ಮಂಕಿಪಾಕ್ಸ್ (MonkeyPox) ಸದ್ಯ ಎಲ್ಲೆಡೆ ಆತಂಕ ಸೃಷ್ಟಿಸುತ್ತಿರುವ ಸೋಂಕು. ದೇಶದ ಹಲವೆಡೆ ಮಂಕಿಪಾಕ್ಸ್ ಸೋಂಕು ಸದ್ದಿಲ್ಲದೇ ಹರಡುತ್ತಿದೆ. ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಹೆಚ್ಚಾಗುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ದೇಶದ ಕೆಲ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ಪ್ರಕರಣ, ಕರ್ನಾಟಕ (Karnataka)ಕ್ಕೂ ಕಾಲಿಟ್ಟಿದೆ. ರಾಜ್ಯದಲ್ಲಿ ಮೊದಲ (First) ಮಂಕಿಪಾಕ್ಸ್ ಕೇಸ್ ಇಂದು ಪತ್ತೆಯಾಗಿದೆ. ಭಾರತದಲ್ಲಿ ಮೊದಲು ಮಂಕಿಪಾಕ್ಸ್ ಕಾಣಿಸಿಕೊಂಡಿದ್ದ ವ್ಯಕ್ತಿಯು ಚೇತರಿಸಿಕೊಂಡಿದ್ದಾರೆ (Recovers). ಚರ್ಮದ ಮೇಲಿದ್ದ ಕಲೆಗಳು ಕೂಡ (Skin rash) ವಾಸಿಯಾಗಿವೆ. ಸೋಂಕು ತಗುಲಿದ್ದ 35 ವರ್ಷದ ಕೇರಳದ (Kerala) ಕೊಲ್ಲಂ ಮೂಲದ ವ್ಯಕ್ತಿ ಇಂದು ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಡಿಸ್ಚಾರ್ಜ್ ಆಗಿದ್ದಾರೆ. ಜುಲೈ 14 ರಂದು ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು.
ಕೇರಳದಲ್ಲಿ ಮೊದಲ ಮಂಕಿಪಾಕ್ಸ್ ಪತ್ತೆಯಾಗಿತ್ತು
ಯುಎಇಯಿಂದ ಜುಲೈ 12ರಂದು ಕೇರಳದ ಕೊಲ್ಲಂ ಮೂಲದ 35 ವರ್ಷದ ವ್ಯಕ್ತಿ ನಂತಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಪರೀಕ್ಷೆ ಮಾಡಿದ್ದಾಗ ಜುಲೈ 14ರಂದು ಮಂಕಿಪಾಕ್ಸ್ ಇರೋದು ದೃಢವಾಗಿತ್ತು. ಅಂದೇ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇವತ್ತು ಅವರು ಗುಣಮುಖವಾಗಿದ್ದು, ಮನೆಗೆ ಹೋಗಿದ್ದಾರೆ.
ಸೋಂಕು ತಗುಲಿದ್ದ ವ್ಯಕ್ತಿಯು ಆರೋಗ್ಯವಾಗಿದ್ದಾರೆ
"ಎಲ್ಲ ಮಾದರಿಗಳು, ಎರಡು ಬಾರಿ ನೆಗೆಟಿವ್ ಆಗಿ ಬಂದಿವೆ. ರೋಗಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದ ಉಬ್ಬುಗಳು ಸಂಪೂರ್ಣವಾಗಿ ಗುಣಮುಖವಾಗಿವೆ. ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ" ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಇದನ್ನೂ ಓದಿ: Monkeypox: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ
ಕೇರಳದಲ್ಲಿ ಹೈ ಅಲರ್ಟ್
ಕೇರಳದಲ್ಲೇ ಮೊದಲು ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಮೂರು ಪ್ರಕರಣಗಳು ಕೇರಳದಲ್ಲಿ ದೃಢ ಪಟ್ಟಿದ್ದವು. ಆದ್ದರಿಂದ ಕೇರಳದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ನಂತರ ನಾಲ್ಕನೇ ಕೇಸ್ ದೆಹಲಿಯಲ್ಲಿ ಕಾಣಿಸಿಕೊಂಡಿತ್ತು.
ಕರ್ನಾಟಕಕ್ಕೂ ಕಾಲಿಟ್ಟ ಸೋಂಕು
ಮಂಕಿಪಾಕ್ಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಇಂದು ಪತ್ತೆಯಾಗಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಲಕ್ಷಣಗಳಿರೋದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಅವರನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸೂಚನೆ ನೀಡಿದಂತೆ 72 ಗಂಟೆಗಳ ಮಧ್ಯಂತರದಲ್ಲಿ 2 ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದಿದೆ.
ಇದನ್ನೂ ಓದಿ: Explained: ಕೋವಿಡ್ನಂತೆ ಭಾರತವನ್ನೂ ಕಾಡಲಿದೆಯಾ ಮಂಕಿಪಾಕ್ಸ್? ಈ ಬಗ್ಗೆ ಆರೋಗ್ಯ ತಜ್ಞರು ಏನಂತಾರೆ?
ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು
ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು ಮಾಹಿತಿ ನೀಡಿದ್ದು, ಜುಲೈ.4ರಂದು ಆಫ್ರಿಕಾದಿಂದ ಬೆಂಗಳೂರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳೋದಕ್ಕೆ ಅವರು ಬಂದಿದ್ದರು. ಅವರ ಮೈಮೇಲೆ ತುರಿಕೆ ಹಾಗೂ ದೇಹದ ಕೆಲ ಭಾಗದಲ್ಲಿ ಸಣ್ಣ ಗುಳ್ಳೆಗಳಿದ್ದವು. ಹೀಗೆ ಮಂಕಿಪಾಕ್ಸ್ ಗುಣಲಕ್ಷಣಗಳಿದ್ದ ಕಾರಣ, ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ನಿಗಾ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೇರಳದ ವ್ಯಕ್ತಿಯೋರ್ವರಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆಯಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸ್ಕ್ರೀನಿಂಗ್ ಆರಂಭಿಸಲಾಗಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದ್ದು, ಅವರು ತೆರಳುವ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಅಲ್ಲದೇ 10 ಹಾಸಿಗೆಗಳ ವಿಶೇಷ ವಾರ್ಡ್ಗನ್ನು ಸಹ ಮಂಗಳೂರಿನಲ್ಲಿ ಆರಂಭಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ