ಐದು ಟ್ರಿಲಿಯನ್ ಆರ್ಥಿಕತೆ ಸಾಧ್ಯವಾಗಲು ಭಾರತಕ್ಕೆ ಜಾಗತಿಕ ಮಟ್ಟದ ಬ್ಯಾಂಕ್​ಗಳು ಅಗತ್ಯ: ಸಿಇಎ

ಜಾಗತಿಕ ಟಾಪ್-100 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಎಸ್​ಬಿಐ ಮಾತ್ರ ಇದೆ. ದೇಶದ ಆರ್ಥಿಕತೆಯ ಗಾತ್ರಕ್ಕೆ ಹೋಲಿಸಿದರೆ ಈ ಪಟ್ಟಿಯಲ್ಲಿ ಕನಿಷ್ಠ 6 ಭಾರತೀಯ ಬ್ಯಾಂಕುಗಳಾದರೂ ಇರಬೇಕಿತ್ತು ಎನ್ನುತ್ತಾರೆ ಮುಖ್ಯ ಆರ್ಥಿಕ ಸಲಹೆಗಾರ.

ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್

ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್

  • News18
  • Last Updated :
  • Share this:
ನವದೆಹಲಿ(ಆ. 24): ಭಾರತದ ಆರ್ಥಿಕ ಬೆಳವಣಿಗೆಗೆ ಜಾಗತಿಕ ಮಟ್ಟದ ಬ್ಯಾಂಕ್​ಗಳು ಅಗತ್ಯ ಇವೆ. ಈಗ ಜಾಗತಿಕ ಟಾಪ್-100 ಬ್ಯಾಂಕ್​ಗಳಲ್ಲಿ ಎಸ್​ಬಿಐ ಮಾತ್ರ ಇದೆ. ಇನ್ನಷ್ಟು ಭಾರತೀಯ ಬ್ಯಾಂಕ್​ಗಳು ಈ ಮಟ್ಟಕ್ಕೆ ಬಂದಲ್ಲಿ ಭಾರತ 2024-25ರಲ್ಲಿ 5 ಟ್ರಿಲಿಯನ್ ಡಾಲರ್ (ಸುಮಾರು 370 ಲಕ್ಷ ಕೋಟಿ ರೂಪಾಯಿ) ಮೊತ್ತದ ಆರ್ಥಿಕತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ನಡೆದ ಬಂಧನ್ ಬ್ಯಾಂಕ್​ನ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಬ್ಯಾಂಕಿಂಗ್ ವಲಯದ ಬಲವರ್ಧನೆಯ ಮಹತ್ವವನ್ನು ತಿಳಿಸಿದ್ದಾರೆ.

ಜಾಗತಿಕ ಅಗ್ರ-100 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಎಸ್​ಬಿಐ ಬ್ಯಾಂಕು 55ನೇ ಸ್ಥಾನದಲ್ಲಿದೆ. ಈ ನೂರರ ಪಟ್ಟಿಯಲ್ಲಿರುವುದು ಇದೊಂದೇ ಭಾರತೀಯ ಬ್ಯಾಂಕು. ಅಮೆರಿಕದ 12 ಬ್ಯಾಂಕುಗಳು ಈ ಪಟ್ಟಿಯಲ್ಲಿವೆ. ಚೀನಾ ದೇಶ ಈ ವಿಚಾರದಲ್ಲಿ ಮುಂಚೂಣಿಯಲ್ಲಿದೆ. 18 ಚೀನೀ ಬ್ಯಾಂಕುಗಳು ಟಾಪ್-100 ಲಿಸ್ಟ್​ನಲ್ಲಿವೆ. ಭಾರತದ ಆರ್ಥಿಕತೆಯ ಗಾತ್ರ ಗಮನಿಸಿದರೆ ಬ್ಯಾಂಕುಗಳ ವಿಚಾರದಲ್ಲಿ ಭಾರತ ತೀರಾ ಹಿಂದೆ ಎಂಬುದು ಸಿಇಎ ಅನಿಸಿಕೆ.

ಇದನ್ನೂ ಓದಿ: ಸರ್ಕಾರದ ನೂತನ ಉದ್ಯೋಗ ತಾಣದಲ್ಲಿ 40 ದಿನದಲ್ಲಿ 69 ಲಕ್ಷ ನೊಂದಣಿ; ಕೆಲಸ ಸಿಕ್ಕಿದ್ದು ಎಷ್ಟು?

“ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ತನ್ನ ಆರ್ಥಿಕ ಗಾತ್ರಕ್ಕೆ ತಕ್ಕಂತೆ ಭಾರತದ ಬ್ಯಾಂಕಿಂಗ್ ವಲಯದ ಶಕ್ತಿ ಬೆಳೆದಿದ್ದರೆ ನಾವು ದಕ್ಷಿಣ ಕೊರಿಯಾಗೆ ಸಮಾನವಾಗಿರಬೇಕಿತ್ತು. ಜಾಗತಿಕ-100 ಪಟ್ಟಿಯಲ್ಲಿ ಆರು ಬ್ಯಾಂಕುಗಳನ್ನ ಹೊಂದಿರಬೇಕಿತ್ತು. ಆದರೆ, ಒಂದೇ ಒಂದು ಬ್ಯಾಂಕು ಮಾತ್ರ ಈ ಪಟ್ಟಿಯಲ್ಲಿದೆ” ಎಂದು ಸಿಇಎ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.

“ಭಾರತಕ್ಕೆ ಹೋಲಿಸಿದರೆ ಬಹಳ ಪುಟ್ಟದೆನಿಸುವ ಫಿನ್​ಲೆಂಡ್, ಡೆನ್ಮಾರ್ಕ್, ಬೆಲ್ಜಿಯಂ, ಆಸ್ಟ್ರಿಯಾ, ನಾರ್ವೆ ಮೊದಲಾದ ದೇಶಗಳು ಕನಿಷ್ಠ ಒಂದಾದರೂ ಅಗ್ರಮಾನ್ಯ ಬ್ಯಾಂಕುಗಳನ್ನ ಹೊಂದಿವೆ. ಭಾರತದ ಆರ್ಥಿಕತೆಯ ಆರನೇ ಒಂದು ಭಾಗ ಇರುವ ಸ್ವೀಡನ್ ಹಾಗೂ ಎಂಟನೇ ಒಂದು ಭಾಗ ಇರುವ ಸಿಂಗಾಪುರ ದೇಶಗಳ 3 ಬ್ಯಾಂಕುಗಳು ಜಾಗತಿಕ ಅಗ್ರ-100 ಪಟ್ಟಿಯಲ್ಲಿವೆ” ಎಂದು ಮುಖ್ಯ ಆರ್ಥಿಕ ಸಲಹೆಗಾರರು ವಿವರಿಸಿದ್ದಾರೆ.

“ವಿದೆಶೀ ನೆಲದಲ್ಲಿ ಪಂದ್ಯ ಗೆಲ್ಲುವುದು ಹೇಗೆಂದು ಧೋನಿ ತೋರಿಸಿಕೊಟ್ಟಂತೆ ಭಾರತದ ಬ್ಯಾಂಕಿಂಗ್ ವಲಯ ಕೂಡ ಜಾಗತಿಕ ಗುಣಮಟ್ಟಕ್ಕೆ ಏರಬೇಕು. ವಿಶ್ವ ಶ್ರೇಯಾಂಕದಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸಬೇಕು. ಭಾರತ ಈಗ ಸಣ್ಣ ಆರ್ಥಿಕತೆಯ ದೇಶವಲ್ಲ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. ನಾವು ಐದು ಟ್ರಿಲಿಯನ್ ಡಾಲರ್ ಎಕನಾಮಿಯ ಗುರಿ ಸಾಧಿಸಬೇಕಾದರೆ ನಮ್ಮ ಆರ್ಥಿಕ ಗಾತ್ರಕ್ಕೆ ತಕ್ಕುದಾಗಿಯಾದರೂ ಬ್ಯಾಂಕಿಂಗ್ ವಲಯ ಇರಬೇಕು” ಎಂದಿದ್ದಾರೆ.

ಇದನ್ನೂ ಓದಿ: ನವೆಂಬರ್ 2ಕ್ಕೆ ಭೂಮಿಗೆ ಬಡಿಯುತ್ತಾ ಈ ಕ್ಷುದ್ರಗ್ರಹ?; ಚಾನ್ಸ್ ಇದೆ ಅಂತಿದೆ ನಾಸಾ

ಬ್ಯಾಂಕಿಂಗ್ ವಲಯದ ಪುಷ್ಟಿಗೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ಕೊಟ್ಟ ಅವರು, ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚೆಚ್ಚು ತಂತ್ರಜ್ಞಾನ ಚಾಲಿತವಾಗಿದೆ. ಡಾಟಾ ಅನಾಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್​ನಂಥ ಆಧುನಿಕ ಟೆಕ್ನಾಲಜಿಯನ್ನು ಬಳಕೆ ಮಾಡಬೇಕು. ಇದರಿಂದ ಸರಿಯಾದ ದತ್ತಾಂಶಗಳ ಸಹಾಯದಿಂದ ಸಾಲ ಮರುಪಾವತಿ ಮಾಡದವರ ಚಿತಾವಣೆಗಳನ್ನ ಮುಂಚಿತವಾಗಿಯೇ ಪತ್ತೆ ಹಚ್ಚಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಜಾಗತಿಕ ಮಟ್ಟದ ಬ್ಯಾಂಕುಗಳಷ್ಟೇ ಅಲ್ಲ, ಭಾರತಕ್ಕೆ ಬ್ಯಾಂಕುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಅಗತ್ಯವೂ ಇದೆ ಎಂದಿರುವ ಅವರು, ಭಾರತದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಅಮೆರಿಕದಲ್ಲಿ ಭಾರತದಕ್ಕಿಂತ 20 ಪಟ್ಟು ಹೆಚ್ಚು ಬ್ಯಾಂಕುಗಳಿವೆ. ಬ್ಯಾಂಕುಗಳ ಸಂಖ್ಯೆ ಹೆಚ್ಚಾದಷ್ಟು ಸ್ಪರ್ಧಾತ್ಮಕತೆ ಹೆಚ್ಚಾಗಿ ಅಂತಿಮವಾಗಿ ಗ್ರಾಹಕರಿಗೆ ಲಾಭಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

(ಪಿಟಿಐ ಸುದ್ದಿ ಸಂಸ್ಥೆ ವರದಿ)
Published by:Vijayasarthy SN
First published: