news18 Updated:February 25, 2021, 3:10 PM IST
ಆಟಿಕೆಗಳ ಸಾಂದರ್ಭಿಕ ಚಿತ್ರ
- News18
- Last Updated:
February 25, 2021, 3:10 PM IST
ಮುಂಬೈ(ಫೆ. 25): ಭಾರತದಲ್ಲಿ ಇದೇ ಮೊದಲ ಬಾರಿಗೆ ಆಟಿಕೆ ಮೇಳವೊಂದು ಆಯೋಜನೆಯಾಗಲಿದೆ. ಫೆ. 27ರಿಂದ ಮಾರ್ಚ್ 2ರವರೆಗೆ ಇಂಡಿಯಾ ಟಾಯ್ ಫೇರ್ 2021 ನಡೆಯಲಿದೆ. ಮೂರು ದಿನಗಳ ಕಾಲ ಈ ಮೇಳ ಸಂಪೂರ್ಣ ಆನ್ಲೈನ್ನಲ್ಲಿ ನಡೆಯುತ್ತಿರುವುದು ವಿಶೇಷ. ಫೆ. 11ರಂದು ಆಟಿಕೆ ಮೇಳದ ವೆಬ್ಸೈಟ್ ಅನ್ನ ಅನಾವರಣಗೊಳಿಸಲಾಗಿತ್ತು. ಈ ಮೇಳದಲ್ಲಿ ಪಾಲ್ಗೊಳ್ಳಲು ಮಕ್ಕಳು, ಪೋಷಕರು, ಶಿಕ್ಷಕರು, ಆಟಿಕೆ ಮಳಿಗೆಯವರು ತಮ್ಮ ಹೆಸರು ನೊಂದಾಯಿಸಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಮಂದಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಶನಿವಾರದಿಂದ ವಿವಿಧ ರಾಜ್ಯಗಳಿಂದ 1 ಸಾವಿರಕ್ಕೂ ಹೆಚ್ಚು ಆಟಿಕೆ ಮಳಿಗೆಯವರು ಈ ವರ್ಚುವಲ್ ಮೇಳದಲ್ಲಿ ಪ್ರದರ್ಶನ ಮಾಡಲಿದ್ದಾರೆ. ದೇಶೀಯವಾಗಿ ತಯಾರಾದ ವಿವಿಧ ರೀತಿಯ ಆಟಿಕೆಗಳನ್ನ ಆನ್ಲೈನ್ನಲ್ಲೇ ನೋಡುವ ಮತ್ತು ಖರೀದಿಸುವ ಅವಕಾಶ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಹಾಗೆಯೇ, ವೆಬಿನಾರ್, ಪೆನಲ್ ಡಿಸ್ಕಷನ್, ಕ್ವಿಜ್ ಇತ್ಯಾದಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರಲಿದೆ. ಟಾಯ್ ತಯಾರಕರು ತಮ್ಮ ಉತ್ಪನ್ನವನ್ನ ಹೇಗೆ ತಯಾರಿಸುತ್ತಾರೆ ಎಂಬುದನ್ನೂ ಸಾರ್ವಜನಿಕರಿಗೆ ನೇರವಾಗಿ ಪ್ರದರ್ಶನ ಕೊಡಲಿದ್ದಾರೆ.
ಆಟಿಕೆ ಮತ್ತು ಗೇಮ್ಗಳ ಮೂಲಕ ಬುದ್ಧಿಶಕ್ತಿಯನ್ನ ಜಾಗೃತಗೊಳಿಸುವ, ಕಲಿಕೆಯನ್ನ ಆನಂದಿಂದ ಅನುಭವಿಸುವಂತೆ ಮಾಡುವ ವಿಧಾನಗಳನ್ನ ಈ ಮೇಳದಲ್ಲಿ ಅನ್ವೇಷಿಸಲಾಗುತ್ತದೆ. ಆ ನಿಟ್ಟಿನಲ್ಲಿ ಚರ್ಚೆ ಮತ್ತು ವಿಚಾರ ಮಂಡನೆ ಇತ್ಯಾದಿ ಚಟುವಟಿಕೆಗಳು ನಡೆಯಲಿವೆ. ಆಟಿಕೆಗಳ ಪ್ರದರ್ಶಕರಲ್ಲಿ ಮಕ್ಕಳ ಶಿಕ್ಷಣ ತಜ್ಞರೂ ಒಳಗೊಂಡಿರುತ್ತಾರೆ.
ಇದನ್ನೂ ಓದಿ: ಈ ಒಂದೇ ಶಾಲೆಯ 229 ಮಕ್ಕಳಿಗೆ ಕೊರೋನಾ ಸೋಂಕು; ಬೆಚ್ಚಿಬೀಳಿಸಿದೆ ಕೋವಿಡ್ ಮರು ಅಲೆ
ಹ್ಯಾಮ್ಲೀಸ್ ಪ್ರಾಯೋಜಕತ್ವ:
ವಿಶ್ವದ ಅತ್ಯಂತ ಹಳೆಯ ಟಾಯ್ ರೀಟೇಲರ್ಗಳಲ್ಲೊಂದಾದ ಹ್ಯಾಮ್ಲೀಸ್ (Hamleys) ಈ ಆಟಿಕೆ ಮೇಳದ ಟೈಟಲ್ ಸ್ಪಾನ್ಸರ್ ಆಗಿದೆ. ರಿಲಾಯನ್ಸ್ ರೀಟೇಲ್ ಮಾಲಕತ್ವದ ಹ್ಯಾಮ್ಲೀಸ್ನ ಒಂದು ಆನ್ಲೈನ್ ಬೂತ್ ಕೂಡ ಮೇಳದಲ್ಲಿ ಇರಲಿದೆ. ಮುಂಬೈ, ದೆಹಲಿ ಮತ್ತು ಅಹ್ಮದಾಬಾದ್ ನಗರಗಳಲ್ಲಿ ಹ್ಯಾಮ್ಲೀಸ್ ಸಂಸ್ಥೆಯು ಟಾಯ್ ಸರ್ಕಲ್ಗಳನ್ನ ಸ್ಥಾಪಿಸಲಿದೆ. ಅಂಗನವಾಡಿ ಕಾರ್ಯಕರ್ತರ ಮಕ್ಕಳಿಗೆ ಟಾಯ್ ಕಿಟ್ ಮತ್ತು ಆಟಿಕೆ ವಸ್ತುಗಳನ್ನ ನೀಡಲಿದೆ. ಅದಕ್ಕಾಗಿ ಮೇಳದಲ್ಲಿ ವಿವಿಧ ಮಳಿಗೆಗಳಿಂದ ಮರದ ಆಟಿಕೆಗಳನ್ನ ಹ್ಯಾಮ್ಲೀಸ್ ಖರೀದಿ ಕೂಡ ಮಾಡುತ್ತಿದೆ.
ಭಾರತ ಆಮದು ಮಾಡಿಕೊಳ್ಳುವ ಆಟಿಕೆಗಳು ಕಳಪೆ ಗುಣಮಟ್ಟದ್ದು ಎಂಬ ವಿಚಾರವನ್ನ ಟಾಯ್ ಫೇರ್ ವೆಬ್ಸೈಟ್ ಉದ್ಘಾಟನೆ ವೇಳೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಪ್ರಸ್ತಾಪಿಸಿದ್ದರು. “ಶೇ. 30ರಷ್ಟು ಆಮದಿತ ಆಟಿಕೆಗಳಲ್ಲಿ ಹೆಚ್ಚು ಪ್ರಮಾಣದ ರಾಸಾಯನಿಕ ಮತ್ತು ಭಾರತದ ಲೋಹಗಳು ಇರುವುದು ತಿಳಿದುಬಂದಿದೆ. ಇತರ ಆಟಿಕೆಗಳ ಗುಣಮಟ್ಟವೂ ಕಳಪೆಯೇ ಇದೆ. ಇದರಿಂದ ನಾವು ಆಟಿಕೆಗಳ ಆರ್ಡರ್ ಮಾಡುವಾಗ ಕ್ವಾಲಿಟಿ ಕಂಟ್ರೋಲ್ ವಿಚಾರ ಪ್ರಸ್ತುತವಾಗಿದೆ. ಈಗ ಈ ಆಟಿಕೆ ಚಟುವಟಿಕೆಯಿಂದ ಭಾರತೀಯರಿಗೆ ಒಳ್ಳೆಯ ಗುಣಮಟ್ಟದ ಆಟಿಕೆಗಳನ್ನ ಪಡೆಯಲು ಸಾಧ್ಯವಾಗಿದೆ” ಎಂದು ಪಿಯೂಶ್ ಗೋಯಲ್ ಹೇಳಿದ್ದರು.
Published by:
Vijayasarthy SN
First published:
February 25, 2021, 2:51 PM IST