ಡಿಆರ್ಡಿಒನ ಹೈಪರ್ಸೋನಿಕ್ ವಾಹನದ ಯಶಸ್ವಿ ಪ್ರಯೋಗ; ಅಮೆರಿಕ, ರಷ್ಯಾ, ಚೀನಾ ಸಾಲಿಗೆ ಭಾರತ
ಮಾಚ್-6 ವೇಗದಲ್ಲಿ ಹೋಗಬಲ್ಲ ಕ್ಷಿಪಣಿಗಳ ಅಭಿವೃದ್ಧಿಗೆ ಸಹಾಯಕವಾಗುವ ಹೈಪರ್ಸಾನಿಕ್ ವಾಹನವನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇದರಿಂದ ಅತಿವೇಗದ ದೂರಗಾಮಿ ಕ್ಷಿಪಣಿಗಳನ್ನ ಇನ್ನೈದು ವರ್ಷದೊಳಗೆ ತಯಾರಿಸುವ ಸಾಮರ್ಥ್ಯ ಪಡೆದಿದೆ.
ಬೆಂಗಳೂರು(ಸೆ. 07): ಭವಿಷ್ಯದ ಯುದ್ದಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೈಪರ್ಸೋನಿಕ್ ಮಿಸೈಲ್ಗಳ ತಯಾರಿಕೆ ನಿಟ್ಟಿನಲ್ಲಿ ಭಾರತ ಮುಂದಡಿ ಇಟ್ಟಿದೆ. ಒಡಿಶಾದ ಬಲಾಸೂರ್ನಲ್ಲಿರುವ ಎಪಿಜೆ ಅಬ್ದುಲ್ ಕಲಾಮ್ ಪರೀಕ್ಷಾ ಕೇಂದ್ರದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನದ ವಾಹನವೊಂದನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ದೇಶೀಯವಾಗಿ ತಯಾರಾಗಿರುವ ಈ ತಂತ್ರಜ್ಞಾನದಿಂದ ಅತಿವೇಗದ ಕ್ಷಿಪಣಿಗಳ ಅಭಿವೃದ್ಧಿಪಡಿಸುವ ಸಾಮರ್ಥ್ಯ ಭಾರತಕ್ಕೆ ಸಿಕ್ಕಿದಂತಾಗಿದೆ. ಭಾರತ ಈ ಭವಿಷ್ಯದ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೆ ದೇಶವಾಗಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಈ ಸಾಧನೆ ಮಾಡಿದ ಇತರ ದೇಶಗಳಾಗಿವೆ. ಭಾರತದ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ) ಈ ಹೈಪರ್ಸೋನಿಕ್ ಟೆಸ್ಟ್ ಡೆಮಾನ್ಸ್ಟ್ರೇಟರ್ ವೆಹಿಕಲ್ (HSTDV) ಅನ್ನು ಅಭಿವೃದ್ಧಿಪಡಿಸಿದೆ. ಅಗ್ನಿ ಕ್ಷಿಪಣಿ ಉತ್ತೇಜಕವನ್ನು(ಮಿಸೈಲ್ ಬೂಸ್ಟರ್) ಬಳಸಿ ಬೆಳಗ್ಗೆ 11:03ಕ್ಕೆ ಈ ವಾಹನವನ್ನು ಐದು ನಿಮಿಷ ಕಾಲ ಪ್ರಯೋಗಾರ್ಥವಾಗಿ ಹಾರಿಸಲಾಯಿತು. ನಿಗದಿತ ಮಾನದಂಡಗಳಲ್ಲಿ ಈ ಪರೀಕ್ಷೆ ಯಶಸ್ವಿಯಾಗಿದೆ.
ಮೊದಲಿಗೆ ಹೈಪರ್ಸೋನಿಕ್ ವಾಹನವನ್ನು ಮಿಸೈಲ್ ಬೂಸ್ಟರ್ ಮೂಲಕ 30 ಕಿಮೀ ಎತ್ತರಕ್ಕೆ ಉಡಾಯಿಸಲಾಯಿತು. ಅಷ್ಟು ಎತ್ತರ ತಲುಪಿದ ಬಳಿಕ ವಾಹನವು ಬೂಸ್ಟರ್ನಿಂದ ಬೇರ್ಪಟ್ಟಿತು. ಆ ಬಳಿಕ ವಾಹನದ ಒಳಕ್ಕೆ ಗಾಳಿಯನ್ನು ಸೆಳೆಯಲಾಯಿತು. ಆಗ ಸ್ಕ್ರಾಮ್ಜೆಟ್ ಎಂಜಿನ್ ಚಾಲನೆಗೊಂಡು 20 ಸೆಕೆಂಡುಗಳ ಕಾಲ ವಾಹನ ಮಾಚ್6 ವೇಗದಲ್ಲಿ ಸಾಗಿತು. ಬರೋಬ್ಬರಿ 2,500 ಡಿಗ್ರಿ ಸೆಲ್ಷಿಯಸ್ನಷ್ಟು ಶಾಖ ಹಾಗೂ ಗಾಳಿಯ ವೇಗವನ್ನು ಈ ವಾಹನ ತಡೆದುಕೊಂಡು ಯಶಸ್ವಿಯಾಗಿ ಸಾಗಿತು.
ಡಿಆರ್ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ನೇತೃತ್ವದ ಹೈಪರ್ಸಾನಿಕ್ ಮಿಸೈಲ್ ತಂಡ ಇದನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಿದೆ. ಭವಿಷ್ಯದ ಕ್ಷಿಪಣಿಗಳಿಗೆ ಈ ಪರೀಕ್ಷೆ ಮುನ್ನುಡಿ ಬರೆದಿದೆ. ಮುಂದಿನ 5 ವರ್ಷದಲ್ಲಿ ಸ್ಕ್ರಾಮ್ಜೆಟ್ ಎಂಜಿನ್ ಹೊಂದಿರುವ ಹೈಪರ್ ಸೋನಿ ಮಿಸೈಲ್ಗಳನ್ನ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಹೈಪರ್ಸೋನಿಕ್ ಎಂದರೆ ಶಬ್ದದ ವೇಗಕ್ಕೆ ಹಲವು ಪಟ್ಟು ವೇಗ ಎಂದರ್ಥ. ಡಿಆರ್ಡಿಒ ಮೂಲಗಳ ಪ್ರಕಾರ, ಮಾಚೋ-6 ವೇಗದಲ್ಲಿ, ಅಂದರೆ ಸೆಕೆಂಡ್ಗೆ 2 ಕಿಮೀಯಷ್ಟು ವೇಗದಲ್ಲಿ ಈ ಭವಿಷ್ಯದ ಕ್ಷಿಪಣಿಗಳು ಹೋಗಬಲ್ಲುವು.
ಹೆಚ್ಎಸ್ಟಿಡಿವಿ ವಾಹನದ ಪ್ರಯೋಗ ಯಶಸ್ವಿಯಾಗುತ್ತಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಒಗೆ ಅಭಿನಂದನೆ ಸಲ್ಲಿಸಿದರು. ಇದು ಸ್ವಾವಲಂಬಿ ಭಾರತದ ಆಶಯವನ್ನು ಈಡೇರಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.
ಹೈಪರ್ಸೋನಿಕ್ ವಾಹನವು ಕೇವಲ ಮಿಲಿಟರಿ ಉದ್ದೇಶಕ್ಕಷ್ಟೇ ಅಲ್ಲ, ಗಗನನೌಕೆ ಉಡಾವಣೆ ಸೇರಿದಂತೆ ಅನೇಕ ನಾಗರಿಕ ಕಾರ್ಯಗಳಿಗೂ ಉಪಯುಕ್ತವಾಗಲಿದೆ.
ಭಾರತವೇನಾದರೂ ಹೈಪರ್ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದರೆ ಅದು ಪ್ರಪಂಚ ಅತ್ಯಂತ ಕ್ಷಿಪ್ರ ಕ್ಷಿಪಣಿಗಳಲ್ಲಿ ಒಂದೆನಿಸಲಿದೆ. ಚೀನಾ ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ಹೈಪರ್ಸಾನಿಕ್ ಮಿಸೈಲ್ನ ವೇಗ ಮಾಚ್5 ಎಂದು ಹೇಳಲಾಗುತ್ತಿದೆ. ಅಂದರೆ ಶಬ್ದಕ್ಕಿಂತ ಐದು ಪಟ್ಟು ವೇಗವಾಗಿ ಹೋಗಬಲ್ಲುದು. ಭಾರತದ ಈ ಭವಿಷ್ಯದ ಕ್ಷಿಪಣಿಯು ಅದಕ್ಕಿಂತಲೂ ವೇಗಿಯಾಗಿರುತ್ತದೆ. ಕುತೂಹಲದ ವಿಷವೆಂದರೆ ರಷ್ಯಾ ದೇಶದ ಸಹಯೋಗದಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್ ಕ್ಷಿಪಣಿಯ ಎರಡನೇ ಅವತರಣಿಕೆಯು ಶಬ್ದಕ್ಕಿಂತ ಎಂಟು ಪಟ್ಟು ವೇಗವಾಗಿ ಸಾಗಬಲ್ಲುದು. ಕೆಲ ವರದಿಗಳ ಪ್ರಕಾರ ರಷ್ಯಾ ದೇಶವು ಶಬ್ದಕ್ಕಿಂತ 27 ಪಟ್ಟು ಹೆಚ್ಚು ವೇಗದಲ್ಲಿ ದಾಂಗುಡಿ ಇಡುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆಯಂತೆ. ಸದ್ಯದ ವಿಶ್ವದ ರಕ್ಷಣಾ ವ್ಯವಸ್ಥೆಯಲ್ಲಿ ಈ ಹೈಪರ್ಸಾನಿಕ್ ಕ್ಷಿಪಣಿಗಳನ್ನ ನಿಗ್ರಹಿಸುವ ಸಾಮರ್ಥ್ಯ ಕಡಿಮೆ ಎಂದೇ ಹೇಳಲಾಗುತ್ತಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ