ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ; ಭಾರತದ ಯಾವೊಂದು ಶಿಕ್ಷಣ ಸಂಸ್ಥೆಗೂ ಸಿಕ್ಕಿಲ್ಲ ಸ್ಥಾನ!

ಈವರ್ಷ ವಿದ್ಯಾರ್ಥಿಗಳ ಅಂಕಗಳಲ್ಲಿನ ಗಣನೀಯ ಕುಸಿತ ಹಾಗೂ ಪೂರಕವಲ್ಲದ ಸಂಶೋಧನಾ ಪರಿಸರದಿಂದಾಗಿ ಐಐಎಸ್​ಸಿ ಸಹ ಈ ಪಟ್ಟಿಯಲ್ಲಿನ ತನ್ನ ಸ್ಥಾನವನ್ನು ಕಳೆದುಕೊಂಡಿದೆ.

MAshok Kumar | news18-kannada
Updated:September 12, 2019, 2:27 PM IST
ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ; ಭಾರತದ ಯಾವೊಂದು ಶಿಕ್ಷಣ ಸಂಸ್ಥೆಗೂ ಸಿಕ್ಕಿಲ್ಲ ಸ್ಥಾನ!
ಇಂಡಿಯನ್​ ಇನ್ಸ್ಟಿಟ್ಯೂಟ್​ ಆಫ್​ ಸೈನ್ಸ್​.
  • Share this:
ನವ ದೆಹಲಿ (ಸೆಪ್ಟೆಂಬರ್.12); ವಿಶ್ವದ ಟಾಪ್ 300 ವಿಶ್ವವಿದ್ಯಾನಿಲಯಗಳ ಪೈಕಿ 2012ರ ನಂತರ ಮೊದಲ ಬಾರಿಗೆ ಭಾರತದ ಯಾವುದೇ ವಿದ್ಯಾಸಂಸ್ಥೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಭಾರತೀಯ ವಿಜ್ಞಾನಗಳ ಸಂಸ್ಥೆ) ಕಳೆದ ವರ್ಷ ಅಗ್ರ 300 ಶ್ರೇಯಾಂಕದಲ್ಲಿ ಕಾಣಿಸಿಕೊಂಡಿತ್ತು. ಭಾರತದ ಪರವಾಗಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಶಿಕ್ಷಣ ಸಂಸ್ಥೆ ಎಂಬ ಶ್ರೇಯಕ್ಕೆ ಐಐಎಸ್​ಸಿ ಪಾತ್ರವಾಗಿತ್ತು.

ಆದರೆ, ಈವರ್ಷ ವಿದ್ಯಾರ್ಥಿಗಳ ಅಂಕಗಳಲ್ಲಿನ ಗಣನೀಯ ಕುಸಿತ ಹಾಗೂ ಪೂರಕವಲ್ಲದ ಸಂಶೋಧನಾ ಪರಿಸರದಿಂದಾಗಿ ಐಐಎಸ್​ಸಿ ಸಹ ಈ ಪಟ್ಟಿಯಲ್ಲಿನ ತನ್ನ ಸ್ಥಾನವನ್ನು ಕಳೆದುಕೊಂಡಿದೆ.

ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯಗಳಿಗೆ ರ್ಯಾಂಕಿಂಗ್ ನೀಡುವ "ಟೈಮ್ಸ್ ಉನ್ನತ ಶಿಕ್ಷಣ 2020” ಪಟ್ಟಿಯಲ್ಲಿ ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 2012ರಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿತ್ತು. ಅಲ್ಲದೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಶಿಕ್ಷಣ ಸಂಸ್ಥೆ ಎಂಬ ಶ್ರೇಯಕ್ಕೂ ಪಾತ್ರವಾಗಿತ್ತು. ಆದರೆ, ತದನಂತರದ ಕಾಲಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಬಾಂಬೆಯ ಐಐಟಿ ಸಂಸ್ಥೆ ವಿಫಲವಾಗಿತ್ತು.

ಈ ಪಟ್ಟಿಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಸತತವಾಗಿ ನಾಲ್ಕನೇ ವರ್ಷ ಅಗ್ರ ಶ್ರೇಯಾಂಕವನ್ನು ಪಡೆದಿದೆ. ಕ್ಯಾಲಿಪೋರ್ನಿಯಾದ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಐದರಿಂದ ಎರಡನೇ ಸ್ಥಾನಕ್ಕೆ ಜಿಗಿದರೆ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಸ್ಟ್ಯಾನ್ಪೋರ್ಡ್ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿವೆ.

ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪಟ್ಟಿಯ ಟಾಪ್ 300 ರಲ್ಲಿ ಬೆಂಗಳೂರಿನ ಐಐಎಸ್​ಸಿ ಸ್ಥಾನ ಕಳೆದುಕೊಂಡರೂ ದೇಶದ ಇತರೆ ವಿಶ್ವವಿದ್ಯಾಲಯಗಳ ಪೈಕಿ ಉತ್ತಮ ರ್ಯಾಂಕಿಂಗ್ ಹೊಂದಿದೆ. ಕಳೆದ ಬಾರಿ ಐಐಎಸ್​ಸಿ 251 ರಿಂದ 300 ಒಳಗಿನ ರ್ಯಾಂಕಿಂಗ್​ನಲ್ಲಿ ಸ್ಥಾನ ಪಡೆದಿತ್ತು. ಆದರೆ, ಈವರ್ಷ 50 ಸ್ಥಾನ ಕುಸಿದಿದ್ದು 301 ರಿಂದ 350ರ ಒಳಗಿನ ರ್ಯಾಂಕಿಗ್ ಗುಂಪಿಗೆ ಸೇರ್ಪಡೆಯಾಗಿದೆ.

ಇದನ್ನೂ ಓದಿ : ಆರ್​ಎಸ್​ಎಸ್​ ಮಾದರಿ ಪಕ್ಷ ಕಟ್ಟಲು ಮುಂದಾದ ಕಾಂಗ್ರೆಸ್, ಗಾಂಧಿ ಜಯಂತಿಯಿಂದ ಕಾರ್ಯಾರಂಭ; ಇಂದಿನ ಸಭೆಯಲ್ಲಿ ಚರ್ಚೆ

ಇಂದೋರ್​ನ ಐಐಟಿ 351 ರಿಂದ 400 ರ ಒಳಗಿನ ರ್ಯಾಂಕಿಂಗ್​ನಲ್ಲಿ ಗುರುತಿಸಿಕೊಂಡಿದೆ. ಇನ್ನೂ ಮುಂಬೈ, ದೆಹಲಿ ಮತ್ತು ಖರಗ್​ಪುರದ ಐಐಟಿಗಳು 401-500 ಶ್ರೇಯಾಂಕದಲ್ಲಿ ಸ್ಥಾನಪಡೆದಿವೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳ ಟಾಪ್ 300 ಪಟ್ಟಿಯಲ್ಲಿ ಭಾರತದ ಯಾವೊಂದು ಶಿಕ್ಷಣ ಸಂಸ್ಥೆಯೂ ಸ್ಥಾನ ಪಡೆದಿಲ್ಲ. ಆದಾಗ್ಯೂ, ಅತಿಹೆಚ್ಚು ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ ಏಪ್ಯಾ ಖಂಡದಲ್ಲಿ 3ನೇ ಸ್ಥಾನ ಪಡೆದಿದೆ. ಜಪಾನ್ ಮತ್ತು ಚೀನಾ ಮೊದಲೆರಡು ಸ್ಥಾನಗಳನ್ನು ಪಡೆದಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ “ಉನ್ನತ ಶಿಕ್ಷಣ 2020” ಪಟ್ಟಿಯ ಶ್ರೇಯಾಂಕ ಸಂಪಾದಕ ಎಲ್ಲೀ ಬೋಥೈಲ್, “ಉನ್ನತ ಶಿಕ್ಷಣದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಭಾರೀ ಪ್ರಮಾಣದ ಸಾಮರ್ಥ್ಯವನ್ನು ಹೊಂದಿದೆ. ಆದರೆ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಯುವ ಜನಸಂಖ್ಯೆ, ಆರ್ಥಿಕತೆ ಮತ್ತು ಇಂಗ್ಲೀಷ್ ಬೋಧನೆಯ ಬಳಕೆಯನ್ನು ಗಮನಿಸಿ ಈ ಶ್ರೇಯಾಂಕ ನೀಡಲಾಗಿದೆ. ಆದಾಗ್ಯೂ, ಭಾರತ ಟಾಪ್ 300 ರ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರುವುದು ನಿರಾಶಾದಾಯಕ" ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

"ಭಾರತ ಸರ್ಕಾರ ವಿಶ್ವವಿದ್ಯಾಲಯಗಳ ಜಾಗತಿಕ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ವಿದೇಶಿ ವಿದ್ಯಾರ್ಥಿಗಳ, ಶಿಕ್ಷಣ ತಜ್ಞರ ಹಾಗೂ ಸಂಶೋಧನಾ ಸಹಯೋಗವನ್ನು ಆಕರ್ಷಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಆದರೆ, ಈ ಆಕಾಂಕ್ಷೆಗಳ ಈಡೇರಿಕೆಗೆ ಜಾಗತಿಕ ಮಟ್ಟದ ಹೂಡಿಕೆ ಅವಶ್ಯಕವಾಗಿದೆ. ಹೆಚ್ಚುತ್ತಿರುವ ಜಾಗತಿಕ ಸ್ಪರ್ಧೆಯಿಂದಲೂ ಅಪಾಯ ಎದುರಾಗುವ ಸಾಧ್ಯತೆ ಇದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಲಡಾಖ್ ಗಡಿಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ಸಂಘರ್ಷ; ಉದ್ವಿಘ್ನ ಪರಿಸ್ಥಿತಿ

First published: September 12, 2019, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading