ನವದೆಹಲಿ(ಡಿ.07): ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ (MCD Elections) ಆಮ್ ಆದ್ಮಿ ಪಕ್ಷ (AAP) ಬಹುಮತದ ಗಡಿ ದಾಟಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಆಮ್ ಆದ್ಮಿ ಪಕ್ಷವು ತನ್ನದಾಗಿಸಿಕೊಂಡಿದೆ. ಆಮ್ ಆದ್ಮಿ ಪಕ್ಷ (AAP) ಇದುವರೆಗೆ 133 ಸ್ಥಾನಗಳನ್ನು ಗೆದ್ದಿದೆ. ಇನ್ನು 101 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಮೂರು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಎಂಸಿಡಿಯನ್ನು ಉಳಿಸಿಕೊಳ್ಳಲು ಬಿಜೆಪಿ ತನ್ನೆಲ್ಲಾ ಪ್ರಯತ್ನಗಳನ್ನು ಮಾಡಿತ್ತು, ಎಲ್ಲಾ 'ಅಸ್ತ್ರ'ಗಳನ್ನು ಪ್ರಯತ್ನಿಸಿತ್ತು. ಹೀಗಿದ್ದರೂ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ 'ಪೊರಕೆ' ಕಮಲ ಪಾಳಯವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.
ಎಎಪಿಯ ಪೊರಕೆ ಎದುರು ಬಿಜೆಪಿಯ ಈ ಅಸ್ತ್ರಗಳೆಲ್ಲಾ ಶಕ್ತಿಹೀನ
ಈ ಬಾರಿಯ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಹುಶಃ ಹಿಂದೆಂದೂ ಇಂತಹ ಸ್ಪರ್ಧೆ ಏರ್ಪಟ್ಟಿರಲಿಲ್ಲ. ಎಂಸಿಡಿಯಲ್ಲಿ ತನ್ನ 15 ವರ್ಷಗಳ ಅಧಿಕಾರವನ್ನು ಉಳಿಸಲು, ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಬಳಸಿತ್ತು. ಪರಿಷತ್ತಿನ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಬಿಜೆಪಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೂಡ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ್ದರು. ಕೇಂದ್ರ ಸಚಿವರ ಇಡೀ ದಂಡೇ ಬಿಜೆಪಿ ಕಣಕ್ಕಿಳಿಸಿತ್ತು. ದೆಹಲಿಯ ಎಲ್ಲಾ ಏಳು ಸಂಸದರು, ಮಾಜಿ ಮೇಯರ್ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಕುಮಾರ್ ಗುಪ್ತಾ ಅವರು ಬಿಜೆಪಿ ಪರ ಪ್ರಚಾರವನ್ನು ನಡೆಸಿದ್ದರು.
ಮಂತ್ರಿಗಳ-ಮುಖ್ಯಮಂತ್ರಿಗಳ ಸೇನೆ
ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ, ಸಂಸದ ಶಿವರಾಜ್ ಸಿಂಗ್ ಚೌಹಾಣ್, ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಹಿಮಾಚಲ ಸಿಎಂ ಜೈರಾಮ್ ಠಾಕೂರ್, ಯುಪಿ ಉಪ ಮುಖ್ಯಮಂತ್ರಿ ಕೇಶವ್ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರಚಾರ ನಡೆಸಿದ್ದರು.ಪ್ರಸಾದ್ ಮೌರ್ಯ ಬಂದಿಳಿದಿದ್ದರು.
ಕೇಂದ್ರ ಸಚಿವರಿಂದ ರೋಡ್ಶೋ
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಹರ್ದೀಪ್ ಪುರಿ ಮತ್ತು ಅನುರಾಗ್ ಠಾಕೂರ್ ರೋಡ್ ಶೋ ನಡೆಸಿದ್ದರು. ಪಿಯೂಷ್ ಗೋಯಲ್ ಹನುಮಾನ್ ಚಾಲೀಸಾ ಪಠಿಸಿದ್ದರೆ, ಬಿಜೆಪಿಯು ಮನೋಜ್ ತಿವಾರಿ, ದಿನೇಶ್ ಲಾಲ್ ಯಾದವ್, ನಿರ್ಹುವಾ ಮತ್ತು ರವಿ ಕಿಶನ್ರಂತಹ ಸಂಸದರು ಪ್ರಚಾರಕ್ಕಿಳಿದಿದ್ದರು.
ಈ ನಡುವೆ ಇತ್ತ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಎಂಸಿಡಿ ಚುನಾವಣೆಯಲ್ಲಿ ದೊಡ್ಡ ನಾಯಕರ ಸೈನ್ಯವನ್ನು ನಿಲ್ಲಿಸಿದ್ದಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಎಂಸಿಡಿಯಲ್ಲಿ 15 ವರ್ಷಗಳಿಂದ ಬಿಜೆಪಿ ಇದೆ, ಆದರೆ ದೆಹಲಿ, ಇಲ್ಲಿನ ಉದ್ಯಾನವನವನ್ನು ಸ್ವಚ್ಛಗೊಳಿಸಿಲ್ಲ ಎಂದು ಸಿಸೋಡಿಯಾ ಹೇಳಿದ್ದರು. ಎಂಸಿಡಿಯಲ್ಲಿ ಬಿಜೆಪಿ ಯಾವುದೇ ಕೆಲಸ ಮಾಡಿಲ್ಲ, ಅದಕ್ಕಾಗಿಯೇ ಅವರು ತಮ್ಮ ನಾಯಕರ ಸಂಪೂರ್ಣ ಸೈನ್ಯವನ್ನೇ ಇಲ್ಲಿಗೆ ಕರೆ ತಂದಿದೆ ಎಂದು ಜರಿದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ