ಅಹಮದಾಬಾದ್(ನ.26): ಗುಜರಾತ್ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ವಾಸ್ತವವಾಗಿ, ಶುಕ್ರವಾರ ಗುಜರಾತ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ಅಶಾಂತಿ ಹರಡುವವರಿಗೆ 2002 ರಲ್ಲಿ ತಕ್ಕ ಪಾಠ ಕಲಿಸಲಾಯಿತು. ಇದಾದ ಬಳಿಕವೇ ರಾಜ್ಯದಲ್ಲಿ 'ಶಾಶ್ವತ ಶಾಂತಿ' ನೆಲೆಸಿತು ಎಂದು ಹೇಳಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆಗೆ ಹಲವು ಪ್ರತಿಕ್ರಿಯೆಗಳು ಬರುತ್ತಿವೆ. 2002ರಲ್ಲಿ ಗಲಭೆಕೋರರಿಗೆ ಪಾಠ ಕಲಿಸಿದ ಕೇಂದ್ರ ಗೃಹ ಸಚಿವರ ಹೇಳಿಕೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೂಡ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.
ಬಿಲ್ಕಿಸ್ನ ಅತ್ಯಾಚಾರಿಗಳ ಬಿಡುಗಡೆ ಪಾಠವೇ?
ಅಹಮದಾಬಾದ್ನ ವೆಜಲ್ಪುರದ ಜುಹಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, 'ಅಮಿತ್ ಶಾ ಅವರೇ ನಮಗೆ ಏನು ಪಾಠ ಕಲಿಸಿದ್ದೀರಿ? ಬಿಲ್ಕಿಸ್ನ ಅತ್ಯಾಚಾರಿಗಳನ್ನು ಬಿಡುವುದು ಪಾಠವೇ? ಬಿಲ್ಕಿಸ್ ನ 3 ವರ್ಷದ ಮಗಳನ್ನು ಕಣ್ಣೆದುರೇ ಹೊಡೆದು ಕೊಂದವರನ್ನು ಬಿಡುವುದು ಪಾಠವೇ? ಎಹ್ಸಾನ್ ಜಾಫ್ರಿ ಮತ್ತು ಬೆಸ್ಟ್ ಬೇಕರಿಯಂತಹ ಅನೇಕ ಪಾಠಗಳನ್ನು ನೀವು ನಮಗೆ ಕಲಿಸಿದ್ದೀರಿ. ಗೃಹ ಸಚಿವರಾಗಿದ್ದಾಗ ನಮಗೆ ಪಾಠ ಕಲಿಸಿದ್ದಾರೆ ಎಂದು ಅಮಿತ್ ಶಾ ಹೇಳುತ್ತಾರೆ? ನೀವು ಯಾವ ಪಾಠವನ್ನು ಕಲಿಸಿದ್ದೀರಿ? ದೆಹಲಿಯಲ್ಲಿಯೂ ಗಲಭೆಗಳು ನಡೆದಿವೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಒವೈಸಿ ತಮ್ಮ ಭಾಷಣದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಇನ್ನು ಇದೇ ವೇಳೆ, ಕಾಂಗ್ರೆಸ್ ವಿರುದ್ಧವೂ ಕಿಡಿ ಕಾರಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು 'ಛೋಟಾ ರೀಚಾರ್ಜ್' ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: Hardik Patel: 'ಬರೀ ಮೋದಿಯನ್ನೇ ಬಯ್ತಾರೆ', ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಾರ್ದಿಕ್ ಪಟೇಲ್
#WATCH | I want to tell Union HM, the lesson you taught in 2002 was that Bilkis’ rapists will be freed by you, you'll free the murderers of Bilkis’ 3-year-old daughter, Ahsan Jafri will be killed…which lessons of yours will we remember?: AIMIM chief Asaduddin Owaisi in Ahmedabad pic.twitter.com/2rvQCaGFNY
— ANI (@ANI) November 25, 2022
ಅಮಿತ್ ಶಾ ಹೇಳಿದ್ದೇನು?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ 25 ರಂದು ಗುಜರಾತ್ನ ನಾಡಿಯಾದ್ ಖೇಡಾದಲ್ಲಿ ಭಾಷಣ ಮಾಡಿದ್ದರು. ಈ ಬಗ್ಗೆ ವರದಿ ಪ್ರಕಟಿಸಿರುವ ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಅಮಿತ್ ಶಾ ತಮ್ಮ ಭಾಷಣದಲ್ಲಿ, 'ಗುಜರಾತ್ನಲ್ಲಿ ಕಾಂಗ್ರೆಸ್ ಕೋಮು ಮತ್ತು ಜಾತಿ ಗಲಭೆಗಳನ್ನು ಪ್ರಚೋದಿಸಿದೆ. ಕಾಂಗ್ರೆಸ್ ವಿವಿಧ ಸಮುದಾಯಗಳು ಮತ್ತು ಜಾತಿಗಳ ಜನರನ್ನು ತಮ್ಮ ತಮ್ಮಲ್ಲೇ ಜಗಳವಾಡುವಂತೆ ಪ್ರಚೋದಿಸುತ್ತಿತ್ತು ಎಂದು ಆರೋಪಿಸಿದ್ದರು.
ಗಲಭೆಕೋರರಿಗೆ ಪಾಠ
ಅಲ್ಲದೇ ಗೋದ್ರಾ ಹತ್ಯಾಕಾಂಡ ಹಾಗೂ ಇದಾದ ಬಳಿಕದ ಗುಜರಾತ್ನ ವಿವಿಧ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ, ಗಲಭೆಗಳ ಬಗ್ಗೆ ಉಲ್ಲೇಖಿಸಿದ್ದ ಅಮಿತ್ ಶಾ “2002 ರಲ್ಲಿ ಗುಜರಾತ್ನಲ್ಲಿ ಗಲಭೆಗಳು ನಡೆದವು, ಏಕೆಂದರೆ ಕಾಂಗ್ರೆಸ್ನಿಂದ ಪಡೆದ ದೀರ್ಘಕಾಲದ ಬೆಂಬಲದಿಂದಾಗಿ ಅಪರಾಧಿಗಳಿಗೆ ಹಿಂಸಾಚಾರ ನಡೆಸುವುದು ಅಭ್ಯಾಸವಾಗಿ ಬಿಟ್ಟಿತ್ತು ಎಂದಿದ್ದರು.
ಇದನ್ನೂ ಓದಿ: ರಾಜೀವ್ ಗಾಂಧಿ ಹಂತಕರ ರಿಲೀಸ್: ನಳಿನಿ ಸೇರಿ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಆದೇಶ!
ತಮ್ಮ ಭಾಷಣವನ್ನು ಮುಂದುವರೆಸಿದ್ದ ಅವರು 'ಆದರೆ 2002 ರಲ್ಲಿ ಗಲಭೆಕೋರರಿಗೆ ಪಾಠ ಕಲಿಸಿದ ನಂತರ, ಅವರೆಲ್ಲರೂ ಅಪರಾಧದ ಹಾದಿಯನ್ನು ತೊರೆದವು. ನಂತರ 2002 ರಿಂದ 2022 ರವರೆಗೆ ಯಾವುದೇ ಹಿಂಸಾಚಾರ ನಡೆದಿಲ್ಲ. ಕೋಮುಗಲಭೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷ ಗುಜರಾತ್ನಲ್ಲಿ ಶಾಶ್ವತ ಶಾಂತಿ ಸ್ಥಾಪಿಸಿದೆ ಎಂದಿದ್ದಾರೆ.
ಡಿಸೆಂಬರ್ನಲ್ಲಿ ಗುಜರಾತ್ ಚುನಾವಣೆ
ಇನ್ನು ಗುಜರಾತ್ನ 182 ವಿಧಾನಸಭಾ ಸ್ಥಾನಗಳಿಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಮೊದಲ ಹಂತದಲ್ಲಿ 89 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 93 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ