ಹೆಚ್ಚುತ್ತಿರುವ ತಾಲಿಬಾನ್​ ಉಗ್ರರ ದಾಳಿ: ಅಫ್ಘಾನಿಸ್ತಾನದಿಂದ ತನ್ನ ಸಿಬ್ಬಂದಿಗಳನ್ನು ಕರೆಸಿಕೊಂಡ ಭಾರತ

"ಅಫ್ಘಾನಿಸ್ತಾನವು ನಮ್ಮ ದೇಶದ ಮಿತ್ರ ರಾಷ್ಷ್ರ, ಅಲ್ಲದೇ ನಾವು ಶಾಂತಿಯುತ, ಸಾರ್ವಭೌಮ ಮತ್ತು ಪ್ರಜಾಪ್ರಭುತ್ವದ ಅಫ್ಘಾನಿಸ್ತಾನದ ಪರವಾಗಿದ್ದೇವೆ’’ ಎಂದು ವಕ್ತಾರರು ಸಂದೇಶ ನೀಡಿದರು. ತಾಲಿಬಾನ್  ಹಲವಾರು ಪ್ರಮುಖ ನಗರಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುತ್ತಾ ಬಂದಿದೆ ಆದ ಕಾರಣ ಈ ದೃಷ್ಟಿಯಿಂದ ಈ ಕ್ರಮ ಎಂದರು.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿರುವ ತನ್ನ ದೂತಾವಾಸದಿಂದ ಸುಮಾರು 50 ರಾಜತಾಂತ್ರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಭಾರತ ಮರಳಿ ಸ್ವದೇಶಕ್ಕೆ ಕರೆಸಿಕೊಂಡಿದೆ.  ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ದಕ್ಷಿಣ ಅಫ್ಘಾನ್​ ನಗರದ ಸುತ್ತಮುತ್ತಲಿನ ಹೊಸ ಪ್ರದೇಶಗಳ ಮೇಲೆ ತಾಲಿಬಾನ್ ಸಂಘಟನೆ ಮತ್ತೆ ಹಿಡಿತ ಸಾಧಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಎಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಈ ಮಾಹಿತಿಯನ್ನು ಭಾನುವಾರ ನೀಡಿದ್ದಾರೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಭಾರತೀಯ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳನ್ನು ವಾಪಸ್ ಕರೆತರಲು ಭಾರತೀಯ ವಾಯುಪಡೆಯ ವಿಶೇಷ ವಿಮಾನವನ್ನು ಶನಿವಾರ ಕಳುಹಿಸಲಾಗಿತ್ತು.

  ಕಂದಹಾರ್ ನಗರದ ಸಮೀಪ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಭಾರತ ಮೂಲದ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡಿರುವುದು ತಾತ್ಕಾಲಿಕ ಕ್ರಮವಾಗಿದ್ದು, ನಮ್ಮ ದೂತಾವಾಸವು ಸ್ಥಳೀಯ ಸಿಬ್ಬಂದಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.

  ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಉಂಟಾಗಿರುವ ಕಳವಳಕಾರಿ ಭದ್ರತಾ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. "ನಮ್ಮ ಸಿಬ್ಬಂದಿಗಳ ಸುರಕ್ಷತೆ  ಅತ್ಯುನ್ನತವಾಗಿದೆ. ಕಂದಹಾರ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅನ್ನು ಮುಚ್ಚಲಾಗಿಲ್ಲ. ಕಂದಹಾರ್ ನಗರದ ಬಳಿ ತೀವ್ರವಾದ ಸಂಘರ್ಷ ನಡೆಯುತ್ತಿರುವುದರಿಂದ ಭಾರತ ಮೂಲದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ "ಎಂದು ಬಾಗ್ಚಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

  "ಪರಿಸ್ಥಿತಿ ಸರಿಯಾಗುವ ತನಕ ಈ ಕ್ರಮ ತೆಗೆದುಕೊಳ್ಳಲಾಗಿದೆ, ಅಷ್ಟೇ. ಇದೊಂದು ತಾತ್ಕಾಲಿಕ ಕ್ರಮ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ. ಕಾನ್ಸುಲೇಟ್ ನಮ್ಮ ಸ್ಥಳೀಯ ಸಿಬ್ಬಂದಿ ಸದಸ್ಯರ ಮೂಲಕ ಕಾರ್ಯನಿರ್ವಹಿಸುತ್ತಿದೆ "ಎಂದು ಬಾಗ್ಚಿ ಪುನರುಚ್ಚರಿಸಿದರು. ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ವೀಸಾ ಮತ್ತು ಇತರೇ ಸೇವೆಗಳನ್ನ ನಿರಂತರವಾಗಿ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

  "ಅಫ್ಘಾನಿಸ್ತಾನವು ನಮ್ಮ ದೇಶದ ಮಿತ್ರ ರಾಷ್ಷ್ರ, ಅಲ್ಲದೇ ನಾವು ಶಾಂತಿಯುತ, ಸಾರ್ವಭೌಮ ಮತ್ತು ಪ್ರಜಾಪ್ರಭುತ್ವದ ಅಫ್ಘಾನಿಸ್ತಾನದ ಪರವಾಗಿದ್ದೇವೆ’’ ಎಂದು ವಕ್ತಾರರು ಸಂದೇಶ ನೀಡಿದರು. ತಾಲಿಬಾನ್  ಹಲವಾರು ಪ್ರಮುಖ ನಗರಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುತ್ತಾ ಬಂದಿದೆ ಆದ ಕಾರಣ ಈ ದೃಷ್ಟಿಯಿಂದ ಈ ಕ್ರಮ ಎಂದರು.

  ಯಾವುದೇ ಕಾರಣಕ್ಕೂ ಕಾಬೂಲ್​ನಲ್ಲಿ ಇರುವ ನಮ್ಮ ದೂತವಾಸವನ್ನು ಮುಚ್ಚುವುದಿಲ್ಲ. ಹೊರಗಿನಿಂದಲೇ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ನಮ್ಮ ಪ್ರಜೆಗಳ ಸುರಕ್ಚತೆಯ ದೃಷ್ಟಿಯಿಂದ ಮಾತ್ರ ಈ ಕ್ರಮ ಎಂದು ಪದೇ, ಪದೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟ ಪಡಿಸಿತು.

  ಅಮೇರಿಕಾ ಪಡೆಯು ಕಳೆದ ವರ್ಷದ ಆಗಸ್ಟ್​ ತಿಂಗಳಲ್ಲಿ ತನ್ನ ಮಿಲಿಟರಿ ಪಡೆಯನ್ನು ಸಂಪೂರ್ಣವಾಗಿ ವಾಪಸ್​ ಕಡೆದುಕೊಂಡಿತ್ತು. ಇದಾದ ಸ್ವಲ್ಪ ದಿನಗಳಲ್ಲೇ ತನ್ನ ಚಾಳಿ ತೋರಿಸಿದ ತಾಲಿಬಾನ್​ ಈಗ ಸರಣಿ ದಾಳಿಯನ್ನು ಆರಂಭಿಸಿದೆ.  ಯುದ್ದ ಪೀಡಿತ ಈ ದೇಶದಲ್ಲಿ ಅಮೇರಿಕಾ ತನ್ನ ಕಾರ್ಯಾಚರಣೆಯನ್ನು ಸುಮಾರು ಎರಡು ದಶಕಗಳ ಕಾಲದ ನಂತರ ನಿಲ್ಲಿಸಿತ್ತು. ಉತ್ತರ ಬಾಲ್ಕ್​ ಪ್ರಾಂತ್ಯದ ಮಜರ್​-ಎ-ಶರೀಫ್​  ಭಾಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಮುಖವಾಗಿ ನಿಲ್ಲಿಸಿದೆ.

  ಅಫ್ಘಾನಿಸ್ತಾನದ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಅಫ್ಘಾನ್ ರಾಯಭಾರಿ ಫರೀದ್ ಮಾಮುಂಡೆಜೆ  ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಅವರಿಗೆ ಮಂಗಳಾದಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಫ್ಘಾನಿಸ್ತಾನಕ್ಕೆ ಭೇಟಿ ನೀಡುವ, ಉಳಿದುಕೊಂಡಿರುವ ಮತ್ತು ಕೆಲಸ ಮಾಡುವ ಎಲ್ಲ ಭಾರತೀಯರು ತಮ್ಮ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಮತ್ತು ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಪ್ರಯಾಣವನ್ನು ನಿಲ್ಲಿಸಿ ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಮನವಿ ಮಾಡಿದೆ.

  ಇದನ್ನೂ ಓದಿ: World Population Day: ಉ.ಪ್ರ. ಜನಸಂಖ್ಯೆ ನೀತಿ ಬಿಡುಗಡೆಗೆ ಕ್ಷಣಗಣನೆ; ಜನಸಂಖ್ಯಾ ಸ್ಫೋಟದ ಸಮಸ್ಯೆ ಬಿಚ್ಚಿಟ್ಟ ಯೋಗಿ

  ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿ "ಅಪಾಯಕಾರಿ" ಯಾಗಿದ್ದು, ಭಯೋತ್ಪಾದಕರು ನಾಗರಿಕರನ್ನುಗುರಿಯಾಗಿಸಿಕೊಂಡು ಹಲವಾರು ಸರಣಿ ದಾಳಿಗಳನ್ನು ನಡೆಸಿವೆ ಮತ್ತು ಭಾರತೀಯ ಪ್ರಜೆಗಳು ಅಪಹರಣದಂತಹ "ಗಂಭೀರ ಬೆದರಿಕೆಯನ್ನು" ಎದುರಿಸುತ್ತಿದ್ದಾರೆ ಎಂದು ಅಫ್ಘಾನ್​ ಸರ್ಕಾರ ತಿಳಿಸಿದೆ.. ಅಫ್ಘಾನಿಸ್ತಾನದ ಶಾಂತಿ ಮತ್ತು ಸ್ಥಿರತೆಗೆ ಭಾರತ ನಿರಂತರವಾಗಿ ತನ್ನ ಪ್ರಯತ್ನ ಮಾಡುತ್ತಲೇ ಇದೆ.  ಈಗಾಗಲೇ ಭಾರತವು ಸುಮಾರು ಮೂರು ಶತಕೋಟಿ ಡಾಲರ್​ನಷ್ಟು ನೆರವು ಮತ್ತು ಪುನರ್ನಿರ್ಮಾಣ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: