ರಾಯ್ಪುರ: 38 ಸೈನಿಕರನ್ನ ಹೊತ್ತು ಹೊರಟಿದ್ದ ಟ್ರೈನಿ ಪೊಲೀಸ್ ಬಸ್ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ 12 ಸೈನಿಕರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬಸ್ 15 ಅಡಿ ಆಳಕ್ಕೆ ಬಿದ್ದಿದ್ದು, ಮರ ಅಡ್ಡ ಬಂದಿದ್ದರಿಂದ ಇಳಿಜಾರಿನಲ್ಲಿ ನಿಂತಿದೆ. ಹಾಗಾಗಿ ಮರದಿಂದಾಗಿ ದೊಡ್ಡ ಅನಾಹುತವ ತಪ್ಪಿದಂತಾಗಿದೆ. ಸದ್ಯ ಗಾಯಾಳು ಸೈನಿಕರನ್ನು ಅಂಬಿಕಾಪುರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಸೈನಿಕರು ಮುಂಗೇಲಿಯಲ್ಲಿ ಆಯೋಜನೆಗೊಂಡಿದ್ದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾರ್ಯಕ್ರಮದ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಮನಿಪತ್ ಎಂಬಲ್ಲಿ ಬಸ್ ಅಪಘಾತಕ್ಕೀಡಾಗಿದೆ.
ಮೈನ್ಪಾಟದಲ್ಲಿದ್ದ ಸೈನಿಕರು ಪೊಲೀಸ್ ಟ್ರೈನಿಂಗ್ ಸ್ಕೂಲ್ ನಿಂದ ಬಸ್ ಮೂಲಕವಾಗಿ ಮುಂಗೇಲಿಗೆ ತೆರಳುತ್ತಿದ್ದರು. ಆಮ್ಗಾಂವ್ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿದೆ. ಈ ವೇಳೆ ಬಸ್ ಎರಡಕ್ಕಿಂತ ಹೆಚ್ಚು ಬಾರಿ ಪಲ್ಟಿಯಾಗಿ, ಮುಂದಿದ್ದ ಮರಕ್ಕೆ ತಾಗಿದ್ದರಿಂದ ನಿಂತಿದೆ. ಬಸ್ ಅಪಘಾತಕ್ಕೊಳಾಗುತ್ತಿದ್ದಂತೆ ಸ್ಥಳೀಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸೈನಿಕರನ್ನ ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಸ್ ನಿಂದ ಸೈನಿಕರನ್ನು ಹೊರ ತರುತ್ತಿದ್ದಂತೆ ತಮ್ಮದೇ ವಾಹನಗಳ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪಘಾತಕ್ಕೆ ಕಾರಣ ಏನು? ಪೊಲೀಸರು ಹೇಳಿದ್ದೇನು?
ಚಾಲಕ ಬಸ್ ಅತಿ ವೇಗವಾಗಿ ಚಲಾಯಿಸುತ್ತಿದ್ದನು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಚಾಲಕ ಬಸ್ ನಿಲ್ಲಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗದೇ ಕಾರಣ ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿದೆ. ಸೈನಿಕರಿಗೆ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಸದ್ಯ ಎಲ್ಲ ಸೈನಿಕರನ್ನು ಅಂಬಿಕಾಪುರ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ ಬಸ್ ಬ್ರೇಕ್ ಫೇಲ್ ಆಗಿತ್ತು ಎಂದು ಚಾಲಕ ಮುಂಗೇಲಿಲಾಲ್ ಹೇಳಿದ್ದಾರೆ. ಬಸ್ ಚಲಿಸುತ್ತಿದ್ದಾಗ ಬ್ರೇಕ್ ಫೇಲ್ ಆಗಿದ್ದರಿಂದ ನಿಯಂತ್ರಿಸಲು ಆಗಲಿಲ್ಲ ಎಂಬುವುದು ಚಾಲಕನ ವಾದ.
ಇದನ್ನೂ ಓದಿ: Kangana Ranaut| 'ಒಂದು ಜಿಲ್ಲೆ, ಒಂದು ಉತ್ಪನ್ನ' ಉತ್ತರಪ್ರದೇಶ ಕಾರ್ಯಕ್ರಮಕ್ಕೆ ನಟಿ ಕಂಗಾನ ರಾಯಭಾರಿ
ಬಸ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಆತನಿಗೆ ಯಾವುದೇ ಸಣ್ಣ ನೋವು ಸಹ ಆಗಿಲ್ಲ. ಎಲ್ಲ ಸೈನಿಕರು ಆರೋಗ್ಯವಾಗಿದ್ದಾರೆ. ಬಸ್ ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಬಸ್ ಕಂಡೀಷನ್ ಹೇಗಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪಿಟಿಎಸ್ ನ ಎಸ್.ಪಿ. ರವಿ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಸ್ ಬ್ರೇಕ್ ಫೇಲ್?
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾರ್ಯಕ್ರಮ ಹಿನ್ನೆಲೆ 150 ಸೈನಿಕರನ್ನು ಪೊಲೀಸ್ ಟ್ರೈನಿಂಗ್ ಸ್ಕೂಲ್ ಗೆ ಕರೆಸಲಾಗಿತ್ತು. ಕಾರ್ಯಕ್ರಮಕ್ಕಾಗಿ ನಾಲ್ಕು ಪ್ರತ್ಯೇಕ ವಾಹನಗಳಲ್ಲಿ ಸೈನಿಕರು ಹೊರಟಿದ್ದರು. ಇದರಲ್ಲಿಯ ಎರಡು ಬಸ್ ಗಳಲ್ಲಿ ಸುಮಾರು 70 ರಿಂದ 80 ಸೈನಿಕರು ಶುಕ್ರವಾರ ರಾತ್ರಿಯೇ ಹೊರಟಿದ್ದರು. ಎರಡು ಬಸ್ ಗಳಲ್ಲಿ ಶನಿವಾರ ಬೆಳಗ್ಗೆ ಇನ್ನುಳಿದ ಸೈನಿಕರು ತೆರಳುತ್ತಿದ್ದಾಗ ಒಂದು ಬಸ್ ಅಪಘಾತಕ್ಕೊಳಗಾಗಿದೆ. ಡ್ರೈವರ್ ಪ್ರಕಾರ ಬಸ್ ಬ್ರೇಕ್ ಫೇಲ್ ಆಗಿತ್ತು. ಆದ್ರೆ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಇಡೀ ರಾತ್ರಿ ಬಸ್ ಚಲಾಯಿಸಿದ್ದ ಚಾಲಕ ಮುಂಗೇಲಿಲಾಲ್
ಎಸ್ಪಿ ಹೇಳಿಕೆ ಪ್ರಕಾರ, ಚಾಲಕ ಮುಂಗೇಲಿಲಾಲ್ ಮೈದಾನಿ ಇಲಾಖೆಯಲ್ಲಿ ಬಸ್ ಚಲಾಯಿಸಲು ಹೋಗುತ್ತಾನೆ. ಶುಕ್ರವಾರ ರಾತ್ರಿ ಬಸ್ ಚಲಾಯಿಸಿದ್ದ ಮುಂಗೇಲಿಲಾಲ್, ಬೆಳಗ್ಗೆ ಬಂದು ಪಿಟಿಎಸ್ ಕೆಲಸಕ್ಕೆ ಹಾಜರಾಗಿದ್ದನು. ರಾತ್ರಿಯೆಲ್ಲ ಬಸ್ ಚಲಾಯಿಸಿದ್ದರಿಂದ ಚಾಲಕ ನಿದ್ರೆಗೆ ಜಾರಿರುವ ಸಾಧ್ಯತೆಗಳಿವೆ. ಘಾಟ್ ಪ್ರದೇಶವಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿರುವ ಸಾಧ್ಯತೆಗಳ ಬಗ್ಗೆ ಅನುಮಾನುಗಳು ವ್ಯಕ್ತವಾಗಿವೆ.
ವರದಿ: ಮೊಹ್ಮದ್ ರಫೀಕ್ ಕೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ