Sushma ChakreSushma Chakre
|
news18-kannada Updated:January 8, 2021, 3:26 PM IST
ಸಾಂದರ್ಭಿಕ ಚಿತ್ರ.
ನವದೆಹಲಿ (ಡಿ. 30): ಭಾರತದಲ್ಲಿ ಇಂಗ್ಲೆಂಡ್ನಿಂದ ಬಂದ ಪ್ರಯಾಣಿಕರಿಂದ (Mutant corona) ಕೊರೋನಾ ಸೋಂಕು ಮತ್ತೆ ಹರಡುತ್ತಿದೆ. ಭಾರತದಲ್ಲಿ 20,550 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 286 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಭಾರತದಲ್ಲಿ 6 ಇದ್ದ ಭಯಾನಕ ರೂಪಾಂತರಿ ಕೊರೋನಾ ಸೋಂಕಿತರ ಸಂಖ್ಯೆ ಇಂದು 20ಕ್ಕೆ ಏರಿಕೆಯಾಗಿದೆ. ಹೀಗಾಗಿ, ಭಾರತದಲ್ಲಿ ಇಂಗ್ಲೆಂಡ್ನ ವಿಮಾನಗಳ ಮೇಲೆ ಡಿ. 31ರವರೆಗೆ ಹೇರಲಾಗಿದ್ದ ನಿಷೇಧವನ್ನು ಜನವರಿ 7ರವರೆಗೆ ವಿಸ್ತರಿಸಲಾಗಿದೆ.
ಇಂಗ್ಲೆಂಡ್ನಿಂದ (Britain) ಭಾರತಕ್ಕೆ ಆಗಮಿಸಿರುವ ಪ್ರಯಾಣಿಕರಿಂದಲೇ ರೂಪಾಂತರಿ ಕೊರೋನಾ ಸೋಂಕು Variant Coronavirus
ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಭಾರತ ಸರ್ಕಾರ ಇಂಗ್ಲೆಂಡ್ನಿಂದ ಆಗಮಿಸುವ ಮತ್ತು ತೆರಳುವ ವಿಮಾನಗಳಿಗೆ ಜ. 7ರವರೆಗೆ ನಿಷೇಧ ಹೇರಿದೆ. ಇಂಗ್ಲೆಂಡ್ನಲ್ಲಿ ರೂಪಾಂತರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅದರ ಪರಿಣಾಮವಾಗಿ ಭಾರತದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಇಂಗ್ಲೆಂಡ್ನಿಂದ ಆಗಮಿಸುವ ವಿಮಾನಗಳಿಗೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಜನವರಿ 7ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಇಂಗ್ಲೆಂಡ್ನಿಂದ ಆಗಮಿಸಿರುವವರ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲೂ ರೂಪಾಂತರಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮೂರು ಮತ್ತು ಶಿವಮೊಗ್ಗದಲ್ಲಿ 4 ರೂಪಾಂತರಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇವರೆಲ್ಲರೂ ಕಳೆದ ವಾರ ಇಂಗ್ಲೆಂಡ್ನಿಂದ ವಿಮಾನದಲ್ಲಿ ಆಗಮಿಸಿದವರಾಗಿದ್ದಾರೆ.
ಇದರ ಜೊತೆಗೆ ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂಗ್ಲೆಂಡ್ನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಆಗದೆ ನಾಪತ್ತೆಯಾಗಿದ್ದಾರೆ. ಇವರಿಂದಲೂ ಕೊರೋನಾ ಹರಡುವ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮೂವರಿಗೆ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಖಚಿತವಾಗಿದೆ. ಆ ರೋಗಿಗಳನ್ನು ಐಸೋಲೇಷನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗದ ಒಂದೇ ಕುಟುಂಬದ ನಾಲ್ಕು ಮಂದಿಗೆ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಆ ಕುಟುಂಬ ವಾಸಿಸುತ್ತಿದ್ದ ಮನೆಯ ಸುತ್ತ 100 ಮೀ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
Published by:
Sushma Chakre
First published:
December 30, 2020, 11:50 AM IST