ಹಿಂದೂ ಹೋರಾಟಗಾರ ಕಮಲೇಶ್ ತಿವಾರಿ ಹತ್ಯೆಗೆ ಹೊಸ ಟ್ವಿಸ್ಟ್; ಬಿಜೆಪಿ ನಾಯಕನತ್ತ ಬೊಟ್ಟು ಮಾಡಿದ ತಾಯಿ

ದೇವಸ್ಥಾನ ನಿರ್ಮಾಣ ವಿಚಾರದಲ್ಲಿ ಬಿಜೆಪಿ ನಾಯಕ ಶಿವಕುಮಾರ್ ಗುಪ್ತಾ ನನ್ನ ಮಗನನ್ನು ಹತ್ಯೆಗೈದಿದ್ದಾನೆ ಎಂದು ಅವರ ತಾಯಿ ಆರೋಪಿಸಿದ್ಧಾರೆ.

news18
Updated:October 19, 2019, 1:03 PM IST
  • News18
  • Last Updated: October 19, 2019, 1:03 PM IST
  • Share this:
ಲಕ್ನೋ(ಅ. 19): ಮಾಜಿ ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿ ನಿನ್ನೆ ಭೀಕರವಾಗಿ ಹತ್ಯೆಗೊಂಡಿದ್ದರು. ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದರಿಂದ ಮುಸ್ಲಿಮ್ ಮೂಲಭೂತವಾದಿಗಳೇ ಈ ಹತ್ಯೆಗೈದಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಿವೆ. ತಿವಾರಿ ಪತ್ನಿ ಕೂಡ ಇಬ್ಬರು ಮುಸ್ಲಿಮರ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಹೊತ್ತಿನಲ್ಲಿ ಕಮಲೇಶ್ ತಿವಾರಿ ಅವರ ತಾಯಿ ನೀಡಿರುವ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ಕೊಡುತ್ತಿದೆ. ತನ್ನ ಮಗನ ಸಾವಿಗೆ ಬಿಜೆಪಿ ನಾಯಕ ಶಿವಕುಮಾರ್ ಗುಪ್ತ ಜವಾಬ್ದಾರ ಎಂದು ಈ ತಾಯಿ ಆರೋಪಿಸಿದ್ಧಾರೆ.

ಲಕ್ನೋನಲ್ಲಿ ಕಮಲೇಶ್ ತಿವಾರಿ ಹತ್ಯೆಯಾದಾಗ ನಿನ್ನೆ ಅವರ ತಾಯಿ ಯಾರ ಮೇಲೂ ಆರೋಪ ಮಾಡಿರಲಿಲ್ಲ. ಒಂದು ದಿನದ ಬಳಿಕ ಈಗ ಸೀತಾಪುರ್ ಜಿಲ್ಲೆಯಲ್ಲಿ ಅವರು ಬಿಜೆಪಿ ನಾಯಕನ ಮೇಲೆ ಗುರುತರ ಆರೋಪ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ:

“ಶಿವಕುಮಾರ್ ಗುಪ್ತಾ ಅವರೇ ಈ ಕೊಲೆಗೆ ಜವಾಬ್ದಾರರು. ಲಕ್ನೋನಲ್ಲಿ ಯಾರೂ ನನ್ನನ್ನು ಈ ಬಗ್ಗೆ ಕೇಳಲಿಲ್ಲ. ನನಗೆ ಏನು ಬೇಕೆಂದಷ್ಟೇ ಕೇಳಿದರು. ನನ್ನ ಮಗನ ಮೃತ ದೇಹ ಬೇಕು ಎಂದಷ್ಟೇ ನಾನು ಉತ್ತರಿಸಿದ್ದೆ. ನಾನು ಕೊಲೆಯಾಗಿ ಹೋದರೂ ಪರವಾಗಿಲ್ಲ, ಈ ಕೊಲೆ ಮಾಡಿದ ಯಾರನ್ನೂ ಬಿಡುವುದಿಲ್ಲ. ಗುಪ್ತಾ ಅವರನ್ನು ಕರೆಸಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೆ. ಆದರೂ ಅವರು ಕಿವಿ ಕೊಟ್ಟಿಲ್ಲ. ತತ್ತೇರಿಯಲ್ಲಿರುವ ಶಿವ ಕುಮಾರ್ ಗುಪ್ತ ಮೇಲೆ 500ಕ್ಕೂ ಹೆಚ್ಚು ಪ್ರಕರಣಗಳಿವೆ” ಎಂದು ತಿವಾರಿ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಮಹಾಸಭಾ ಮಾಜಿ ನಾಯಕ ಕಮಲೇಶ್​ ತಿವಾರಿ ಗುಂಡಿನ ದಾಳಿಗೆ ಬಲಿ

ದೇವಸ್ಥಾನ ನಿರ್ಮಾಣ ವಿಚಾರದಲ್ಲಿ ತನ್ನ ಶಿವಕುಮಾರ್ ಗುಪ್ತಾ ನನ್ನ ಮಗನನ್ನು ಹತ್ಯೆಗೈದಿದ್ದಾನೆ ಎಂಬುದು ಇವರ ಆರೋಪವಾಗಿದೆ.

ಶಿವಕುಮಾರ್ ಗುಪ್ತಾ ಸ್ಥಳೀಯ ದೇವಸ್ಥಾನದ ಅಧ್ಯಕ್ಷರಾಗಿದ್ದಾರೆ. ದೇವಸ್ಥಾನ ಕಟ್ಟಡ ನಿರ್ಮಾಣದಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ವಿಚಾರದಲ್ಲಿ ಕಮಲೇಶ್ ತಿವಾರಿಯನ್ನು ಗುಪ್ತಾ ಕೊಲೆ ಮಾಡಿಸಿದ್ದಾನೆ ಎಂದು ಇವರು ಹೇಳಿದ್ಧಾರೆ.

ಪೊಲೀಸರ ಅಭಿಪ್ರಾಯವೂ ಕೂಡ ಇಂಥದ್ದೇ ಆಯಾಮವನ್ನು ಪುಷ್ಟೀಕರಿಸುತ್ತದೆ. ಕಮಲೇಶ್ ತಿವಾರಿಯನ್ನು ಪರಿಚಿತರೇ ಕೊಲೆ ಮಾಡಿದ್ದಾರೆ. ಒಟ್ಟಿಗೆ ಚಹಾ ಕುಡಿಯುವಾಗ ತಿವಾರಿಯನ್ನು ಇರಿದು ಕೊಲ್ಲಲಾಗಿದೆ. ಇದು ಸಂಪೂರ್ಣ ಕ್ರಿಮಿನಲ್ ಕೃತ್ಯ ಎಂಬುದು ಪೊಲೀಸರ ಅಭಿಪ್ರಾಯ.ಇದನ್ನೂ ಓದಿ: ವಿಷ್ಣುವಿನ 10ನೇ ಅವತಾರ ಎಂದು ಘೋಷಿಸಿಕೊಂಡಿದ್ದ ಕಲ್ಕಿ ಭಗವಾನ್ ಆಶ್ರಮದ ಮೇಲೆ ಐಟಿ ದಾಳಿ; 500 ಕೋಟಿಗೂ ಅಧಿಕ ಆಸ್ತಿ ಪತ್ತೆ

“ಲಕ್ನೋನ ನಾಕಾ ಎಂಬಲ್ಲಿರುವ ತಿವಾರಿ ನಿವಾಸಕ್ಕೆ ಇಬ್ಬರು ವ್ಯಕ್ತಿಗಳು ಹೋಗಿ ಅರ್ಧ ಗಂಟೆ ಅವರೊಂದಿಗೆ ಮಾತನಾಡುತ್ತಾರೆ. ಚಹಾ ಸೇವಿಸಿದ ಬಳಿಕ ಅವರಿಬ್ಬರೂ ತಿವಾರಿಗೆ ಚಾಕುವಿನಿಂದ ಇರಿದು ಹೊರಟು ಹೋಗುತ್ತಾರೆ. ತಿವಾರಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ದುಷ್ಕರ್ಮಿಗಳನ್ನ ಹಿಡಿಯಲು ಹಲವು ಪೊಲೀಸ್ ತಂಡಗಳನ್ನ ನಿಯೋಜಿಸಲಾಗಿದೆ. ಇಬ್ಬರು ವ್ಯಕ್ತಿಗಳ ವಿವರವನ್ನು ಪರಿಶೀಲಿಸಲಾಗುತ್ತಿದೆ. ಎಲ್ಲಾ ರೀತಿಯಲ್ಲಿ ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ನಮಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಆರೋಪಿಗಳು ತಿವಾರಿಗೆ ಪರಿಚಿತರೇ ಆಗಿದ್ದಂತಿದೆ“ ಎಂದು ಲಕ್ನೋ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈದನಿ ಹೇಳಿದ್ದಾರೆ.

(ವರದಿ: ಖಾಜಿ ಫರಾಜ್ ಅಹ್ಮದ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 19, 2019, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading