• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Eco Friendly Wedding: ಆಡಂಬರವಿಲ್ಲ, ಹೆಚ್ಚು ಖರ್ಚಿಲ್ಲ, ಪರಿಸರ ಸ್ನೇಹಿಯಾಗಿ ನಡೆಯಿತು ಮದುವೆ! ಹೇಗಿತ್ತು ಗೊತ್ತಾ ಪರಿಸರ ಪ್ರೇಮಿಗಳ ಇಕೋ-ಫ್ರೆಂಡ್ಲಿ ಕಲ್ಯಾಣ?

Eco Friendly Wedding: ಆಡಂಬರವಿಲ್ಲ, ಹೆಚ್ಚು ಖರ್ಚಿಲ್ಲ, ಪರಿಸರ ಸ್ನೇಹಿಯಾಗಿ ನಡೆಯಿತು ಮದುವೆ! ಹೇಗಿತ್ತು ಗೊತ್ತಾ ಪರಿಸರ ಪ್ರೇಮಿಗಳ ಇಕೋ-ಫ್ರೆಂಡ್ಲಿ ಕಲ್ಯಾಣ?

ನೂಪುರ್ ಹಾಗೂ ಅಶ್ವಿನ್

ನೂಪುರ್ ಹಾಗೂ ಅಶ್ವಿನ್

ಪರಿಸರ ಪ್ರೇಮಿಗಳಿಬ್ಬರೂ ನಿಸರ್ಗ ಸ್ನೇಹಿ ವಿವಾಹವಾಗಲು 2019 ರಲ್ಲಿ ನಿಶ್ಚಯಿಸಿದರು ಹಾಗೂ ತಮ್ಮ ವಿವಾಹ ಆದಷ್ಟು ಹಿತಮಿತವಾಗಿರಬೇಕು ಹೆಚ್ಚಿನ ಖರ್ಚುಗಳಿಂದ ಮುಕ್ತವಾಗಿರಬೇಕೆಂದೇ ಆಶಿಸಿದ್ದರು. ಅದರಂತೆ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  • Trending Desk
  • 3-MIN READ
  • Last Updated :
  • New Delhi, India
  • Share this:

ಇಂದು ವಿವಾಹಗಳು (Marriage) ಪ್ರತಿಷ್ಠೆಯ ವಿಷಯವಾಗಿ ಮಾರ್ಪಡುತ್ತಿದೆ. ಎಷ್ಟು ಕೋಟಿ ಖರ್ಚುಮಾಡಿ ವಿವಾಹ ನಡೆಸಲಾಗಿದೆ? ಬಂದ ಅತಿಥಿಗಳೆಷ್ಟು? ವಿವಾಹದಲ್ಲಿ ಏನೆಲ್ಲಾ ಮನರಂಜನೆಗಳಿತ್ತು? ಏರ್ಪಡಿಸಿದ್ದ ತರಾವರಿ ಆಹಾರ ಖಾದ್ಯಗಳೆಷ್ಟು (Variety Food) ಹೀಗೆ ವಿವಾಹ ಎಂಬುದು ಮೇಲುಗೈ ಸಾಧಿಸುವ ಉತ್ಸವವೆಂಬಂತೆ ಆಗಿದೆ. ವಿವಾಹವೇನೋ ವಿಜೃಂಭಣೆಯಿಂದ ನಡೆಯುತ್ತದೆ ಆದರೆ ತದನಂತರ ರಾಶಿ, ರಾಶಿಯಾಗುವ ಕಸಕಡ್ಡಿಗಳು, ತ್ಯಾಜ್ಯಗಳು (Garbage) ಇದರ ಲೆಕ್ಕವಿಟ್ಟವರು ಎಷ್ಟು ಜನ ಹೇಳಿ? ಇಂದು ವಿವಾಹ ಮನೆಗಳಲ್ಲಿ (Marriage Hall) ಉಳಿದು ಹೋಗುವ ಆಹಾರಗಳು ಅದೆಷ್ಟೋ ಬಡವರ ಹೊಟ್ಟೆ ತುಂಬಿಸಬಹುದು. ಆದರೂ ವಿವಾಹದ ಮನೆಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪೋಲು ನಡೆಯುತ್ತಲೇ ಇರುತ್ತದೆ.


ಪರಸರ ಸ್ನೇಹಿ ವಿವಾಹಕ್ಕೆ ಮುನ್ನುಡಿ ಬರೆದ ಜೋಡಿಗಳು


ಇಂತಹ ವಿವಾಹಗಳಿಗೆ ಪೂರ್ಣ ವಿರಾಮ ಹಾಕಲೆಂದೇ ನೂಪುರ್ ಹಾಗೂ ಅಶ್ವಿನ್ ಪರಿಸರ ಸ್ನೇಹಿ ವಿವಾಹಕ್ಕೆ ಮುಂದಾದರು. ಪಶ್ಚಿಮ ಬಂಗಾಳದ ನೂಪುರ್ ಅಗರ್ವಾಲ್ ಹಾಗೂ ಮಹಾರಾಷ್ಟ್ರದ ಅಶ್ವಿನ್ ಮಾಲ್ವಾಡೇ ಇಬ್ಬರೂ ಕೂಡ ಪರಿಸರ ಪ್ರೇಮಿಗಳು ಹಾಗೂ ತಮ್ಮ ರಜಾದಿನಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಹೀಗೆ ಇವರಿಬ್ಬರೂ ಮುಂಬೈಯ ಕಡಲ ತೀರ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಭೇಟಿಯಾದರು. ಅಂತೆಯೇ ಇಬ್ಬರೂ ಪರಿಸರ ಪ್ರೇಮಿಗಳಾದ್ದರಿಂದ ಬಾಂಧವ್ಯ ಕೂಡ ಬೆಳೆಯಿತು.


ನೂಪುರ್ ಹಾಗೂ ಅಶ್ವಿನ್


ಖರ್ಚಿಲ್ಲದ ಮಿತವ್ಯಯದ ವಿವಾಹ


ಪರಿಸರ ಪ್ರೇಮಿಗಳಿಬ್ಬರೂ ನಿಸರ್ಗ ಸ್ನೇಹಿ ವಿವಾಹವಾಗಲು 2019 ರಲ್ಲಿ ನಿಶ್ಚಯಿಸಿದರು ಹಾಗೂ ತಮ್ಮ ವಿವಾಹ ಆದಷ್ಟು ಹಿತಮಿತವಾಗಿರಬೇಕು ಹೆಚ್ಚಿನ ಖರ್ಚುಗಳಿಂದ ಮುಕ್ತವಾಗಿರಬೇಕೆಂದೇ ಆಶಿಸಿ ಅಂತೆಯೇ ಯೋಜನೆ ಮಾಡಿದರು. ಸಂದರ್ಶನವೊಂದರಲ್ಲಿ ವಿವಾಹದ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ನೂಪುರ್, ನಾವು ಕಡಲಿನಿಂದ ತ್ಯಾಜ್ಯವನ್ನು ಹೊರತೆಗೆಯುತ್ತಿದ್ದಾಗ, ಅಂತಹುದೇ ಕಸವನ್ನು ನಾವು ಮಾಡಬಾರದು ಎಂಬುದಾಗಿ ಸಂಕಲ್ಪ ಮಾಡಿಕೊಂಡೆವು ಎಂದು ನೂಪುರ್ ಹೇಳಿದ್ದಾರೆ.


ತಮ್ಮದೇ ವಿವಾಹವನ್ನು ತಾವೇ ಪ್ಲಾನ್ ಮಾಡಿಕೊಂಡ ನೂಪುರ್ ಹಾಗೂ ಅಶ್ವಿನ್


ಆದರೆ ತಮಗೆ ಬೇಕಾದ ವಿವಾಹ ಆಯೋಜನೆಗೆ ಯಾರೂ ಮುಂದಾಗದೇ ಇದ್ದಾಗ ನೂಪುರ್ ಹಾಗೂ ಅಶ್ವಿನ್ ತಮ್ಮದೇ ವಿವಾಹವನ್ನು ತಾವೇ ಆಯೋಜಿಸಿಕೊಂಡರು. ಅವರು ಕಡಿಮೆ ಖರ್ಚಿನಲ್ಲಿ ಹೇಗೆ ವಿವಾಹದ ತಯಾರಿ ಮಾಡಿಕೊಂಡರು ಎಂಬುದನ್ನು ತಿಳಿದುಕೊಳ್ಳೋಣ


ನೂಪುರ್ ಹಾಗೂ ಅಶ್ವಿನ್


ಜೋಡಿಗಳು ವಿವಾಹವನ್ನು ಹೇಗೆ ಪ್ಲಾನ್ ಮಾಡಿಕೊಂಡರು?


ತಮ್ಮ ವಿವಾಹದ ದಿರಿಸುಗಳಲ್ಲಿ ಪರಿಸರ-ಸ್ನೇಹಿ ಹ್ಯಾಶ್‌ಟ್ಯಾಗ್‌ಗಳನ್ನು ಎಂಬ್ರಾಯಿಡರಿಯಿಂದ ಜೋಡಿಗಳು ಮಾಡಿಸಿಕೊಂಡರು ಇದರಿಂದ ವಿವಾಹಕ್ಕೆ ಬಂದವರನ್ನಾದರೂ ಪರಿಸರ ಸಂರಕ್ಷಣೆಯತ್ತ ಪ್ರೇರಿತರಾಗಿರಬಹುದು ಎಂಬುದು ಅವರ ಯೋಜನೆಯಾಗಿತ್ತು. ಇನ್ನು ಮದುಮಗ ತನ್ನ ವಿವಾಹದ ದಿಬ್ಬಣ (ಬಾರಾತ್) ಕ್ಕಾಗಿ ವೈಭವದ ಕಾರನ್ನು ಬಳಸದೇ ಇಲೆಕ್ಟ್ರಿಕ್ ವಾಹನವನ್ನೇ ಆಯ್ದುಕೊಂಡರು. ಇದರಿಂದ ಕಾರ್ಬನ್ ಪರಿಣಾಮ ತಗ್ಗಿಸಬಹುದು ಎಂಬುದು ಅವರ ಯೋಜನೆಯಾಗಿತ್ತು


ಒಬ್ಬೊಬ್ಬ ಅತಿಥಿಗಳಿಗಾಗಿ ಒಂದೊಂದು ಗಿಡ


ನೂಪುರ್ ಹಾಗೂ ಅಶ್ವಿನ್ ತಮ್ಮ ಸಂಬಂಧಿಕರಲ್ಲಿ ವಿಮಾನದ ಬದಲಿಗೆ ರೈಲು ಪ್ರಯಾಣ ಮಾಡುವಂತೆ ವಿನಂತಿಸಿಕೊಂಡರು ಹಾಗೂ ಪ್ರತಿ ಅತಿಥಿಗಳಿಗಾಗಿ ಒಂದೊಂದು ಗಿಡ ನೆಡುವ ಸಂಕಲ್ಪ ತೊಟ್ಟರು. ಊಟೋಪಚಾರದ ವಿಷಯದಲ್ಲಿ ಕೂಡ ಪರಿಸರಕ್ಕೆ ಹಾನಿಕಾರಕವಲ್ಲದ ರೀತಿಯಲ್ಲಿಯೇ ಜೋಡಿಗಳು ವ್ಯವಸ್ಥೆಗಳನ್ನು ಮಾಡಿದ್ದು, ಮಿತದರದ ನಿಸರ್ಗ ಸ್ನೇಹಿ ಕ್ಯಾಟರಿಂಗ್ ವ್ಯವಸ್ಥೆಯನ್ನು ಆಯೋಜಿಸಿದರು ಹಾಗೂ ಮಣ್ಣಿನ ಪ್ಲೇಟ್‌ಗಳನ್ನು ಹಾಗೂ ಕಪ್‌ಗಳನ್ನು ಬಳಸಿದರು ಅಂತೆಯೇ ಜೈವಿಕ ವಿಘಟನೀಯ ಚಮಚ ಹಾಗೂ ಬೌಲ್‌ಗಳನ್ನು ಅತಿಥಿಗಳಿಗಾಗಿ ಏರ್ಪಡಿಸಿದರು.


ನೂಪುರ್ ಹಾಗೂ ಅಶ್ವಿನ್


ತ್ಯಾಜ್ಯ ನಿರ್ವಹಣೆ, ಪರಿಸರ ಸ್ನೇಹಿ ಯೋಜನೆಗಳು


ವಿವಾಹಕ್ಕೆ ಬಂದಿದ್ದ ಅತಿಥಿಗಳಿಗೆ ಸಿಹಿತಿಂಡಿಗಳನ್ನು ಸ್ಟೀಲ್ ಡಬ್ಬಗಳಲ್ಲಿ ನೀಡಿದ್ದು ಉಡುಗೊರೆಗಳನ್ನು ಸುತ್ತಲು ಸುದ್ದಿಪತ್ರಿಕೆಗಳನ್ನು ಬಳಸಿಕೊಂಡಿದ್ದಾರೆ. ಸ್ಥಳೀಯ ಹೂವುಗಳನ್ನು ಬಳಸಿಕೊಂಡು ವಿವಾಹ ಮಂಟಪದ ಅಲಂಕಾರವನ್ನು ಜೋಡಿಗಳು ಮಾಡಿಸಿದ್ದು, ನಂತರ ಗೊಬ್ಬರ ತಯಾರಿಕೆಗಾಗಿ ಈ ಹೂವುಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.


ಹೀಗೆ ಆದಷ್ಟು ತ್ಯಾಜ್ಯಗಳನ್ನು ಕಡಿಮೆಮಾಡುವ ಮೂಲಕ, ಕಾರ್ಬನ್ ಪ್ರಮಾಣವನ್ನು ತಗ್ಗಿಸಿಕೊಂಡು ಹಾಗೂ ತ್ಯಾಜ್ಯ ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಂಡು ನೂಪುರ್ ಹಾಗೂ ಅಶ್ವಿನ್ ವಿವಾಹ ಬಂಧನಕ್ಕೊಳಗಾಗಿದ್ದಾರೆ ಅಂತೆಯೇ ಪರಿಸರ ಸ್ನೇಹಿಯಾಗಿ ವಿವಾಹಿತರಾಗಿದ್ದಾರೆ.


ಈವೆಂಟ್ ಪ್ಲಾನಿಂಗ್ ಕಂಪನಿ ಗ್ರೀನ್‌ಮಾನ್ಯ


ಇವರಿಬ್ಬರ ಪರಿಸರ ಸ್ನೇಹಿ ಯೋಜನೆಗಳು ಇಷ್ಟಕ್ಕೂ ನಿಂತಿಲ್ಲ. ತಮ್ಮದೇ ಆದ ಈವೆಂಟ್ ಪ್ಲಾನಿಂಗ್ ಕಂಪನಿ ಗ್ರೀನ್‌ಮಾನ್ಯವನ್ನು ಆರಂಭಿಸಿರುವ ದಂಪತಿಗಳು ಹೆಚ್ಚು ಖರ್ಚಿಲ್ಲದೆ ಪರಿಸರ ಸ್ನೇಹಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದ್ದಾರೆ.


ಇದನ್ನೂ ಓದಿ: Marriage: ಮದುವೆ ಆಗ್ತಿರೋ ಜೋಡಿ ತಮ್ಮ ಸಂಗಾತಿಯಲ್ಲಿ ಈ 10 ಗುಣಗಳನ್ನ ನಿರೀಕ್ಷೆ ಮಾಡ್ತಾರಂತೆ!




ಇದೀಗ ದಂಪತಿಗಳು ತಮ್ಮ ಕಂಪನಿಯ ಮೂಲಕ ವಿವಾಹ ಕಾರ್ಯಕ್ರಮ, ಹುಟ್ಟುಹಬ್ಬದ ಸಮಾರಂಭಗಳು, ಕಾರ್ಪೋರೇಟ್ ಈವೆಂಟ್‌ಗಳನ್ನು ನಡೆಸುತ್ತಿದ್ದು, ಇಲ್ಲೆಲ್ಲಾ ಪರಿಸರಕ್ಕೆ ಹಾನಿಕಾರಕವಲ್ಲದ ವಸ್ತುಗಳನ್ನು ಬಳಸಿಕೊಂಡು ಹಿತಮಿತವಾಗಿ ಹೆಚ್ಚು ಖರ್ಚಿಲ್ಲದೆ, ತ್ಯಾಜ್ಯ ನಿರ್ವಹಣೆ ನಡೆಸಿಕೊಂಡು ತಮ್ಮ ತಂಡದ ಸಹಾಯದೊಂದಿಗೆ ಈವೆಂಟ್‌ಗಳನ್ನು ರೂಪಿಸುತ್ತಿದ್ದಾರೆ.

First published: