ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳು (Indian armed forces) ಹೆಚ್ಚು ವೃತ್ತಿಪರವಾಗಿದೆ. ಮತ್ತು ವಿಶ್ವದ ಅತ್ಯುತ್ತಮ ಪಡೆಗಳಲ್ಲಿ ಒಂದಾಗಿದೆ. ಇದು ಅನುಭವಿಗಳ ಅದಮ್ಯ ಧೈರ್ಯ ಮತ್ತು ಅವರ ತ್ಯಾಗದ ಪರಿಣಾಮವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ (Army chief Manoj Pande) ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಏಳನೇ ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನಾಚರಣೆಯ (Armed Forces Veterans Day) ಸಂದರ್ಭದಲ್ಲಿ ಮಾಜಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಶಸ್ತ್ರ ಪಡೆಗಳ ಮೂರು ವಿಭಾಗವೂ ಅನುಭವಿಗಳ ಕೊಡುಗೆಯಿಂದ ಪ್ರೇರಿತವಾಗಿದ್ದು, ಅವುಗಳು ಎಂತಹ ಸವಾಲನ್ನಾದರೂ ಎದುರಿಸಲು ಸಿದ್ಧವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಸೇನಾ ಮುಖ್ಯಸ್ಥರೊಂದಿಗೆ ವೇದಿಕೆ ಹಂಚಿಕೊಂಡರು. ಸಶಸ್ತ್ರ ಪಡೆಗಳ ಮೂರು ವಿಭಾಗಗಳ ಹಿರಿಯ ಯೋಧರು ಹಾಗೂ ಕುಟುಂಬಸ್ಥರು ಸ್ಥಳದಲ್ಲಿ ಹಾಜರಿದ್ದರು.
ಯಾವುದೇ ಸವಾಲನ್ನು ಎದುರಿಸಲು ಸಿದ್ಧ
" ಇಂದು, ನಮ್ಮ ಸಶಸ್ತ್ರ ಪಡೆಗಳು ವಿಶ್ವದ ಅತ್ಯುತ್ತಮ ಮತ್ತು ಹೆಚ್ಚು ವೃತ್ತಿಪರ ಪಡೆಗಳೆಂದು ಗುರುತಿಸಿಕೊಳ್ಳುತ್ತಿವೆ. ಈ ಹೆಸರು ಬರಲು ನಿಮ್ಮ ತ್ಯಾಗ, ಧೈರ್ಯ ಮತ್ತು ಕಠಿಣ ಪರಿಶ್ರಮದ ಫಲವಾಗಿದೆ. ಅದರಿಂದ ಸ್ಫೂರ್ತಿ ಪಡೆದ ನಮ್ಮ ಸಶಸ್ತ್ರ ಪಡೆಗಳ ಮೂರು ವಿಭಾಗದ ಯೋಧರು ಇಂದು ಅಸಾಧಾರಣ ಸಾಧನವಾಗಿ, ಯಾವುದೇ ಸವಾಲನ್ನು ಎದುರಿಸಲು ಸಿದ್ಧರಾಗಿದ್ದಾರೆ " ಎಂದು ಜನರಲ್ ಪಾಂಡೆ ತಿಳಿಸಿದರು.
ಇದನ್ನೂ ಓದಿ:Army Day 2023: ದೆಹಲಿಯಿಂದ ಹೊರಗೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಾರತೀಯ ಸೇನಾ ದಿನ ಆಯೋಜನೆ; ಏನಿದರ ವಿಶೇಷತೆ?
ವೀರ ಯೋಧರನ್ನು ನೆನೆಯುವ ದಿನ
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಮಾತನಾಡಿ, ಇಂದಿನ ಸಶಸ್ತ್ರ ಪಡೆಗಳು ನಮ್ಮ ಪ್ರತಿಯೊಬ್ಬ ಹಿರಿಯ ಯೋಧರ ಪ್ರಯತ್ನ, ದೂರದೃಷ್ಟಿಯ ನಾಯಕತ್ವ, ಆಕಾಂಕ್ಷೆಗಳು ಮತ್ತು ನಿಸ್ವಾರ್ಥ ಸೇವೆಯ ಪ್ರಯತ್ನಗಳಿಂದ ರೂಪುಗೊಂಡಿವೆ. ಇಲ್ಲಿರುವ ನಿಮ್ಮೆಲ್ಲರೊಂದಿಗೆ ಚರ್ಚೆ ನಡೆಸುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಗೌರವವಾಗಿದೆ. ಇಂದು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಮ್ಮ ವೀರ ಯೋಧರನ್ನು ನೆನಪಿಸಿಕೊಳ್ಳುವ ಮತ್ತು ಅವರಿಗೆ ಗೌರವ ಸಲ್ಲಿಸುವ ಸಂದರ್ಭ ಇದಾಗಿದೆ " ಎಂದು ಹೇಳಿದರು.
ಅಗ್ನಿವೀರರ ಮೊದಲ ಬ್ಯಾಚ್ ಸಿದ್ಧವಾಗಿದೆ
ದೇಶದ ಮೊದಲ ಸ್ವದೇಶಿ ವಿಮಾನವಾಹಕ ಐಎನ್ಎಸ್ ಭಾರತೀಯ ನೌಕಾಪಡೆ ಸೇರಿದೆ. ಅಗ್ನಿವೀರರ ಮೊದಲ ಬ್ಯಾಚ್ ಸಿದ್ಧವಾಗಿದೆ. ಇದರಲ್ಲಿ ಮಹಿಳೆಯರೂ ಸೇರಿದ್ದಾರೆ. ಇವುಗಳು ದಿಟ್ಟ ಬದಲಾವಣೆ ಹೆಜ್ಜೆಯಾಗಿದ್ದು, ನೌಕಾಪಡೆಯನ್ನು ಯಶಸ್ಸಿನತ್ತಾ ಕೊಂಡೊಯ್ಯಲಿದೆ" ಎಂದು ಹೇಳಿದರು.
ಜ.14ರಂದು ಹಿರಿಯ ಯೋಧರ ದಿನ
ಸಶಸ್ತ್ರ ಪಡೆಯ ಹಿರಿಯ ಯೋಧರ ದಿನಾಚರಣೆಯನ್ನು ಜನವರಿ 14ರಂದು ಆಚರಿಸಿಲಾಗುತ್ತದೆ. ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಹಾಗೂ ಕನ್ನಡಿಗ ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಇದೇ ದಿನ 1953 ರಲ್ಲಿ ನಿವೃತ್ತಿಯಾಗಿದ್ದರು. ಇಂತಹ ಹಿರಿಯ ಯೋಧರನ್ನು ಗೌರವಿಸುವ ಸಲುವಾಗಿ ಜನವರಿ 14ರಂದು ಹಿರಿಯ ಯೋಧರ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.
ಈ ದಿನ ಹಿರಿಯ ಯೋಧರು ಮತ್ತು ಅವರ ಕುಟುಂಬಸ್ಥರ ಜೊತೆಗೆ ಸಂವಾದ ನಡೆಸಲಾಗುತ್ತದೆ. ಈ ವರ್ಷ ಹಿರಿಯರ ಯೋಧರ ದಿನಾಚರಣೆಯನ್ನು 9 ಸ್ಥಳಗಳಲ್ಲಿ ನಡೆಸಲಾಗಿದೆ. ಜುಹುಂಜುನು, ಜಲಂಧರ್, ಪನಾಗರ್, ನವದೆಹಲಿ, ಡೆಹ್ರಾಡೂನ್, ಚೆನ್ನೈ, ಚಂಡೀಗಢ, ಭುವನೇಶ್ವರ ಮತ್ತು ಮುಂಬೈನಲ್ಲಿ ಸೇನೆಯ ಮೂರು ಸರ್ವೀಸ್ ಹೆಡ್ಕ್ವಾರ್ಟರ್ಸ್ಗಳ ವತಿಯಿಂದ ಹಿರಿಯ ಯೋಧರ ದಿನವನ್ನು ಆಚರಿಸಲಾಗುತ್ತಿದೆ.
ಒಆರ್ಒಪಿ ಯೋಜನೆಗೆ ಅನುಮೋದನೆ
ಸಶಸ್ತ್ರ ಪಡೆಗಳ ನಿವೃತ್ತ ಯೋಧರ ಬಹುಕಾಲದ ಬೇಡಿಕೆಯಾದ ಒಂದು ಶ್ರೇಣಿ ಒಂದು ಪಿಂಚಣಿ (OROP)ಯೋಜನೆಗೆ ಅನುಮೋದನೆ ಸರ್ಕಾರ ನೀಡಿದೆ. ಈ ಯೋಜನೆಯಲ್ಲಿ ಕೆಲವು ಸಮಸ್ಯೆಗಳಿದ್ದವು, ಆದ್ದರಿಂದ ವಿಳಂಬವಾಗಿತ್ತು. ಡಿಸೆಂಬರ್ನಲ್ಲಿ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಅರಿಯರ್ಸ್ ಸಹಿತ ಸೈನಿಕರಿಗೆ ಯೋಜನೆಯಲ್ಲಿರುವಂತೆ ಪಿಂಚಣಿ ದೊರೆಯಲಿದೆ ಎಂದು ಮಾಜಿ ಸೈನಿಕರ ಕಲ್ಯಾಣ ಕಾರ್ಯದರ್ಶಿ ವಿಜಯ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ