ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರ ಕಚೇರಿಯೊಳಗೆ ಡ್ರೋನ್ ಕಳ್ಳಪ್ರವೇಶ: ಭಾರತ ಆಕ್ಷೇಪ

ಪಾಕ್ ರಾಜಧಾನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆವರಣದೊಳಗೆ ಡ್ರೋನ್​ವೊಂದು ಅಡ್ಡಾಡುತ್ತಿದ್ದ ವಿಚಾರವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ(ಜುಲೈ 02): ಕಳೆದ ಶನಿವಾರ, ಜುಲೈ 26ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಒಳಭಾಗದಲ್ಲಿ ಒಂದು ಡ್ರೋನ್ ಹಾರಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕುತೂಹಲ ಮತ್ತು ಆತಂಕದ ವಿಚಾರವೆಂದರೆ ರಾಜತಾಂತ್ರಿಕ ಕಚೇರಿಯೊಳಗೆ ಡ್ರೋನ್ ಪತ್ತೆಯಾದ ಒಂದೆರಡು ಗಂಟೆಯಲ್ಲಿ ಜಮ್ಮುವಿನ ಭಾರತೀಯ ವಾಯುನೆಲೆ ಬಳಿ ಡ್ರೋನ್ ದಾಳಿ ನಡೆದು ಕೆಲ ಅನಾಹುತಗಳನ್ನ ಉಂಟು ಮಾಡಿತ್ತು. ಇಲ್ಲಿ ಜಮ್ಮುವಿನಲ್ಲಿ ಡ್ರೋನ್ ದಾಳಿ ಆಗುವುದು ಹಾಗೂ ಅಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಡ್ರೋನ್ ಕಾಣಿಸಿಕೊಳ್ಳುವುದು ಕಾಕತಾಳೀಯವೋ ಅಥವಾ ರಹಸ್ಯ ಕಾರ್ಯಾಚರಣೆಯ ಭಾಗವಾ ಎಂಬುದು ಸ್ಪಷ್ಟವಾಗಬೇಕಿದೆ. ಆದರೆ, ಭಾರತೀಯ ರಾಯಭಾರ ಕಚೇರಿಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮವೊಂದರ ವಿಡಿಯೋ ರೆಕಾರ್ಡಿಂಗ್ ಡ್ರೋನ್ ಮೂಲಕ ಮಾಡುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ.

“ಶನಿವಾರ ರಾತ್ರಿ 10:15ರಂದು ಭಾರತೀಯ ರಾಯಭಾರ ಕಚೇರಿಯ ಆವರಣದೊಳಗಿರುವ ವಸತಿ ಪ್ರದೇಶದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಆಗ ಒಂದು ಡ್ರೋನ್ ಎರಡು ಬಾರಿ ಅಲ್ಲಿ ಸುತ್ತು ಹಾಕಿ ಹೋಗಿತ್ತು” ಎಂದು ಇಂದು ಶುಕ್ರವಾರ ಬೆಳಗ್ಗೆ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿ ಕಾರ್ಯಕ್ರಮಕ್ಕೆಂದು ನಮ್ಮ ಕಚೇರಿ ಬಳಿ ಕಾರ್ಯಕ್ರಮ ನಡೆಯುತ್ತಿತ್ತು. ಆಗ ಡ್ರೋನ್ ಮೂಲಕ ಅದನ್ನು ರೆಕಾರ್ಡಿಂಗ್ ಮಾಡುತ್ತಿದ್ದಿರಬಹುದು. ಆದರೆ, ಡ್ರೋನ್ ಬಂದಿದ್ದರ ಉದ್ದೇಶ ಸ್ಪಷ್ಟವಾಗಿ ಗೊತ್ತಾಗಿಲ್ಲ” ಎಂದು ಈ ಅಧಿಕಾರಿ ಹೇಳಿದ್ಧಾರೆ.

ಅಂದು, ಶನಿವಾರ ರಾತ್ರಿ ಕಚೇರಿಯೊಳಗೆ ಬಾಲಿವುಡ್ ನೈಟ್ ಎಂಬ ಕಾರ್ಯಕ್ರಮ ನಡೆಯುತ್ತಿತ್ತೆಂಬ ಮಾಹಿತಿ ಮತ್ತೊಂದು ಮೂಲದಿಂದ ನ್ಯೂಸ್18 ಗೆ ಸಿಕ್ಕಿದೆ. ಇದೇನೇ ಇದ್ದರೂ ರಾಜತಾಂತ್ರಿಕ ಕಚೇರಿಯೊಳಗೆ ನಡೆದ ಈ ಘಟನೆ ಜಿನಿವಾ ಒಪ್ಪಂದದ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ವಿಚಾರವನ್ನು ಪಾಕಿಸ್ತಾನ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರ ಭದ್ರತೆಗೆ ಈ ಬೆಳವಣಿಗೆಯಿಂದ ಅಪಾಯ ಎದುರಾಗುತ್ತದೆ ಎಂದು ಭಾರತ ಸರ್ಕಾರ ಅಂದು ರಾತ್ರಿಯೇ ಆತಂಕ ತೋರ್ಪಡಿಸಿತ್ತು. ಅದಾಗಿ ಸ್ವಲ್ಪ ಹೊತ್ತಿನಲ್ಲಿ ಭಾರತದ ಜಮ್ಮು ನಗರದ ಭಾರತೀಯ ವಾಯುನೆಲೆಯ ಬಳಿ ಹಲವು ಡ್ರೋನ್​ಗಳಿಂದ ಬಾಂಬ್ ದಾಳಿಯಾಗಿತ್ತು. ಈ ದಾಳಿಯಾದ ಸ್ಥಳವು ಪಾಕ್ ಗಡಿಯಿಂದ ಕೇವಲ 13.8 ಕಿಮೀ ದೂರದಲ್ಲಿದೆ. ಈ ಡ್ರೋನ್​ಗಳು ಪಾಕಿಸ್ತಾನದಿಂದ ಬಂದಿರುವುದು ಎನ್​ಐಎ ನಡೆಸಿರುವ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಈ ಡ್ರೋನ್ ದಾಳಿ ಹಿಂದೆ ಲಷ್ಕರ್-ಎ-ತೈಬಾ ಸಂಘಟನೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಇನ್ನು, ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿ ಡ್ರೋನ್ ಹಾರಿದ ಘಟನೆ ಬಗ್ಗೆ ಇಂದು ಸಂಜೆಯ ನಂತರ ಭಾರತದ ವಿದೇಶಾಂಗ ಸಚಿವಾಲಯದಿಂದ ಅಧಿಕೃತವಾಗಿ ಹೇಳಿಕೆ ಬರಬಹುದು.

ಇದನ್ನೂ ಓದಿ: PSL - ಪಾಕಿಸ್ತಾನ ಸೂಪರ್ ಲೀಗ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್ ಎಂದ ಮಾಜಿ ಆಟಗಾರ

ಪಾಕ್ ಡ್ರೋನ್ ರಗಳೆ ಇಷ್ಟೇ ಇಲ್ಲ, ಇಂದು ಶುಕ್ರವಾರ ಬೆಳ್ಳಂ ಬೆಳಗ್ಗೆ ಪಾಕಿಸ್ತಾನಕ್ಕೆ ಸೇರಿದ ಡ್ರೋನ್​ವೊಂದು ಭಾರತದ ವಾಯು ಪ್ರದೇಶ ಪ್ರವೇಶಿಸಲು ಪ್ರಯತ್ನಿಸಿದೆ. ಆಗ ಬಿಎಸ್​ಎಫ್ ಪಡೆ ಜಾಗ್ರತೆ ವಹಿಸಿ ಡ್ರೋನ್​ನತ್ತ ಗುಂಡಿನ ದಾಳಿ ನಡೆಸಿದೆ. ನಂತರ ಆ ಡ್ರೋನ್ ಕೂಡಲೇ ಪಾಕಿಸ್ತಾನಕ್ಕೆ ವಾಪಸ್ ಹಾರಿ ಹೋಗಿದೆ ಎಂದು ಸೇನೆಯಿಂದ ಮಾಹಿತಿ ಸಿಕ್ಕಿದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಕಳೆದ ವರ್ಷ ಮೇ ತಿಂಗಳಲ್ಲಿ ಭಾರತೀಯ ಗುಪ್ತಚರರು ಡ್ರೋನ್ ದಾಳಿ ಬಗ್ಗೆ ಎಚ್ಚರಿಸಿದ್ದರು. ಲಷ್ಕರ್-ಎ-ತೈಬಾದ ಉನ್ನತ ಮಟ್ಟದ ನಾಯಕರು ತನ್ನ ಸದಸ್ಯರಿಗೆ ಜಮ್ಮು ಕಾಶ್ಮೀರದಲ್ಲಿ ಡ್ರೋನ್ ಬಳಸಿ ಭಯೋತ್ಪಾದಕ ದಾಳಿ ನಡೆಸಲು ತರಬೇತಿ ಕೊಡುವ ಸಂಬಂಧ ಸಭೆ ನಡೆಸಿದ್ದರೆಂದು ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಅದರಂತೆ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವುದು ಗಮನಾರ್ಹ ಸಂಗತಿ ಆಗಿದೆ.
Published by:Vijayasarthy SN
First published: