ನಮ್ಮ ಸೈನಿಕರು ಗಡಿಯನ್ನು ರಕ್ಷಿಸುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ- ಪಿಎಂ ಮೋದಿ

ಸೈನಿಕರಿಗೆ ಕೆಲ ಕಿವಿ ಮಾತನ್ನೂ ಹೇಳಿರುವ ಮೋದಿ, ನಿತ್ಯ ನೀವು ಯೋಗ ಮಾಡಿ. ಅಲ್ಲದೆ, ಸಹ ಸೈನಿಕರಿಂದ ನಿಮಗೆ ಗೊತ್ತಿಲ್ಲದ ಭಾರತದ ಭಾಷೆಯನ್ನು ಕಲಿತುಕೊಳ್ಳಿ ಎಂದಿದ್ದಾರೆ.

ಮೋದಿ

ಮೋದಿ

 • Share this:
   ನವದೆಹಲಿ (ನವೆಂಬರ್ 14): 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಪ್ರತಿ ವರ್ಷ ಗಡಿಯಲ್ಲಿ ದೀಪಾವಳಿ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅವರು ಗಡಿ ಭಾಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈ ಬಾರಿಯು ಸಂಪ್ರದಾಯದಂತೆ ಅವರು ಗಡಿ ಭಾಗಕ್ಕೆ ತೆರಳಿ ದೀಪಾವಳಿ ಆಚರಣೆ ಮಾಡಿದ್ದಾರೆ. ಅಲ್ಲದೆ, ಪದೇ ಪದೇ ತೊಂದರೆ ನೀಡುತ್ತಿರುವ ಚೀನಾದವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

  ರಾಜಸ್ಥಾನದ ಜೈಸಲ್ಮಾರ್ ಗಡಿ ಭಾಗಕ್ಕೆ ಮೋದಿ  ತೆರಳಿದ್ದಾರೆ. ಸೇನೆ, ವಾಯು ಪಡೆ ಮತ್ತು ಗಡಿ ಭದ್ರತಾ ಪಡೆಯ 600 ಸಿಬ್ಬಂದಿ ಇಂದಿನ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಮೋದಿಯೊಂದಿಗೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂಎಂ ನರವಾನೆ, ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಕೂಡ ಭಾಗಿ ಆಗಿದ್ದರು.

  "ಭಾರತವು ಇತರರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರಿಗೆ ಅರ್ಥವಾಗುವಂತೆ ಮಾಡುವ ನೀತಿಯನ್ನು ನಂಬುತ್ತದೆ. ಆದರೆ ಇದನ್ನು ಪರೀಕ್ಷೆ ಮಾಡಲು ಹೋದರೆ ನಮ್ಮ ದೇಶ ತಕ್ಕ ಉತ್ತರ ನೀಡುತ್ತದೆ,"  ಎಂದರು. ಈ ಮೂಲಕ ಲಡಾಕ್​ನಲ್ಲಿ ನಿರಂತರವಾಗಿ ಕಾಲು ಕೆರೆದುಕೊಂಡು ಜಗಳ ಮಾಡುತ್ತಿರುವ ಚೀನಾಗೆ ತಿರುಗೇಟು ನೀಡಿದರು.

  "ನಮ್ಮ ಸೈನಿಕರು ನಮ್ಮ ಗಡಿಯನ್ನು ರಕ್ಷಿಸುವುದನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಇದನ್ನು ಪರೀಕ್ಷೆ ಮಾಡಲು ಬಂದವರಿಗೆ ತಕ್ಕ ಉತ್ತರ ನೀಡುವ ಶಕ್ತಿ ನಮಗಿಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ," ಎಂದರು ಮೋದಿ.  ಇನ್ನು, ಸೈನಿಕರಿಗೆ ಕೆಲ ಕಿವಿ ಮಾತನ್ನೂ ಹೇಳಿರುವ ಮೋದಿ, ನಿತ್ಯ ನೀವು ಯೋಗ ಮಾಡಿ. ಅಲ್ಲದೆ, ಸಹ ಸೈನಿಕರಿಂದ ನಿಮಗೆ ಗೊತ್ತಿಲ್ಲದ ಭಾರತದ ಭಾಷೆಯನ್ನು ಕಲಿತುಕೊಳ್ಳಿ ಎಂದಿದ್ದಾರೆ.
  Published by:Rajesh Duggumane
  First published: