ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆ, ಕೆನಡಾ ರಾಯಭಾರಿ ಕರೆಸಿ ಎಚ್ಚರಿಕೆ ನೀಡಿದ ಭಾರತ ಸರ್ಕಾರ
ಪಂಜಾಬ್ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಕೆನಡಾ ಪ್ರಧಾನಿ ಟ್ರುಡೋ ಬೆಂಬಲ ಸೂಚಿಸಿದ್ದಕ್ಕೆ ಭಾರತ ಬಲವಾಗಿ ಆಕ್ಷೇಪಿಸಿದ್ದು, ಇಂದು ಆ ದೇಶದ ರಾಯಭಾರಿಯನ್ನ ಕರೆಸಿ ಎಚ್ಚರಿಕೆ ಸಂದೇಶ ರವಾನಿಸಿದೆ.
ನವದೆಹಲಿ(ಡಿ. 04): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪಂಜಾಬ್ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಇಂದು ಶುಕ್ರವಾರ ದೆಹಲಿಯಲ್ಲಿರುವ ಕೆನಡಾ ರಾಯಭಾರಿಯನ್ನ ಕರೆಸಿ ಎಚ್ಚರಿಕೆಯನ್ನೂ ನೀಡಿದೆ. ಪ್ರಧಾನಿ ನೀಡಿದಂಥ ಹೇಳಿಕೆಯಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಇನ್ಮುಂದೆ ಇಂಥದಕ್ಕೆ ಆಸ್ಪದ ಕೊಡಬೇಡಿ ಎಂದು ಕೆನಡಾ ರಾಯಭಾರಿಗೆ ಸರ್ಕಾರ ಸೂಚಿಸಿದೆ.
ಭಾರತದ ರೈತರ ಸಮಸ್ಯೆಗಳಿಗೆ ಕುರಿತಂತೆ ಕೆನಡಾದ ಪ್ರಧಾನಿ, ಸರ್ಕಾರದ ಕೆಲ ಸಚಿವರು ಮತ್ತು ಸಂಸದರು ನೀಡುತ್ತಿರುವ ಹೇಳಿಕೆಗಳು ನಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯವು ಕೆನಡಾ ರಾಯಭಾರಿಗೆ ತಿಳಿಸಿದೆ. “ಇಂಥ ಹೇಳಿಕೆಗಳು ಮುಂದುವರಿದರೆ ಭಾರತ ಮತ್ತು ಕೆನಡಾ ನಡುವಿನ ಸಂಬಂಧಕ್ಕೆ ಗಂಭೀರವಾಗಿ ಧಕ್ಕೆ ತರುತ್ತದೆ” ಎಂದೂ ಎಚ್ಚರಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಸೋಮವಾರದಂದು ಸಿಖ್ ಧರ್ಮಗುರು ಗುರು ನಾನಕ್ ಅವರ 551ನೇ ಜಯಂತಿ ಆಚರಣೆ ಅಂಗವಾಗಿ ನಡೆದ ಆನ್ಲೈನ್ ಕಾರ್ಯಕ್ರಮದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮಾತನಾಡುತ್ತಾ ಭಾರತದಲ್ಲಿ ನಡೆಯುತ್ತಿರುವ ಸಿಖ್ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ಭಾರತದಲ್ಲಿ ಬರುತ್ತಿರುವ ಸುದ್ದಿಗಳು ಕಳವಳಕಾರಿಯಾಗಿವೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನ ರಕ್ಷಿಸಲು ತಮ್ಮ ದೇಶ ಸದಾ ಸಿದ್ಧ ಇರುತ್ತದೆ ಎಂದು ಹೇಳಿದ ಅವರು, “ನಿಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ನಮಗೆಲ್ಲಾ ಆತಂಕ ಇದೆ. ಮಾತುಕತೆ ಬಗ್ಗೆ ನಮಗೆ ನಂಬಿಕೆ ಇದೆ. ಅದಕ್ಕಾಗಿ ನಾವು ಭಾರತೀಯ ಅಧಿಕಾರಿಗಳನ್ನ ವಿವಿಧ ಸ್ತರಗಳಲ್ಲಿ ನೇರವಾಗಿ ಸಂಪರ್ಕಿಸಿ ನಮ್ಮ ಆತಂಕವನ್ನು ವ್ಯಕ್ತಪಡಿಸಿದ್ದೇವೆ” ಎಂದಿದ್ದರು.
ಕೆನಡಾ ಪ್ರಧಾನಿಯ ಈ ಹೇಳಿಕೆಯಿಂದ ಆ ದೇಶದಲ್ಲಿರುವ ನಮ್ಮ ರಾಯಭಾರ ಮತ್ತು ಧೂತವಾಸ ಕಚೇರಿಗಳ ಬಳಿ ಉಗ್ರ ಚಟುವಟಿಕೆಗಳು ಕಂಡುಬಂದಿದ್ದು, ಅವುಗಳಿಗೆ ಭದ್ರತಾ ಅಪಾಯ ಉಂಟಾಗಿದೆ. ಕೆನಡಾ ಸರ್ಕಾರ ಭಾರತದ ರಾಜತಾಂತ್ರಿಕ ಸಿಬ್ಬಂದಿಗೆ ರಕ್ಷಣೆ ಒದಗಿಸಬೇಕು. ಅಲ್ಲಿಯ ರಾಜಕೀಯ ಮುಖಂಡರು ಉಗ್ರ ಚಟುವಟಿಕೆಗೆ ಪ್ರಚೋದನೆ ನೀಡುವಂಥ ಹೇಳಿಕೆ ನೀಡದಂತೆ ಎಚ್ಚರ ವಹಿಸಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಕೆನಡಾ ಪ್ರಧಾನಿ ಅವರು ರೈತ ಪ್ರತಿಭಟನೆ ವಿಚಾರದಲ್ಲಿ ನೀಡಿದ ಹೇಳಿಕೆ ತಪ್ಪು ಗ್ರಹಿಕೆಯಿಂದ ಕೂಡಿದೆ. ಪ್ರಜಾತಂತ್ರೀಯ ದೇಶದ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದ್ದರಿಂದ ಇಂಥ ಹೇಳಿಕೆಗಳು ಅನಗತ್ಯವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಮಂಗಳವಾರವೇ ಆಕ್ಷೇಪ ವ್ಯಕ್ತಪಡಿಸಿದ್ದರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ