ಮಲ್ಯ, ನೀರವ್ ಅಷ್ಟೇ ಅಲ್ಲ; ಐದು ವರ್ಷದಲ್ಲಿ ದೇಶದಿಂದ ಪರಾರಿಯಾಗಿದ್ದಾರೆ 27 ಆರ್ಥಿಕ ಅಪರಾಧಿಗಳು

5 ವರ್ಷದಲ್ಲಿ 27 ಆರ್ಥಿಕ ಅಪರಾಧಿಗಳು ದೇಶದಿಂದ ಕಾಲ್ಕಿತ್ತಿದ್ದು, ಅವರ ಪೈಕಿ 8 ಮಂದಿಗೆ ಈಗಾಗಲೇ ರೆಡ್ ಕಾರ್ನರ್ ನೋಟೀಸ್ ಕೊಡಲಾಗಿದೆ ಎಂದು ಕೇಂದ್ರ ಸಚಿವ ಶುಕ್ಲಾ ಅವರು ಲೋಕಸಭೆಗೆ ಲಿಖಿತ ಮಾಹಿತಿ ಕೊಟ್ಟಿದ್ದಾರೆ.

Vijayasarthy SN | news18
Updated:January 4, 2019, 4:57 PM IST
ಮಲ್ಯ, ನೀರವ್ ಅಷ್ಟೇ ಅಲ್ಲ; ಐದು ವರ್ಷದಲ್ಲಿ ದೇಶದಿಂದ ಪರಾರಿಯಾಗಿದ್ದಾರೆ 27 ಆರ್ಥಿಕ ಅಪರಾಧಿಗಳು
ನೀರವ್​​ ಮೋದಿ
Vijayasarthy SN | news18
Updated: January 4, 2019, 4:57 PM IST
ನವದೆಹಲಿ(ಜ. 04): ಸಾಲ ಕಟ್ಟದೆ, ತೆರಿಗೆ ಕಟ್ಟದೆ ಸರಕಾರಕ್ಕೆ ವಂಚನೆ ಎಸಗಿ ದೇಶ ಬಿಟ್ಟು ಓಡಿ ಹೋದವರ ಸಂಖ್ಯೆ ದೊಡ್ಡದಿದೆ. ಕಳೆದ 5 ವರ್ಷದಲ್ಲಿ ಇಂಥ 27 ಆರ್ಥಿಕ ಅಪರಾದಿಗಳು ದೇಶದಿಂದ ಕಾಲ್ಕಿತ್ತಿದ್ದಾರಂತೆ. ಹಾಗಂತ ಕೇಂದ್ರ ಸರಕಾರವೇ ಸಂಸತ್​ಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.  ಈ 27 ಆರ್ಥಿಕ ಅಪರಾಧಿಗಳ ಪೈಕಿ 20 ಜನರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟರ್​ಪೋಲ್​ಗೆ ಸಂಪರ್ಕಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ಲೋಕಸಭೆಗೆ ತಿಳಿಸಿದರು.

ಅಷ್ಟೇ ಅಲ್ಲ, ಇಂಟರ್​ಪೋಲ್ ಸಂಸ್ಥೆಯು ಈಗಾಗಲೇ 8 ಜನರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದೆ. ಆರು ಜನರ ಗಡೀಪಾರು ಮತ್ತು ಹಸ್ತಾಂತರಕ್ಕಾಗಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಿವಪ್ರತಾಪ್ ಶುಕ್ಲಾ ಮಾಹಿತಿ ನೀಡಿದರು.

ಜಾರಿ ನಿರ್ದೇಶನಾಲಯದ ಪ್ರಕಾರ ಫ್ಯುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆ್ಯಕ್ಟ್, ಅಥವಾ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ ಅಡಿ ಏಳು ಮಂದಿ ವಿರುದ್ಧ ಅರ್ಜಿ ಹಾಕಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಲಂಡನ್​ನಲ್ಲಿರುವ ವೆಸ್ಟ್​ಮಿಂಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ಈಗಾಗಲೇ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿರುವ ವಿಚಾರವನ್ನೂ ಸಚಿವರು ಲೋಕಸಭೆಗೆ ತಿಳಿಸಿದರು.

ಇದೇ ವೇಳೆ, ಬ್ಯಾಂಕ್​ಗಳಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದುಕೊಳ್ಳುವ ಕಂಪನಿಗಳ ಪ್ರೊಮೋಟರ್ಸ್ ಅಥವಾ ನಿರ್ದೇಶಕರು ಅಥವಾ ಅಧಿಕೃತ ಪ್ರತಿನಿಧಿಗಳ ಪಾಸ್​ಪೋರ್ಟ್​ನ ಸರ್ಟಿಫೈಡ್ ಕಾಪಿಯನ್ನು ಪಡೆದುಕೊಳ್ಳುವಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಲಹೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ಕೊಟ್ಟರು.

ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದವರು ಭಾರತದಲ್ಲಿ ಆರ್ಥಿಕ ವಂಚನೆ ಎಸಗಿದ ಆರೋಪ ಹೊತ್ತು ದೇಶದಿಂದ ಹೊರಗೆ ಹೋಗಿದ್ದಾರೆ. ಭಾರತದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಯಾರೂ ಕೂಡ ವಾಪಸ್ ಬಂದು ವಿಚಾರಣೆ ಎದುರಿಸುತ್ತಿಲ್ಲ. ವಿಜಯ್ ಮಲ್ಯ ಅವರು ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ ಸಾಲ ಪಡೆದು ವಾಪಸ್ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ನೀರವ್ ಮೋದಿ ಕೂಡ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ವಂಚನೆ ಎಸಗಿರುವ ಆರೋಪವಿದೆ. ಮಲ್ಯ ಮತ್ತು ಮೋದಿ ಇಬ್ಬರೂ ಕೂಡ ಬ್ರಿಟನ್ ದೇಶದಲ್ಲೇ ಇದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಕೋರ್ಟ್ ಒಪ್ಪಿಕೊಂಡಿದೆ. ಇನ್ನು, ನೀರವ್ ಮೋದಿ ಅವರು ಬ್ರಿಟನ್ ದೇಶದ ರಾಜಾಶ್ರಯ ಅಥವಾ ರಕ್ಷಣೆ ಕೋರಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.
First published:January 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ