Congress 'Rebels': ಪಂಜಾಬ್ ಕಾಂಗ್ರೆಸ್ ನಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ 'ಕೈ'ಹಿರಿಯ ನಾಯಕ ಕಪಿಲ್ ಸಿಬಲ್ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿರುವ ಕಪಿಲ್ ಸಿಬಲ್, ಕಾಂಗ್ರೆಸ್ ನಲ್ಲಿ ಯಾವುದೇ ಚುನಾಯಿತ ಅಧ್ಯಕ್ಷ ಇಲ್ಲದಿರೋದು ದೌರ್ಭಾಗ್ಯ. ನಿರ್ಧಾರಗಳನ್ನ ಯಾರೋ ತೆಗೆದುಕೊಳ್ಳುವಂತಾಗಿದೆ. ಆ ನಿರ್ಧಾರ ತಪ್ಪು ಅಥವಾ ಸರಿ ಎಂಬುವುದು ವರ್ಕಿಂಗ್ ಕಮೀಟಿಯಲ್ಲಿ ಚರ್ಚೆ ನಡೆಯಬೇಕು. ಸುಶ್ಮಿತಾ, ಜಿತಿನ್ ಪ್ರಸಾದ್, ಫೆಲೆರಿಯಾ ಮತ್ತು ಕೇರಳದ ಸುಧೀರನ್ ಪಕ್ಷ ತೊರೆದರು. ಇಂತಹ ನಾಯಕರು ಕಾಂಗ್ರೆಸ್ ತೊರೆಯುತ್ತಿರೋದು ಯಾಕೆ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಕಾಂಗ್ರೆಸ್ಗೆ ಅಧ್ಯಕ್ಷರು ಬೇಕು..
ನಾವು ಜಿ-23 ಇದ್ದೇವೆ. ಆದ್ರೆ ಎಲ್ಲದಕ್ಕೂ ತಲೆಯಾಡಿಸುವ ಜಿ-23 ನಾವಲ್ಲ. ನಾವು ವಿಷಯಗಳನ್ನ ಚರ್ಚೆ ಮಾಡುತ್ತಿರುತ್ತೇವೆ. ನಾನು ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಸದಸ್ಯರ ಸಂಪರ್ಕದಲ್ಲಿದ್ದು, ಪಕ್ಷದಲ್ಲಾಗುತ್ತಿರುವ ಬಗ್ಗೆ ಮಾತನಾಡುತ್ತಿದ್ದೇನೆ. ಕಳೆದ ವರ್ಷ ಆಗಸ್ಟ್ ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಬೇಕೆಂದು ಪತ್ರ ಬರೆದವರ ಜೊತೆಯಲ್ಲಿಯೂ ಮಾತನಾಡುತ್ತಿದ್ದೇನೆ. ಆ ಸಂಬಂಧ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ. ಕಳೆದ ವರ್ಷ ಅಧ್ಯಕ್ಷರ ಚುನಾವಣೆ ನಡೆಯಬೇಕೆಂದು ಸೋನಿಯಾ ಗಾಂಧಿ ಅವರಿಗೆ ಗುಲಾಂ ನಬಿ ಆಜಾದ್ ಸೇರಿದಂತೆ 23 ಜನ (ಜಿ-23) ಪತ್ರ ಬರೆದಿದ್ದರು.
ಅಧ್ಯಕ್ಷರಿಲ್ಲ, ಆದ್ರೂ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ
ನಮ್ಮ ಪಕ್ಷದಲ್ಲಿ ಅಧ್ಯಕ್ಷರು ಯಾರೂ ಇಲ್ಲ. ಹಾಗಾಗಿ ಈ ಎಲ್ಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರೋದು ಅನ್ನೋದು ನಮಗೆ ತಿಳಿಯುತ್ತಿಲ್ಲ. ಯಾರು ಆ ಆಧ್ಯಕ್ಷರು ನಮಗೆ ಗೊತ್ತಿಲ್ಲ. ಶೀಘ್ರವೇ ಕಾಂಗ್ರೆಸ್ ವರ್ಕಿಂಗ್ ಕಮೀಟಿಯ ಸಭೆ ನಡೆಸುವಂತೆ ಪತ್ರ ಬರೆಯಲಿ. ಇದರಿಂದ ಪಕ್ಷದಲ್ಲಾಗುತ್ತಿರುವ ಬದಲಾವಣೆಗಳ ಮಾತನಾಡಲು ವೇದಿಕೆ ಸಿಗಲಿದೆ. ಸಿಡಬ್ಲ್ಯೂಸಿ ಸಭೆ ಕರೆದು ವಿವಿಧ ವಿಷಯಗಳ ಕುರಿತು ಚರ್ಚೆಯಾಗಬೇಕು. ಪಂಜಾಬ್ ಬೆಳವಣಿಗೆಗಳ ಬಗ್ಗೆ ಆಂತರಿಕ ಸಭೆಯಲ್ಲಿ ಮಾತುಕತೆ ನಡೆಯಬೇಕಿದೆ. ನಾವು ಯಾರ ಪರ ಮತ್ತು ವಿರೋಧವಾಗಿ ಮಾತನಾಡುತ್ತಿಲ್ಲ. ವರ್ಕಿಂಗ್ ಕಮಿಟಿ ಸಭೆಯಲ್ಲಿ ಸದ್ಯ ಪಕ್ಷ ಎಲ್ಲಿದೆ ಎಂಬುದನ್ನ ತಿಳಿದುಕೊಳ್ಳಬಹುದು ಎಂದು ಸಿಬಲ್ ಅಸಮಾಧಾನ ಹೊರಹಾಕಿದರು.
ಪಕ್ಷ ವಿರೋಧಿ ಅಲ್ಲ, ಆದ್ರೆ ಬದಲಾವಣೆ ಬೇಕು
ಕಾಂಗ್ರೆಸ್ ಶಕ್ತಹೀನವಾಗುತ್ತಿರೋದನ್ನ ನಮ್ಮಿಂದ ನೋಡಲು ಆಗುತ್ತಿಲ್ಲ. ಚುನಾಯಿತ ಅಧ್ಯಕ್ಷರಿಗಾಗಿ ನಾವು ದೀರ್ಘ ಕಾಲದಿಂದ ಕಾಯುತ್ತಿದ್ದೇವೆ. ನಮ್ಮ ಕಾಯುವಿಕೆಗೂ ಅಂತಿಮ ಸಮಯ ಅನ್ನೋದು ಇರುತ್ತೆ. ಪಕ್ಷ ತೊರೆಯುವ ಜನರಂತೆ ನಾವಲ್ಲ. ನಾವು ಇಂದಿಗೂ ಕಾಂಗ್ರೆಸ್ ಜೊತೆಯಲ್ಲಿಯೇ ನಿಲ್ಲುತ್ತೇವೆ. ನಾವು ಎಂದೂ ಕಾಂಗ್ರೆಸ್ ವಿರೋಧವಾಗಿ ಹೇಳಿಕೆ ಕೊಟ್ಟಿಲ್ಲ ಮತ್ತು ಇವತ್ತೂ ಆ ರೀತಿಯ ಮಾತುಗಳನ್ನಾಡುತ್ತಿಲ್ಲ. ಪಕ್ಷಕ್ಕೆ ಆಪ್ತರಾಗಿದ್ದವರೂ ಕಾಂಗ್ರೆಸ್ ತೊರೆದು ಬಹಳ ದಿನಗಳಾಯ್ತು. ಭಾರವಾದ ಮನಸ್ಸಿನಿಂದ ಮಾಧ್ಯಮಗಳ ಮುಂದೆ ಇಂದು ನಿಮ್ಮ ಮುಂದೆ ಬರುವ ಅನಿವಾರ್ಯತೆ ಎದುರಾಗಿರೋದಕ್ಕೆ ಬೇಸರವಾಗುತ್ತಿದೆ ಎಂದರು.
ಇದನ್ನೂ ಓದಿ: Navjot Singh Sidhu: "ಸತ್ಯಕ್ಕಾಗಿ ಕೊನೆಯುಸಿರು ಇರುವವರೆಗೂ ಹೋರಾಟ"; ರಾಜೀನಾಮೆ ಬೆನ್ನಲ್ಲೇ ಸಿಧು ಕೆಂಡಾಮಂಡಲ!
ಪಂಜಾಬ್ ರಾಜಕೀಯದ ಬಗ್ಗೆ ಹೇಳಿದ್ದೇನು?
ತಳದಿಂದ ಕಾಂಗ್ರೆಸ್ ಪಕ್ಷವನ್ನು ಭದ್ರಗೊಳಿಸಬೇಕು ಮತ್ತು ಜನರ ಮಾತುಗಳನ್ನು ಕೇಳಬೇಕಿದೆ. ಪಂಜಾಬ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಯಾರೂ ನಮ್ಮ ಜೊತೆ ಮಾತನಾಡಿಲ್ಲ. ಆದ್ರೆ ಗಡಿ ರಾಜ್ಯ ಪಂಜಾಬ್ ಕಾಂಗ್ರೆಸ್ ಪಕ್ಷದಲ್ಲಿ ಅನೀರಿಕ್ಷಿತ ಬದಲಾವಣೆ ನಡೆಯುತ್ತಿರೋದು ಸತ್ಯ. ಈ ಬೆಳವಣಿಗೆ ಐಎಸ್ಐ ಮತ್ತು ಪಾಕಿಸ್ತಾನಕ್ಕೆ ಲಾಭವಾಗುವಂತಿದೆ ಎಂದು ಆತಂಕ ಹೊರಹಾಕಿದರು.
ವರದಿ: ಮಹ್ಮದ್ ರಫೀಕ್ ಕೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ