GDP Growth - ಆರ್ಥಿಕ ಹಿಂಜರಿತದಿಂದ ಹೊರಬಂದ ಭಾರತ; ಜಿಡಿಪಿ ಶೇ. 0.4 ವೃದ್ಧಿ

2020ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ದೇಶದ ಆರ್ಥಿಕತೆ ಶೇ. 0.4ರಷ್ಟು ಬೆಳವಣಿಗೆ ಹೊಂದಿದೆ ಎಂದು ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ ಮಾಹಿತಿ ನೀಡಿದೆ. ಇದರೊಂದಿಗೆ ಜಿಡಿಪಿ ನಿರೀಕ್ಷೆಯಂತೆ ವಿ ಆಕಾರದಲ್ಲಿ ಚೇತರಿಕೆ ಕಾಣುತ್ತಿರುವ ಸೂಚನೆ ಸಿಕ್ಕಿದೆ.

ತಯಾರಿಕಾ ವಲಯದ ಸಾಂದರ್ಭಿಕ ಚಿತ್ರ

ತಯಾರಿಕಾ ವಲಯದ ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಫೆ. 27): ಕಳೆದ ವರ್ಷದ ಎರಡು ತ್ರೈಮಾಸಿಕ ಅವಧಿಯಲ್ಲಿ ಪ್ರಪಾತಕ್ಕೆ ಕುಸಿದಿದ್ದ ದೇಶದ ಆರ್ಥಿಕತೆ ಕೊನೆಯ ತ್ರೈಮಾಸಿಕದಲ್ಲಿ ಗಣನೀಯವಾಗಿ ವೃದ್ಧಿ ಸಾಧಿಸಿದೆ. 2020ರ ವರ್ಷದ ಡಿಸೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 0.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO - National Statistics Office) ನಿನ್ನೆ ಸಂಜೆ ಮಾಹಿತಿ ಬಿಡುಗಡೆ ಮಾಡಿದೆ. ಇದರೊಂದಿಗೆ ಭಾರತದ ಆರ್ಥಿಕತೆಯು V ಆಕಾರದಲ್ಲಿ ಚೇತರಿಕೆಯಾಗುತ್ತದೆ ಎಂದು ಸರ್ಕಾರ ಮಾಡುತ್ತಿದ್ದ ವಾದಕ್ಕೆ ಪುಷ್ಟಿ ಸಿಕ್ಕಿದೆ.

  2020ರಲ್ಲಿ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಘೋಷಿಸಿದ ಬಳಿಕ ಆರ್ಥಿಕತೆ ಸ್ತಬ್ದಗೊಂಡಿತ್ತು. ತತ್​ಪರಿಣಾಮವಾಗಿ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಮೈನಸ್ 24.4% ಕುಸಿತಗೊಂಡಿತ್ತು. ಲಾಕ್​ಡೌನ್ ತೆರವಾದ ಬಳಿಕ ಆರ್ಥಿಕತೆ ನಿಧಾನಗತಿಯಲ್ಲಿ ಚೇತರಿಸಿಕೊಂಡಿತು. ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕುಸಿತ ಮೈನಸ್ 7.3%ಗೆ ನಿಂತಿತು. ಇದೀಗ ಕ್ಯಾಲೆಂಡರ್ ವರ್ಷದ ಕೊನೆಯ ತ್ರೈಮಾಸಿಕದಲ್ಲಿ 0.4% ಜಿಡಿಪಿ ವೃದ್ಧಿಯಾಗಿರುವುದು ಗಮನಾರ್ಹ. ಇದೀಗ ವಿವಿಧ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಗರಿಗೆದರಿರುವ ಹಿನ್ನೆಲೆಯಲ್ಲಿ ಈ ಕ್ಯಾಲೆಂಡರ್ ವರ್ಷ ಜಿಡಿಪಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುವ ಆಶಾಭಾವನೆ ಮೂಡಿಸಿದೆ.

  ಇದನ್ನೂ ಓದಿ: Gold Loan Waiver: ಕೃಷಿ ಸಾಲದ ಬಳಿಕ ಚಿನ್ನದ ಮೇಲಿನ ಸಾಲ ಮನ್ನಾ ಘೋಷಿಸಿದ ತಮಿಳುನಾಡು ಸಿಎಂ

  ಲಾಕ್​ಡೌನ್ ವೇಳೆ ದೇಶದ ಆರ್ಥಿಕತೆಯ ಬುನಾದಿಯಾಗಿದ್ದ ಕೃಷಿ ವಲಯ ಈ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಶೇ. 3.9ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ, ವಿದ್ಯುತ್, ಗ್ಯಾಸ್, ನೀರು ಸರಬರಾಜು ಇತ್ಯಾದಿ ಸೇವೆಗಳ ವಲಯ ಶೇ. 7.3ರಷ್ಟು ವೃದ್ಧಿ ಸಾಧಿಸಿರುವುದು ಎನ್​ಎಸ್​ಒ ಅಂಕಿ ಅಂಶದಿಂದ ತಿಳಿದುಬಂದಿದೆ. ರಿಯಲ್ ಎಸ್ಟೇಟ್ ವಲಯ, ಅದರಲ್ಲೂ ಕಟ್ಟಡ ನಿರ್ಮಾಣ ವಲಯ ಶೇ. 6.2ರಷ್ಟು ಅಭಿವೃದ್ಧಿ ಹೊಂದಿದೆ. ಬಹಳ ಮುಖ್ಯವಾಗಿರುವ ತಯಾರಿಕಾ (Manufacturing) ವಲಯ ಶೇ. 1.6ರಷ್ಟು ಹೆಚ್ಚಳ ಹೊಂದಿದೆ.

  2020-21ರ ಹಣಕಾಸು ವರ್ಷದಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಇನ್ನೂ ಒಂದು ತ್ರೈಮಾಸಿಕ ಅವಧಿ ಇದ್ದು ಜಿಡಿಪಿ ಇನ್ನಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಈ ನಿರೀಕ್ಷೆ ನಿಜವಾದಲ್ಲಿ ಈ ಹಣಕಾಸು ವರ್ಷ ಜಿಡಿಪಿ ಮತ್ತೆ ಹಳಿಗೆ ಬರುವ ಎಲ್ಲಾ ಸಾಧ್ಯತೆ ಇದೆ.
  Published by:Vijayasarthy SN
  First published: