ನವ ದೆಹಲಿ (ಅಕ್ಟೋಬರ್ 29); ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವ್ಯಾಪಕ ಸುಧಾರಣೆಗಳಿಂದಾಗಿ ಈ ಎರಡೂ ಕ್ಷೇತ್ರಗಳು ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಲಿವೆ, ಭಾರತದ ಮಟ್ಟಿಗೆ ಕಾರ್ಮಿಕರ ಯೋಗಕ್ಷೇಮಕ್ಕಾಗಿ ಸಾಕಷ್ಟು ಕಾನೂನು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಿಂದ ಎಲ್ಲರಿಗೂ ಸಹಕಾರಿಯಾಗಿದೆ. ಅಲ್ಲದೆ, ಕಾರ್ಮಿಕರು ಮತ್ತು ರೈತರ ಜೀವನ ಮತ್ತಷ್ಟು ಸುಧಾರಣೆಯಾಗಲಿದೆ. ಈ ಮೂಲಕ ಭಾರತದ ಆರ್ಥಿಕತೆ ಮತ್ತೆ ಚೇತರಿಕೆಯ ಹಾದಿಗೆ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. “ದಿ ಎಕನಾಮಿಕ್ ಟೈಮ್”ಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ಈ ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸಂದರ್ಶನದ ವೇಳೆ ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾವನ್ನು ಬದಲಿಸುವ ಭಾರತದ ಭವಿಷ್ಯದ ಬಗೆಗಿನ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, “ಕೆಲವು ದೇಶಗಳಿಗೆ ಪರ್ಯಾಯವಾಗಿ ಬೆಳೆಯುವುದು ಭಾರತದ ಉದ್ದೇಶವಲ್ಲ. ಬದಲಿಗೆ ಭಾರತ ಅನನ್ಯ ಅವಕಾಶಗಳನ್ನು ನೀಡುವ ರಾಷ್ಟ್ರ. ಮಾರುಕಟ್ಟೆ ಸುಧಾರಣೆ ಹಾಗೂ ಶಕ್ತಿಗಳನ್ನು ನಂಬುವ ಹೊಸ ಭಾರತ ಎಂದು ಜಗತ್ತಿಗೇ ನಾವು ಸಂಕೇತಿಸುತ್ತಿದ್ದೇವೆ. ಈ ನಡುವೆ ಉತ್ಪಾದನೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಕೈಗೊಂಡ ಸುಧಾರಣೆಗಳು ಬೆಳವಣಿಗೆಯ ದರ ಮತ್ತು ಆದಾಯ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೋವಿಡ್-19 ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, “ಭಾರತದಲ್ಲಿ ಕೊರೋನಾ ಸೋಂಕು ಹರಡುವ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಈ ಹಂತದಲ್ಲಿ ದೇಶದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ನಾವು ಮಾಡಬೇಕು. ಈ ಮೂಲಕ ಮತ್ತೆ ಆರ್ಥಿಕತೆಯನ್ನು ಸರಿಯಾದ ದಾರಿಗೆ ಮರಳಿಸಬೇಕು” ಎಂದು ತಿಳಿಸಿದ್ದಾರೆ.
"ಮೊದಲನೆಯದಾಗಿ, ಕೃಷಿಯಲ್ಲಿ, ನಾನು ಮೊದಲೇ ಹೇಳಿದಂತೆ, ನಮ್ಮ ರೈತರು ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ನಾವು ಉತ್ತಮ ಬೆಂಬಲ ಬೆಲೆ ನೀಡುವ ಮೂಲಕ ಎಲ್ಲಾ ಬೆಳೆಗಳನ್ನೂ ಸಂಗ್ರಹಿಸಿದ್ದೇವೆ. ಈ ಎರಡು ಅಂಶಗಳು ದಾಖಲೆಗಳಾಗಿವೆ. ದಾಖಲೆ ಉತ್ಪಾದನೆ ಮತ್ತು ದಾಖಲೆ ಖರೀದಿ - ಗಮನಾರ್ಹ ಆದಾಯವನ್ನು ಒಳಗೊಳ್ಳಲಿವೆ. ಗ್ರಾಮೀಣ ಆರ್ಥಿಕತೆಯು ಬೇಡಿಕೆಯ ಉತ್ಪಾದನೆಯ ತನ್ನದೇ ಆದ ಸದ್ಗುಣ ಚಕ್ರವನ್ನು ಹೊಂದಿರುತ್ತದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ