ನವದೆಹಲಿ: ರಾಷ್ಟ್ರಪತಿಗಳ ಭಾಷಣಕ್ಕೆ (President Speech) ವಂದನಾರ್ಪಣೆ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್ (Congress) ಮತ್ತು 10 ವರ್ಷಗಳ ಕಾಲದ ಯುಪಿಎ ಆಡಳಿತದ (UPA) ವಿರುದ್ಧ ಕಿಡಿಕಾರಿದ್ದಾರೆ. ವಿಪಕ್ಷಗಳು ತಮ್ಮ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಲೋಕಸಭೆಯಲ್ಲಿ ಮಾತನಾಡಿದ ಮೋದಿ (PM Modi), 2004ರಿಂದ 2014ರ ವರೆಗಿನ ಆಡಳಿತ ಹಗರಣಗಳು ಮತ್ತು ಹಿಂಸಾಚಾರದ ದಶಕವಾಗಿದೆ. ಯುಪಿಎ ಟ್ರೇಡ್‌ಮಾರ್ಕ್ ಪ್ರತೀ ಅವಕಾಶವನ್ನೂ ಬಿಕ್ಕಟ್ಟಾಗಿ ತಿರುಗಿಸಿತು ಎಂದು ಟೀಕಿಸಿದರು.
10 ವರ್ಷಗಳ ಕಾಲದ ಯುಪಿಎ ಆಡಳಿತ ಇಡೀ ದೇಶವನ್ನೇ ಒಣಗಿಸಿಬಿಟ್ಟಿತು ಎಂದ ಪ್ರಧಾನಿ ಮೋದಿ, ಮೋದಿಯನ್ನು ನಿಂದಿಸುವುದೇ ತಮ್ಮ ಗುರಿ ಎಂದು ಕಾಂಗ್ರೆಸ್ ಭಾವಿಸಿದರೂ, ಮೋದಿಗೆ 140 ಕೋಟಿ ಜನರ ರಕ್ಷಣೆ ಇದೆ. ಪ್ರತಿಪಕ್ಷಗಳು ದೇಶ ಮಾಡುತ್ತಿರುವ ಪ್ರಗತಿಯನ್ನು ನೋಡಲಾಗದಷ್ಟು ಹತಾಶೆಯಲ್ಲಿ ಮುಳುಗಿವೆ. ಯಾಕೆಂದರೆ ಈ ಮಟ್ಟದ ಅಭಿವೃದ್ಧಿ 2004ರಿಂದ 2014ರ ದಶಕದಲ್ಲಿ ಆಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Narendra Modi-Amit Shah: ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನಿ! ಕೇಂದ್ರ ಸಚಿವ ಅಮಿತ್ ಶಾ ವಿಶ್ವಾಸ
ಯುಪಿಎ ಪ್ರತೀ ಅವಕಾಶವನ್ನು ಬಿಕ್ಕಟ್ಟಿಗೆ ಬಳಸಿಕೊಂಡಿತು
2014ರ ಮೊದಲು, ಅಂದರೆ 2004-14 ರ ನಡುವೆ ಹಣದುಬ್ಬರವು ಹೆಚ್ಚಾಗಿತ್ತು. ಆ ದಶಕವು ಸ್ವಾತಂತ್ರ್ಯ ನಂತರದ ಅತ್ಯಂತ ಭ್ರಷ್ಟವಾದ ಕಾಲವಾಗಿತ್ತು ಎಂದ ನರೇಂದ್ರ ಮೋದಿ, ಯುಪಿಎಯ 10 ವರ್ಷಗಳ ಆಡಳಿತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ದೇಶವು ಭಯೋತ್ಪಾದನೆಯಿಂದ ನಲುಗಿತ್ತು. ಜಮ್ಮು ಮತ್ತು ಕಾಶ್ಮೀರದಿಂದ ಈಶಾನ್ಯಕ್ಕೆ, ಇಡೀ ಪ್ರದೇಶವು ಹಿಂಸಾಚಾರದ ಹೊರತಾಗಿ ಏನನ್ನೂ ಕಂಡಿಲ್ಲ, ಆ 10 ವರ್ಷಗಳಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ತುಂಬಾ ದುರ್ಬಲವಾಗಿತ್ತು. ಯಾರೂ ಕೂಡ ಭಾರತದ ಮಾತನ್ನು ಕೇಳಲು ಸಹ ಸಿದ್ಧರಿರಲಿಲ್ಲ. 2004 ಮತ್ತು 2014 ರ ನಡುವೆ ಯುಪಿಎ ಪ್ರತಿ ಅವಕಾಶವನ್ನು ಬಿಕ್ಕಟ್ಟಾಗಿ ಪರಿವರ್ತಿಸಿತು ಎಂದು ಹೇಳಿದಾಗ ಪ್ರತಿಪಕ್ಷಗಳ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರೆ ವಿಪಕ್ಷಗಳು ಮೋದಿ ಹೇಳಿಕೆ ವಿರುದ್ಧ ಗದ್ದಲ ಎಬ್ಬಿಸಿದವು.
ಇದನ್ನೂ ಓದಿ: Narendra Modi: ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯುವ ವಿಧಾನ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ!
ಇ.ಡಿ ವಿಪಕ್ಷಗಳನ್ನು ಒಂದು ಮಾಡಿದೆ
ಇನ್ನು ಆ 10 ವರ್ಷಗಳಲ್ಲಿನ ಭ್ರಷ್ಟಾಚಾರವು ಪ್ರತಿಪಕ್ಷಗಳನ್ನು ಕೇಂದ್ರೀಯ ತನಿಖಾ ಸಂಸ್ಥೆಗಳ ಸ್ಕ್ಯಾನರ್ ಅಡಿಯಲ್ಲಿ ತಂದಿದೆ ಎಂದು ಲೇವಡಿ ಮಾಡಿದ ಮೋದಿ, ಈಗ ಮತದಾರರಿಗೆ ಸಾಧ್ಯವಾಗದ ಕೆಲಸವನ್ನು ಜಾರಿ ನಿರ್ದೇಶನಾಲಯ ಮಾಡಿದೆ. ಇ.ಡಿ ಎಲ್ಲಾ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಯಡಿ ತಂದು ನಿಲ್ಲಿಸಿದೆ ಎಂದು ವ್ಯಂಗ್ಯವಾಡಿದರು. ಇನ್ನು ಸದನದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ದಿನ ವಾಗ್ದಾಳಿ ಮಾಡಿದ್ದಕ್ಕೂ ತಿರುಗೇಟು ನೀಡಿದ ಮೋದಿ, ಕೆಲವರು ಕಳೆದ ಒಂಬತ್ತು ವರ್ಷಗಳಲ್ಲಿ ರಚನಾತ್ಮಕ ಟೀಕೆಗಳ ಬದಲಿಗೆ ಬಲವಂತದ ಟೀಕೆಗಳನ್ನೇ ಹೆಚ್ಚು ಮಾಡುತ್ತಿದ್ದಾರೆ. ಅವರು ಮೋದಿಯನ್ನು ನಿಂದಿಸುವುದರಿಂದ ತಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಭಾವಿಸಿರಬಹುದು ಎಂದು ಟೀಕಿಸಿದರು.
ನೀವು ಹತಾಶರಾಗಿದ್ದೀರಿ
ಇತ್ತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಮುಂದಿನ ಲೋಕಸಭಾ ಚುನಾವಣಾ ವೇಳೆಗೆ ರಾಹುಲ್ ಗಾಂಧಿ ಅವರು ಗೌತಮ ಅದಾನಿಯ ವಿಚಾರವನ್ನೇ ಪ್ರಚಾರದ ಮುಖ್ಯ ವಸ್ತುವನ್ನಾಗಿ ತೆಗೆದುಕೊಳ್ಳುತ್ತಾರೆ ಅನ್ನೋದು ಸ್ಪಷ್ಟವಾಗಿದೆ. ಆದರೆ 2019 ರಲ್ಲಿ ರಫೇಲ್ ಒಪ್ಪಂದದ ವಿಚಾರದ ಮೇಲಿನ ದಾಳಿ ವಿಫಲವಾದ ರೀತಿಯಲ್ಲಿಯೇ ಇದು ಕೂಡ ವಿಫಲಗೊಳ್ಳುತ್ತದೆ. ನೀವು ಹತಾಶರಾಗಿದ್ದೀರಿ. ಆದರೆ ಜನರು ನಿಮ್ಮ ಪಕ್ಷಕ್ಕೆ ಮತ ಹಾಕದಿದ್ದರೆ ನಾವೇನು ಮಾಡೋಕೆ ಆಗುತ್ತೆ ಎಂದು ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ