ನವದೆಹಲಿ (ಡಿ. 23): ಮೂರು ತಿಂಗಳ ಹಿಂದೆ ವೊಡಾಫೋನ್ ವಿರುದ್ಧ ಹಿಮ್ಮುಖ ತೆರಿಗೆ ವಿಚಾರದಲ್ಲಿ ಕಾನೂನು ಸಮರ ಸೋತಿದ್ದ ಭಾರತ ಸರ್ಕಾರ ಇದೀಗ ಅಂತರರಾಷ್ಟ್ರೀಯ ತೈಲ ದಿಗ್ಗಜ ಕೇರ್ನ್ ಎನರ್ಜಿ ಎದುರೂ ಸೋಲಪ್ಪಿದೆ. ಕೇಂದ್ರದ ತೆರಿಗೆ ಇಲಾಖೆ ಮತ್ತು ಕೇರ್ನ್ ಎನರ್ಜಿ ಸಂಸ್ಥೆ ನಡುವಿನ ತೆರಿಗೆ ವ್ಯಾಜ್ಯದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಐಸಿಜೆ ತೀರ್ಪು ನೀಡಿದ್ದು ಕೇರ್ನ್ ಸಂಸ್ಥೆಗೆ 8 ಸಾವಿರ ಕೋಟಿ ನಷ್ಟವನ್ನು ಭರಿಸಿಕೊಡುವಂತೆ ಭಾರತ ಸರ್ಕಾರಕ್ಕೆ ಸೂಚಿಸಿದೆ. ಕೇರ್ನ್ ಎನರ್ಜಿ ಸಂಸ್ಥೆಯಿಂದ 24,500 ಕೋಟಿ ರೂ ತೆರಿಗೆ ವಸೂಲೆ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆ. 2006-07ರಲ್ಲಿ ಕೇರ್ನ್ ಸಂಸ್ಥೆಯ ಪುನಾರಚನೆ ವೇಳೆ ಗಳಿಸಿದ ಲಾಭದ ಮೇಲೆ ಸರಕಾರ ತೆರಿಗೆ ವಿಧಿಸಲು ತೆಗೆದುಕೊಂಡ ಕ್ರಮದ ವಿರುದ್ಧ ಕೇರ್ನ್ ಸಂಸ್ಥೆ ಐಸಿಜೆ ಮೆಟ್ಟಿಲೇರಿತ್ತು. ಇದು ತೆರಿಗೆ ವಿವಾದವಾದ್ದರಿಂದ ಐಸಿಜೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಭಾರತ ಸರ್ಕಾರದ ವಾದವನ್ನು ತಳ್ಳಿಹಾಕಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಇದು ತೆರಿಗೆ ಸಂಬಂಧಿಸಿದ ಹೂಡಿಕೆ ವ್ಯಾಜ್ಯವಾದ್ದರಿಂದ ತನ್ನ ನ್ಯಾಯ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ಹಾಗೆಯೇ, ಭಾರತ ಸರ್ಕಾರದ ಹಿಮ್ಜುಖ ತೆರಿಗೆ ಬೇಡಿಕೆಯು ದ್ವಿಪಕ್ಷೀಯ ಹೂಡಿಕೆ ಭದ್ರತೆ ಒಪ್ಪಂದದ ಆಶಯಕ್ಕೆ ವಿರುದ್ಧವಾಗಿದೆ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂದಿದೆ.
ಏನಿದು ವ್ಯಾಜ್ಯ?: 2010-11ರಲ್ಲಿ ಕೇರ್ನ್ ಎನರ್ಜಿ ಸಂಸ್ಥೆ ತನ್ನ ಅಧೀನದ ಕೇರ್ನ್ ಇಂಡಿಯಾ ಸಂಸ್ಥೆಯನ್ನ ವೇದಾಂತಾ ಸಂಸ್ಥೆಗೆ ಮಾರಾಟ ಮಾಡಿತ್ತು. 2006ರಲ್ಲಿ ಕೇರ್ನ್ ಸಂಸ್ಥೆ ತನ್ನ ಸಮೂಹ ಸಂಸ್ಥೆಗಳ ಪುನಾರಚನೆ ಮಾಡಿದ್ದರ ಸಂಬಂಧ ತೆರಿಗೆ ಇಲಾಖೆ ಮಾಹಿತಿ ಕೋರಿ 2014ರಲ್ಲಿ ನೋಟೀಸ್ ನೀಡಿತ್ತು. ಅಲ್ಲದೇ ಕೇರ್ನ್ ಇಂಡಿಯಾದಲ್ಲಿ ಕೇರ್ನ್ ಎನರ್ಜಿ ಹೊಂದಿದ್ದ ಶೇ. 10ರ ಷೇರುಗಳನ್ನ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತು. ಸಂಘಟನೆಯ ಪುನಾರಚನೆಯಿಂದ ಕೇರ್ನ್ ಎನರ್ಜಿ ಮಾಡಿಕೊಂಡಿರುವ ಲಾಭಕ್ಕೆ ತೆರಿಗೆ ಪಾವತಿ ಮಾಡಬೇಕೆಂದು 2015ರಲ್ಲಿ ಇಲಾಖೆ ನೋಟೀಸ್ ನೀಡಿತು. 2017ರಲ್ಲಿ ಕೇರ್ನ್ ಇಂಡಿಯಾ ಮತ್ತು ವೇದಾಂತಾ ವಿಲೀನ ಆದಾಗ ಕೇರ್ನ್ ಎನರ್ಜಿ ಸಂಸ್ಥೆ ಹೊಂದಿದ್ದ ಶೇ. 5ರಷ್ಟು ಪಾಲನ್ನೂ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿತ್ತು. ಇವುಗಳಲ್ಲಿ ಕೆಲ ಷೇರುಗಳನ್ನೂ ಇಲಾಖೆ ಮಾರಾಟ ಮಾಡಿತ್ತು.
ಇದನ್ನೂ ಓದಿ: DDC Election Results - ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ: ಜನತಾ ಮೈತ್ರಿ ಮೇಲುಗೈ; ಬಿಜೆಪಿ ಅತಿದೊಡ್ಡ ಪಕ್ಷ
ತೆರಿಗೆ ಇಲಾಖೆಯ ಈ ಕ್ರಮದ ವಿರುದ್ಧ ಕೇರ್ನ್ ಎನರ್ಜಿ ಐಸಿಜೆ ಮೆಟ್ಟಿಲೇರಿತ್ತು. 2014 ಮತ್ತು 2018ರಲ್ಲಿ ಮುಟ್ಟುಗೋಲು ಹಾಕಿಕೊಂಡ ಷೇರುಗಳು ಹಾಗೂ ಮಾರಾಟ ಮಾಡಿದ ಷೇರುಗಳಿಂದ ಬಂದ ಹಣವನ್ನೂ ಒಳಗೊಂಡಂತೆ 8 ಸಾವಿರ ಕೋಟಿ ರೂ ನಷ್ಟವನ್ನು ಕೇರ್ನ್ ಎನರ್ಜಿಗೆ ಭರಿಸಿಕೊಡಬೇಕೆಂದು ಸರ್ಕಾರಕ್ಕೆ ಐಸಿಜೆ ಸೂಚಿಸಿದೆ. 2018ರಲ್ಲಿ ಕೇರ್ನ್ ಷೇರುಗಳನ್ನ ಸರ್ಕಾರ 220-240 ರೂನಂತೆ ಮಾರಾಟ ಮಾಡಿತ್ತಾದರೂ 2014ರಲ್ಲಿ ಇದ್ದ 330 ರೂ ಬೆಲೆ ಪ್ರಕಾರ ಷೇರುಗಳಿಗೆ ಹಣ ಮರುಪಾವತಿ ಮಾಡಬೇಕೆಂದು ಸರ್ಕಾರಕ್ಕೆ ಆದೇಶಿಸಿದೆ.
ಬಿಜೆಪಿ ನಾಯಕರ ಹಿಂದಿನ ಹೇಳಿಕೆಗಳೂ ಕೇರ್ನ್ಗೆ ಪೂರಕ: ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ವ್ಯಾಜ್ಯಗಳು ಹಾಗೂ ಹಿಮ್ಮುಖ ತೆರಿಗೆ ನೀತಿಯ ತಿದ್ದುಪಡಿ ವಿರುದ್ಧ ಅರುಣ್ ಜೇಟ್ಲಿ ಅವರಂಥ ಹಿರಿಯ ಬಿಜೆಪಿ ನಾಯಕರು ಕಟು ಟೀಕೆಗಳನ್ನ ಮಾಡಿದ್ದರು. ಅವನ್ನು ತೆರಿಗೆ ಭಯೋತ್ಪಾದನೆ ಎಂದೂ ಬಣ್ಣಿಸಿದ್ದರು. ಈ ವಿಚಾರವನ್ನು ಕೇರ್ನ್ ಎನರ್ಜಿ ಸಂಸ್ಥೆ ತನ್ನ ವಾದಕ್ಕೆ ಬಳಸಿಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ