news18-kannada Updated:February 22, 2021, 8:05 PM IST
ಮೃತ ಸಂಸದ ಮೋಹನ್ ಡೆಲ್ಕರ್.
ಮುಂಬೈ (ಫೆಬ್ರವರಿ 22); ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಸ್ವತಂತ್ರ ಸಂಸದ ಮೋಹನ್ ಡೆಲ್ಕರ್ (58) ಇಂದು ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆರಂಭಿಕ ತನಿಖೆಗಳಿಂದ ಇದು ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಕೋಣೆಯಲ್ಲಿ ಆತ್ಮಹತ್ಯೆ ಪತ್ರವೂ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಏನು? ಎಂಬುದು ಈವರೆಗೆ ತಿಳಿದುಬಂದಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಸಂಸದ ಇಬ್ಬರು ಮಕ್ಕಳ ತಂದೆಯಾಗಿದ್ದು, ಇದೀಗ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
7 ಬಾರಿ ಸಂಸದರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಮೋಹನ್ ಡೆಲ್ಕರ್ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಸಹ ಅವರಿಗೆ ಚುನಾವಣೆ ಟಿಕೆಟ್ ನೀಡದ ಕಾರಣ ಅವರು ಕಾಂಗ್ರೆಸ್ ಪಕ್ಷ ತೊರೆದು ಕಳೆದ 2019ರ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು 2004 ರಿಂದಲೂ ಸಂಸತ್ತಿನಲ್ಲಿ ದಾದ್ರಾ ಮತ್ತು ನಗರ ಹವೇಲಿಯನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ: ಸಾಮಾನ್ಯ ಜನರ ದುಖಃ-ಸಂಕಷ್ಟಗಳಿಂದ ಸರ್ಕಾರ ಲಾಭ ಗಳಿಸಬೇಕೆ?; ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ
ಕೇಂದ್ರ ಸರ್ಕಾರದಲ್ಲಿ ಮೋಹನ್ ಡೆಲ್ಕರ್ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ಗೃಹ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದರು.
Published by:
MAshok Kumar
First published:
February 22, 2021, 8:05 PM IST