ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು ಸರಿಯಾಗಿ 73 ವರ್ಷ ಗತಿಸಿದೆ. ಆಗಸ್ಟ್ 15ರಂದು 74ನೇ ಸ್ವಾತಂತ್ರ್ಯೋತ್ಸವ. ಈ ಹಿಂದೆ 73 ಬಾರಿ ವಿಜೃಂಭಣೆಯಿಂದ ನಡೆದಿದ್ದ ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಕೊರೋನಾ ಬಿಕ್ಕಟ್ಟಿನಿಂದಾಗಿ ಕಳೆಗುಂದಿದೆ. ಸಾರ್ವಜನಿಕರು ಗುಂಪು ಸೇರದೇ ಇಂಡಿಪೆಂಡೆನ್ಸ್ ಡೇ ಆಚರಣೆ ನಡೆಯುತ್ತಿರುವುದು ಇದೇ ಮೊದಲು. ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಆದರೆ, ಸಾಮಾಜಿಕ ಅಂತರಕ ಕಾಯ್ದುಕೊಳ್ಳಲು ಸೀಮಿತ ಸಂಖ್ಯೆಯಲ್ಲಿ ಮಾತ್ರ ಜನರನ್ನು ಈ ಕಾರ್ಯಕ್ರಮಕ್ಕೆ ಸೇರಿಸಲಾಗುತ್ತದೆ.
ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ ಸೇನಾ ಪಡೆಗಳ ಪಥಸಂಚಲನ, ಬ್ಯಾಂಡ್ ವಾದನ ಇತ್ಯಾದಿ ಕಾರ್ಯಕ್ರಮಗಳು ಇರುತ್ತವೆ. ಆದರೆ, ಈ ವರ್ಷ ಇವುಗಳ್ಯಾವುದೂ ಇರುವುದಿಲ್ಲ. ಪ್ರಧಾನಿ ಧ್ವಜ ಹಾರಿಸಿದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಅದರ ನೇರ ಪ್ರಸಾರದ ವ್ಯವಸ್ಥೆ ಮಾತ್ರ ಇರುತ್ತದೆ. ಹಾಗೆಯೇ, ಮಿಲಿಟರಿ ಬ್ಯಾಂಡ್ಗಳ ಪ್ರದರ್ಶನವನ್ನು ಮುಂಚಿತವಾಗಿಯೇ ಮಾಡಿ ಅದರ ಚಿತ್ರೀಕರಣ ಮಾಡಲಾಗುತ್ತಿದ್ದು, ಆ. 15ರಂದು ಅದರ ಪ್ರಸಾರವಾಗಲಿದೆ.
ಸ್ವಾತಂತ್ರ್ಯ ಇತಿಹಾಸ:
ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರಿಗಳಾಗಿ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿ ಅಧಿಕೃತವಾಗಿ ಅಧಿಪತ್ಯ ಸ್ಥಾಪಿಸಿದ್ದು 1757ರಲ್ಲಿ. ಪ್ಲಾಸಿ (ಪಲಾಶಿ) ಕದನದಲ್ಲಿ ಬಂಗಾಳ ನವಾಬ ಸಿರಾಜ್-ಉದ್-ದೌಲಾ ಮತ್ತವರ ಫ್ರೆಂಚ್ ಮೈತ್ರಿ ಸೇನೆಯನ್ನು ಬ್ರಿಟಿಷರು ಸೋಲಿಸಿದರು. ಅದಾದ ಬಳಿಕ ಆಫ್ಘಾನಿಸ್ತಾನದಿಂದ ಹಿಡಿದು ಮಯನ್ಮಾರ್ವರೆಗೆ ಬಹುತೇಕ ಎಲ್ಲಾ ಪ್ರದೇಶಗಳು ಬ್ರಿಟಿಷರ ಕೈವಶವಾದವು. ಇದಕ್ಕೆ ನಿರ್ಣಾಯಕವಾಗಿದ್ದು 1757ರ ಪ್ಲಾಸಿ ಕದನವೇ.
ಇದನ್ನೂ ಓದಿ: Independence Day 2020: 5 ದಿನಗಳ ಮೊದಲೇ ಸ್ವಾತಂತ್ರ್ಯ ಸಂಭ್ರಮಾಚರಿಸಿದ ದೇಶದ ಏಕೈಕ ನಗರ..!; ಕಾರಣವೇನು ಗೊತ್ತಾ?
ಆದರೆ, ಬ್ರಿಟಿಷರ 190 ವರ್ಷಗಳ ಆಡಳಿತ ಸುಗಮವಾಗಿಯೇನೂ ಇರಲಿಲ್ಲ. ಅಲ್ಲಲ್ಲಿ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಹೋದವು. ಮಹಾತ್ಮ ಗಾಂಧಿ ಅವರಂಥವರ ಅಹಿಂಸಾತ್ಮಕ ಹೋರಾಟಗಳು; ಸುಭಾಷ್ ಚಂದ್ರ ಬೋಸ್ ಅವರ ಮಿಲಿಟರಿ ಹೋರಾಟ; ಭಗತ್ ಸಿಂಗ್ ಅವರಂಥವರ ಕ್ರಾಂತಿಕಾರಿ ಹೋರಾಟಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪಥವನ್ನು ಸುಗಮಗೊಳಿಸಿದವು. ವಿಶ್ವಮಹಾಯುದ್ಧಗಳಲ್ಲಿ ಜರ್ಝರಿತಗೊಂಡಿದ್ದ ಬ್ರಿಟಿಷರಿಗೆ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹೆಚ್ಚು ಕಾಲ ಅದುಮಿಡಲೂ ಸಾಧ್ಯವಿರಲಿಲ್ಲ. ಅಂತಿಮವಾಗಿ 1947, ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು. ಆದರೆ, ಅದಕ್ಕೆ ಮುಂಚೆ ಭಾರತ ಮತ್ತು ಪಾಕಿಸ್ತಾನವನ್ನು ಧರ್ಮದ ಆಧಾರವಾಗಿ ಪ್ರತ್ಯೇಕಗೊಳಿಸಿದರು. ಮುಸ್ಲಿಮ್ ಬಾಹುಳ್ಯ ಇದ್ದ ಭಾರತದ ಪಶ್ಚಿಮ ಭಾಗವನ್ನು ಹಾಗೂ ಪೂರ್ವ ಬಂಗಾಳ ಇರುವ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನ ನಿರ್ಮಾಣ ಮಾಡಲಾಯಿತು.
ತಮ್ಮ ಆಡಳಿತ ಸುಗಮವಾಗಿ ನಡೆಯಲೆಂದು ಬ್ರಿಟಿಷರು ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಭೇದ ನೀತಿ ತಂದಿದ್ದರು. ಅದರ ಫಲವಾಗಿ ಎರಡೂ ಸಮುದಾಯಗಳ ಮಧ್ಯೆ ವೈಷಮ್ಯ ನೆಲಸೇ ಇತ್ತು. ಇದು ಅಂತಿಮವಾಗಿ ಭಾರತದ ವಿಭಜನೆಗೂ ಕಾರಣವಾಯಿತು. ವಿಭಜನೆ ವೇಳೆ ದೊಡ್ಡ ಮಟ್ಟದಲ್ಲಿ ಹಿಂಸಾಚಾರಗಳು ನಡೆದವು. ಸ್ವಾತಂತ್ರ್ಯ ಹೋರಾಟ, ಆಂತರಿಕ ಹಿಂಸಾಚಾರಗಳ ಮಿಶ್ರಣದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು 1947ರಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡವು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ತೈಲ ಪೂರೈಕೆ ಸ್ಥಗಿತಗೊಳಿಸಿದ ಸೌದಿ; ಕಾಶ್ಮೀರ ವಿಚಾರದಲ್ಲಿ ಪಾಕ್ಗೆ ಮತ್ತೆ ಮುಖಭಂಗ
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1947 ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಭಾರತದ ನೂತನ ರಾಷ್ಟ್ರಧ್ವಜವನ್ನು ಹಾರಿಸಿ, ನಂತರ ದೇಶವನ್ನುದ್ದೇಶಿಸಿ ಮಾತನಾಡಿದರು. ಆ ಬಳಿಕ ಭಾರತೀಯ ಸೇನಾ ಪಡೆಗಳ ಪಥ ಸಂಚಲನ ಇತ್ಯಾದಿ ನಡೆದವು. ಈ ಪರಂಪರೆಯು ವರ್ಷದಿಂದ ವರ್ಷಕ್ಕೆ ಪಾಲನೆಯಾಗುತ್ತಲೇ ಬಂದಿದೆ. ಈ ಬಾರಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಇರುವ ಹಿನ್ನೆಲೆಯಲ್ಲಿ ಸೀಮಿತವಾಗಿ ಆಚರಣೆ ಮಾಡಲಾಗುತ್ತಿದೆ.
ಬೆಂಗಳೂರಿನ ಮಾಣಿಕ್ಶಾ ಪೆರೇಡ್ ಮೈದಾನದಲ್ಲೂ ಸಿಎಂ ಯಡಿಯೂರಪ್ಪ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಇಲ್ಲಿಯೂ ಸೀಮಿತ ಸಂಖ್ಯೆಯಲ್ಲಿ ಜನ ಸೇರಲು ಅವಕಾಶ ಇದೆ. ಪಥ ಸಂಚಲನ ಇತ್ಯಾದಿ ಆಯೋಜನೆ ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ