ಹೇಗ್ (ಜನವರಿ 22); ಮಯನ್ಮಾರ್ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಂ ಅಲ್ಪ ಸಂಖ್ಯಾತರ ವಿರುದ್ಧ ನಡೆಯುತ್ತಿರುವ ನರಮೇಧವನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯ ಇಂದು ಆದೇಶಿಸಿದೆ. ಈ ಮೂಲಕ ರೋಹಿಂಗ್ಯಾ ಮುಸ್ಲಿಮರು ಕಾನೂನು ಸಮರದಲ್ಲಿ ಮೊದಲ ಗೆಲುವು ಕಂಡಂತಾಗಿದೆ.
ಈ ಕುರಿತ ಆದೇಶವನ್ನು ಓದುವ ವೇಳೆ ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ಹಾಗೂ ನ್ಯಾಯಾಧೀಶ ಅಬ್ದುಲ್ಕಾವಿ ಅಹ್ಮದ್ ಯೂಸುಫ್, “ಮಯನ್ಮಾರ್ ನಲ್ಲಿರುವ ರೋಹಿಂಗ್ಯಾ ಮುಸ್ಲಿಮರು ಅತ್ಯಂತ ದುರ್ಬಲರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ರೋಹಿಂಗ್ಯಾಗಳನ್ನು ರಕ್ಷಿಸಲು ಉದ್ದೇಶಿಸಲಾಗಿರುವ ತಾತ್ಕಾಲಿಕ ಕ್ರಮಗಳ ಆದೇಶವನ್ನು ಮಯನ್ಮಾರ್ ಸರ್ಕಾರ ಉಲ್ಲಂಘಿಸಿದರೆ ಅಂತಾರಾಷ್ಟ್ರೀಯ ಕಾನೂನು ಬಾದ್ಯತೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಅಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಗ್ರೇಟ್ ಹಾಲ್ ಆಫ್ ಜಸ್ಟೀಸ್ನಲ್ಲಿ ನಡೆದ ವಿಚಾರಣೆಯ ಕೊನೆಯಲ್ಲಿ ಮಯನ್ಮಾರ್ ಸರ್ಕಾರಕ್ಕೆ ಆದೇಶಿಸಿರುವ ನ್ಯಾಯಾಲಯ, “ರೋಹಿಂಗ್ಯಾ ಮುಸ್ಲಿಮರ ರಕ್ಷಣೆಗಾಗಿ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಪಾಲನೆಗಾಗಿ ಮಯನ್ಮಾರ್ ಯಾವ ರೀತಿಯ ಕ್ರಮ ತೆಗೆದುಕೊಂಡಿದೆ ಎಂಬ ಕುರಿತು 4 ತಿಂಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ನಂತರ ಪ್ರತಿ 6 ತಿಂಗಳಿಗೊಮ್ಮೆ ಈ ವರದಿ ಸಲ್ಲಿಸಬೇಕು” ಎಂದು ತಾಕೀತು ಮಾಡಿದೆ.
ನ್ಯಾಯಾಲಯದ ತೀರ್ಪನ್ನು ಸರ್ವಾನುಮತದಿಂದ ಸ್ವಾಗತಿಸಿರುವ ಮಾನವ ಹಕ್ಕು ಹೋರಾಟಗಾರರು;
ಮಯನ್ಮಾರ್ ದೇಶದಲ್ಲಿ ಮಾರಣ ಹೋಮಕ್ಕೆ ತುತ್ತಾಗಿರುವ ರೋಹಿಂಗ್ಯಾ ಮುಸ್ಲಿಮರ ನರಮೇಧವನ್ನು ತಡೆಗಟ್ಟುವ ಸಲುವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ತೆಗೆದುಕೊಂಡಿರುವ ನಿರ್ಧಾರವನ್ನು ಹತ್ತಾರು ಅಂತಾರಾಷ್ಟ್ರೀಯ ಮಾನವ ಹಕ್ಕು ಆಯೋಗಗಳು ಹಾಗೂ ಹೋರಾಟಗಾರರು ಸಂತೋಷದಿಂದ ಸ್ವಾಗತಿಸಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ನ್ಯೂಯಾರ್ಕ್ ಸಹಾಯಕ ಅಂತರರಾಷ್ಟ್ರೀಯ ನ್ಯಾಯ ನಿರ್ದೇಶಕ ಪರಮ್ ಪ್ರೀತ್ ಸಿಂಗ್, “ರೋಹಿಂಗ್ಯಾ ನರಮೇಧವನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಮಯನ್ಮಾರ್ ಸರ್ಕಾರಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶಿಸಿರುವುದು ವಿಶ್ವದಲ್ಲೇ ಅತ್ಯಂತ ಕಿರುಕುಳಕ್ಕೆ ಒಳಗಾಗಿರುವ ಜನರ ವಿರುದ್ಧದ ಮತ್ತಷ್ಟು ದೌರ್ಜನ್ಯಗಳನ್ನು ತಡೆಯುವ ಹೆಗ್ಗುರುತಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೌದ್ಧ ಧರ್ಮೀಯರೇ ಹೆಚ್ಚಿರುವ ಮಯನ್ಮಾರ್ನಲ್ಲಿ ಇದೇ ಕಾರಣಕ್ಕೆ ಅಲ್ಪ ಸಂಖ್ಯಾತ ರೋಹಿಂಗ್ಯಾ ಮುಸ್ಲಿಮರ ನರಮೇಧವೇ ನಡೆದಿತ್ತು. ಶಾಂತಿಗಾಗಿ ನೋಬೆಲ್ ಪುರಸ್ಕಾರ ಪಡೆದಿದ್ದ ಮಯನ್ಮಾರ್ ಅಧ್ಯಕ್ಷೆ ಅಂಗ್ ಸಾನ್ ಸೂಕಿ ಆಡಳಿತ ಇದ್ದಾಗ್ಯೂ ಈ ನರಮೇಧವನ್ನು ತಡೆಯುವಲ್ಲಿ ವಿಫಲವಾದ ಮಯನ್ಮಾರ್ ಸರ್ಕಾರವನ್ನು ಇಡೀ ವಿಶ್ವ ತರಾಟೆಗೆ ತೆಗೆದುಕೊಂಡಿತ್ತು. ಆದರೆ, ಇಂದು ಈ ಕುರಿತು ಮಹತ್ವದ ತೀರ್ಪು ನೀಡುವ ಮೂಲಕ ಅಂತಾರಾಷ್ಟ್ರೀಯ ನ್ಯಾಯಾಲಯ ರೋಹಿಂಗ್ಯಾಗಳ ಬದುಕನ್ನು ಉಳಿಸುವ ಕೆಲಸಕ್ಕೆ ಮುಂದಾಗಿದೆ.
ಇದನ್ನೂ ಓದಿ : ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಯ್ತು ನೀರಿನ ಸಮಸ್ಯೆ; ಡ್ಯಾಂ ತುಂಬಿ ಹರಿದರೂ ತೀರಿಲ್ಲ ಬಳ್ಳಾರಿಯ ದಾಹ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ