ನವ ದೆಹಲಿ (ಆಗಸ್ಟ್ 20); ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೆಟ್ಟ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಮಸ್ಯೆ ಭಾರತವನ್ನು ಬೆಂಬಿಡದೆ ಕಾಡಲಿದೆ. ಅಲ್ಲದೆ, ಮುಂದಿನ ಆರು-ಏಳು ತಿಂಗಳಲ್ಲಿ ಈ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ
ಇಂದು ವರ್ಚುವಲ್ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, “ಭಾರತ ಇದೀಗ ತನ್ನ ಯುವಕರಿಗೆ ಉದ್ಯೋಗ ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಕಳೆದ 70 ವರ್ಷದಲ್ಲಿ ಭಾರತಕ್ಕೆ ಈವರೆಗೆ ಇಂತಹ ಪರಿಸ್ಥಿತಿ ಬಂದಿರಲಿಲ್ಲ" ಎಂದು ವಿಷಾಧಿಸಿದ್ದಾರೆ.
"ಕಳೆದ ಜನವರಿ ತಿಂಗಳಲ್ಲೇ COVID-19 ನಿಂದ ದೇಶಕ್ಕೆ ಭಾರೀ ನಷ್ಟವಾಗಲಿದೆ ಎಂದು ನಾನು ಎಚ್ಚರಿಕೆ ನೀಡಿದ್ದೆ. ಆದರೆ, ಮಾಧ್ಯಮಗಳು ಆಗ ನನ್ನನ್ನು ಗೇಲಿ ಮಾಡಿದ್ದವು. ನೀವು ನನ್ನನ್ನು ನಂಬದಿದ್ದರೆ, ನನ್ನ ಮಾತನ್ನು ಕೇಳಬೇಡಿ. ಇಂದು ನಾನು ಮತ್ತೆ ಹೇಳುತ್ತಿದ್ದೇನೆ ನಮ್ಮ ಯುವಕರಿಗೆ ಉದ್ಯೋಗ ನೀಡಲು ನಮ್ಮ ದೇಶದಿಂದ ಸಾಧ್ಯವಾಗುವುದೇ ಇಲ್ಲ.
ನನ್ನ ಈ ಮಾತನ್ನು ನೀವು ಒಪ್ಪದಿದ್ದರೆ ಇನ್ನೂ ಆರು-ಏಳು ತಿಂಗಳು ಕಾಯಿರಿ. ಏಕೆಂದರೆ ಅಪಾರ ಉದ್ಯೋಗಳ ಸೃಷ್ಟಿಗೆ ಕಾರಣವಾಗಿದ್ದ ಅಸಂಘಟಿತ ವಲಯಗಳು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಸಂಪೂರ್ಣ ನಷ್ಟಕ್ಕೊಳಗಾಗಿ ಸ್ತಬ್ಧವಾಗಿವೆ. ಅದರ ಪರಿಣಾಮ ಶೀಘ್ರದಲ್ಲೇ ಭಾರತ ಎದುರಿಸಲಿದೆ” ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
“ದೇಶದ ಶೇ.90 ರಷ್ಟು ಉದ್ಯೋಗವು ಅಸಂಘಟಿತ ವಲಯದಲ್ಲಿದೆ. ಸಣ್ಣ ಕೈಗಾರಿಕೆಗಳು, ರೈತರು ಸೇರಿದಂತೆ ಎಲ್ಲರೂ ಈ ವಲಯದಲ್ಲಿದ್ದಾರೆ. ಆದರೆ, ಪ್ರಧಾನಿ ಮೋದಿ ಈ ಇಡೀ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವು ಕಂಪನಿಗಳು ಒಂದರ ಹಿಂದೆ ಒಂದರಂತೆ ಬಿದ್ದು ಹೋಗುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಮೊರೊಟೋರಿಯಂ ಅವಧಿಯ ನಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಸಂಪೂರ್ಣವಾಗಿ ನಾಶವಾಗಲಿವೆ" ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
COVID-19 ವಿರುದ್ಧದ ದೇಶದ ಹೋರಾಟದ ನಡುವೆ ಕಂಪನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾಣಿಜ್ಯ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಉದ್ಯಮಗಳಿಗೆ ಸಾಲ ಮರುಪಾವತಿಯನ್ನು 6 ತಿಂಗಳವರೆಗೆ ನಿಷೇಧಿಸಿತ್ತು.
ಇದನ್ನೂ ಓದಿ : ಕ್ಷಮೆ ಕೇಳುವುದಿಲ್ಲ, ಶಿಕ್ಷೆಯನ್ನು ಸ್ವೀಕರಿಸಲು ಸಂತೋಷದಿಂದ ಕಾಯುತ್ತಿದ್ದೇನೆ; ಪ್ರಶಾಂತ್ ಭೂಷಣ್
ಆದರೆ, ಈ ನಿಷೇಧದಿಂದ ಉದ್ಯಮಗಳಿಗೆ ಯಾವುದೇ ಉಪಯೋಗವಿಲ್ಲ. ಇಂತಹ ಸಂದರ್ಭದಲ್ಲಿ ಬಡ್ಡಿ ಸಾಲ ನೀಡುವುದು ಸರ್ಕಾರದ ಕೆಲಸವಲ್ಲ. ಬದಲಾಗಿ ಸರ್ಕಾರ ಎಲ್ಲಾ ಸಣ್ಣ ಉದ್ಯಮಗಳಿಗೆ ಸಹಾಯ ಧನ ನೀಡಬೇಕು. ಎಂದು ವಾದಿಸಿದ್ದ ರಾಹುಲ್ ಗಾಂಧಿ ಕಳೆದ ನಾಲ್ಕು ತಿಂಗಳಿನಿಂದ ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇದ್ದಾರೆ.
“ದೇಶದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಎರಡು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಮೂಲಕ 2 ಕೋಟಿ ಕುಟುಂಬಗಳ ಭವಿಷ್ಯವು ಕತ್ತಲೆಯಲ್ಲಿದೆ. ಫೇಸ್ಬುಕ್ನಲ್ಲಿ ನಕಲಿ ಸುದ್ದಿ ಮತ್ತು ದ್ವೇಷವನ್ನು ಮೂಡಿಸುವ ಮೂಲಕ ನಿರುದ್ಯೋಗ ಮತ್ತು ಆರ್ಥಿಕತೆಯ ವಿನಾಶದ ಬಗೆಗಿನ ಸತ್ಯವನ್ನು ದೇಶದಿಂದ ಮರೆಮಾಚಲು ಸಾಧ್ಯವಿಲ್ಲ” ಎಂದು ಕಳೆದ ಬುಧವಾರ ರಾಹುಲ್ ಗಾಂಧಿ ಟ್ವೀಟ್ ಸಹ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ