ನವ ದೆಹಲಿ (ಅಕ್ಟೋಬರ್ 21); ಭಾರತ ಮತ್ತು ಚೀನಾ ಗಡಿ ವಿವಾದ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರುತ್ತಲೇ ಇದೆ. ಈ ನಡುವೆ ಕಳೆದ ವಾರ ಚೀನಾ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಅಲ್ಲಿನ ಅಧ್ಯಕ್ಷ ಕ್ಸಿ ಕ್ಸಿ ಜಿನ್ ಪಿಂಗ್ ಯಾವುದೇ ಸಂದರ್ಭದಲ್ಲಿ ಯುದ್ಧ ನಡೆಯಬಹುದು ಹೀಗಾಗಿ ಸಿದ್ದರಾಗಿದೆ ಎಂದು ಹೇಳಿದ ನಂತರ ಎರಡೂ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣವೇ ನಿರ್ಮಾಣವಾಗಿದೆ. ಈ ನಡುವೆ ವಾಸ್ತವಿಕ ನಿಯಂತ್ರಣ ರೇಖೆ ದಾಟಿ ಪೂರ್ವ ಲಡಾಖ್‌ನಲ್ಲಿ ಭಾರತೀಯ ಪಡೆಗಳಿಗೆ ಸಿಕ್ಕಿಬಿದ್ದಿದ್ದ ಚೀನಾದ ಸೈನಿಕನನ್ನು ಮಂಗಳವಾರ ರಾತ್ರಿ ಚೀನಾಕ್ಕೆ ಹಿಂತಿರುಗಿಸಲಾಗಿದೆ ಎಂದು ಸೇನೆ ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿಕ್ಕಿಬಿದ್ದ ಸೈನಿಕನನ್ನು ಕಾರ್ಪೋರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲ್ಪಟ್ಟಿದ್ದು ಚುಮರ್-ಡೆಮ್‌ಚೊಕ್ ಪ್ರದೇಶದಲ್ಲಿ ಈತ ಭಾರತೀಯ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.
ಭಾರತೀಯ ಸೇನೆಯ ಕೈಗೆ ಅಚಾನಕ್ಕಾಗಿ ಸಿಕ್ಕಿಬಿದ್ದಿದ್ದ ಚೀನಾದ ಸೈನಿಕನನ್ನು ಬಿಡುಗಡೆಗೊಳಿಸುವಂತೆ ಚೀನಾ ಸರ್ಕಾರ ಮತ್ತು ಸೇನೆ ಭಾರತೀಯ ಸರ್ಕಾರದ ಬಳಿ ಮನವಿ ಮಾಡಿತ್ತು. ಹೀಗಾಗಿ ಭಾರತೀಯ ಸೈನ್ಯವು ಸೈನಿಕನನ್ನು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಪ್ರೋಟೋಕಾಲ್ ಪ್ರಕಾರ ಚೀನಾಕ್ಕೆ ಹಿಂದಿರುಗಿಸಲಾಗುವುದು ಎಂದು ಸೋಮವಾರವೇ ಮಾಹಿತಿ ನೀಡಿತ್ತು. ಅದರಂತೆ ಇಂದು ಬಿಡುಗಡೆ ಮಾಡಲಾಗಿದೆ. ಆದರೆ, ಸೈನಿಕನನ್ನು ಚೀನಾ ಸೇನೆಗೆ ಹಿಂದಿರುಗಿಸುವ ಮೊದಲು ಚೀನಾದ ತಜ್ಞರು ಸೈನಿಕನನ್ನು ಸಾಕಷ್ಟು ಪ್ರಶ್ನೆಗಳಿಗೆ ಗುರಿಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಚೀನಾ ಸೈನಿಕನನ್ನು ರಕ್ಷಿಸಲು ಆಮ್ಲಜನಕ, ಆಹಾರ ಹಾಗೂ ಬೆಚ್ಚಗಿನ ಬಟ್ಟೆಗಳು ಸೇರಿದಂತೆ ವೈದ್ಯಕೀಯ ನೆರವು ನೀಡಲಾಯಿತು ಎಂದು ಭಾರತೀಯ ಸೇನೆಯು ಚೀನಾ ಸೈನಿಕನ ಬಿಡುಗಡೆ ಸಂದರ್ಭದಲ್ಲಿ ಹೊರಡಿಸಿರುವ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳೀಯ ದನಗಾಹಿಗಳಿಗೆ ಸಹಾಯ ಮಾಡುತ್ತಿರುವಾಗ ಸೈನಿಕ ಕಾಣೆಯಾಗಿದ್ದಾನೆ ಎಂದು ಚೀನಾದ ಅಧಿಕಾರಿಯೊಬ್ಬರು ಸೋಮವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ