಯಾಗಿ, ಮಕ್ಕಳಿಗೆ ಅಮ್ಮನಾಗಿ, ವೃತ್ತಿಯಲ್ಲಿ ವೈದ್ಯೆಯಾಗಿದ್ದಾಕೆ ತಾನು ಇನ್ನೂ ಏನೋ ಆಗಬಲ್ಲೆ ಎಂಬುವುದನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಕೊಂಕು ಮಾತುಗಳನ್ನು ಮೀರಿ ಮಹಾತ್ವಾಕಾಂಕ್ಷೆ ಮೆರೆದ ಮಾಯಾರ ಕಥೆ ಎಂಥವರಿಗೂ ಸ್ಪೂರ್ತಿ.

ಮಾಯಾರಿಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇತ್ತು. ಆದರೆ ಹೆತ್ತವರು ಬೇಡಮ್ಮ ನೀನು ಹೆಣ್ಣು ಮಗು. ಬಿದ್ದು ಗಾಯ ಮಾಡಿಕೊಂಡರೆ ಮುಂದೆ ನಿನ್ನನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರಂತೆ. ಭರತನಾಟ್ಯಕ್ಕೆ ಸೇರಿಕೊ ಎಂದರೆ ಮಾಯಾರ ಮನಸ್ಸು ಕ್ರಿಕೆಟ್​ನತ್ತಲೇ ವಾಲಿತ್ತು. ಆದರೆ ತಂದೆ-ತಾಯಿಗೆ ವಿಧೇಯಳಾಗಿದ್ದ ಮಾಯಾ ಅವರು ಪೋಷಕರ ಕನಸಿನಂತೆ ಓದಿ ಡಾಕ್ಟರ್​ ಆಗಿದ್ದರು. ಗೈನಕಾಲಜಿಸ್ಟ್​​ ಆಗಿದ್ದ ಮಾಯಾ ಅಪ್ಪ-ಅಮ್ಮ ತೋರಿಸಿದವರನ್ನೇ ಮದುವೆಯಾದರು. ಮುದ್ದಾದ ಮಗುವಿನ ತಾಯಿ ಕೂಡ ಆದರು.

ಮಗು ಜನಿಸಿದ ಬಳಿಕ ಮಾಯಾರ ದೇಹದ ತೂಕ ಹೆಚ್ಚಾಗಿತ್ತು. ದಪ್ಪಗಾಗಿದ್ದರಿಂದ ಖಿನ್ನತೆಗೊಳಗಾಗಿದ್ದರು ಮಾಯಾ. ಇದು ನಾನಲ್ಲ, ಈ ದಢೂತಿ ದೇಹ ನನ್ನದಲ್ಲ ಅನಿಸತೊಡಗಿತ್ತು. ಗೆಳತಿಯೊಬ್ಬರ ಸಲಹೆಯಂತೆ ಮಾಯಾ ಜಿಮ್​​ಗೆ ಸೇರಿಕೊಂಡರು. ಇನ್ನಿಲ್ಲದ ಶ್ರದ್ಧೆಯಿಂದ ಕಸರತ್ತು ಮಾಡಿ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದರು. ವ್ಯಾಯಾಮದಲ್ಲಿ ಮಾಯಾರಿಗಿದ್ದ ಆಸಕ್ತಿ ಕಂಡ ಜಿಮ್​ ಟ್ರೈನರ್​ ನೀವೇಕೆ ಬಾಡಿ ಬಿಲ್ಡರ್​ ಆಗಬಾರದು ಎಂದು ಸಲಹೆ ನೀಡಿದ್ದರು.ಜೀವನದಲ್ಲಿ ಬೇರೆ ಏನ್ನನಾದರೂ ಮಾಡುವ ಬಯಕೆ  ಹೊಂದಿದ್ದ ಮಾಯಾ ಬಾಡಿ ಬಿಲ್ಡಿಂಗ್​ ಮಾಡಲು ಸಮ್ಮತಿ ಸೂಚಿಸಿದ್ದರು. ಆದರೆ ವೈದ್ಯೆ, ಒಂದು ಮಗುವಿನ ತಾಯಿ ಆಗಿರುವ ನಿನಗೆ ಬಾಡಿ ಬಿಲ್ಡಿಂಗ್​ ಏಕೆ ಅಂದಿದ್ದರಂತೆ ಅತ್ತೆ-ಮಾವ. ತಂದೆ, ತಾಯಿ ಕೂಡ ಈಗ ಬೇಡಮ್ಮ, ಅದೆಲ್ಲಾ ಗಂಡ-ಮಕ್ಕಳಿರುವವರಿಗಲ್ಲ ಎಂದಿದ್ದರಂತೆ. ಆದರೆ ಮಾಯಾರ ಪತಿ ಬೆಂಬಲಕ್ಕೆ ನಿಂತಿದ್ದರು. ನಿನ್ನ ಜೀವನವನ್ನು ನೀನು ಬಯಸಿದಂತೆ ರೂಪಿಸಿಕೊಳ್ಳುವ ಹಕ್ಕು ನಿನಗಿದೆ ಎಂದು ಧೈರ್ಯ ತುಂಬಿದ್ದರಂತೆ.

ಪತಿಯ ಬೆಂಬಲದೊಂದಿಗೆ ಬಾಡಿ ಬಿಲ್ಡಿಂಗ್​ ಶುರು ಮಾಡಿದ ಡಾ.ಮಾಯಾ ದಿನಗಳು ಉರುಳಿದಂತೆ ಅದ್ಭುತ ಬಾಡಿ ಬಿಲ್ಡರ್​​ ಆಗಿ ರೂಪುಗೊಂಡರು. ಪಿಎಚ್​ಡಿಗಾಗಿ ಸಿಡ್ನಿಗೆ ಹೋಗಿದ್ದಾಗ ಬಾಡಿ ಬಿಲ್ಡಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಳೆದ 25 ವರ್ಷದಿಂದ ಯಾರೊಬ್ಬ ಭಾರತದ ಮಹಿಳೆಯೂ ಈ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲವಂತೆ. ಹಗಲಿರುಳು ಕಸರತ್ತು ಮಾಡಿದ ಮಾಯಾ IFFB 2021 Australasian Championship ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇಡೀ ಭಾರತವೇ ಸಿಡ್ನಿಯಲ್ಲಿ ಭಾರತದ ಪತಾಕೆ ಹಾರಿಸಿದ ಮಾಯಾರನ್ನು ಬೆರಗು ಕಂಗಳಿಂದ ನೋಡಿತ್ತು.

ವೈದ್ಯೆ, ತಾಯಿಯಾಗಿ, ಗೃಹಿಣಿಯಾಗಿದ್ದರೂ ಬಾಡಿ ಬಿಲ್ಡಿಂಗ್​ ಮಾಡಬಹುದು ಎಂದು ತೋರಿಸಿಕೊಟ್ಟಿದ್ದರು. ಭಾರತದ ಗೃಹಿಣಿಯರಿಗೆ ಇರುವ ತಾಕತ್ತು ಎಂತಹದ್ದು ಎಂದು ಇಡೀ ವಿಶ್ವಕ್ಕೆ ಸಾರಿದ್ದರು. 30 ವರ್ಷಕ್ಕೆ ಮಾಯಾ ಅಸಾಧಾರಣ ಸಾಧನೆ ಮಾಡಿದ್ದಾರೆ. ಇದು ಹುಡುಗರಿಗೆ ಮಾತ್ರ, ಇದು ಹುಡುಗಿಯರಿಗಲ್ಲ ಎಂಬ ಮಾತಿಗೆ ಸೆಡ್ಡು ಹೊಡೆದಿದ್ದಾರೆ. ಇಂದಿಗೂ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಮಾಯಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಬಾಡಿ ಬಿಲ್ಡಿಂಗ್​ ಮುಂದುವರೆಸಿದ್ದಾರೆ. ಆಸ್ಪತ್ರೆ ಕೆಲಸ, ಮನೆ-ಮಕ್ಕಳ ಜೊತೆ ಜೊತೆಗೆ ಮಧ್ಯರಾತ್ರಿಯೂ ಜಿಮ್​ಗೆ ಹೋಗುವುದನ್ನು ತಪ್ಪಿಸಲ್ವಂತೆ ಮಾಯಾ. ಅದೆಷ್ಟೋ ಕನಸುಗಳನ್ನು ಹೊತ್ತ ಹೆಣ್ಣು ಮಕ್ಕಳಿಗೆ ಮಾಯಾ ನಿಜಕ್ಕೂ ಸ್ಪೂರ್ತಿ.
Published by: Kavya V
First published: June 10, 2021, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories