ನವ ದೆಹಲಿ (ಜೂನ್ 11); ಒಂದು ದೇಶ ಒಂದು ರೇಷನ್ ಕಾರ್ಡ್ (one nation-one ration card) ಎಂಬುದು ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆ. ಈ ಯೋಜನೆಯನ್ನು ಅತಿ ಶೀಘ್ರದಲ್ಲೇ ಜಾರಿಗೆ ತರುವುದಾಗಿ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆಯನ್ನೂ ನೀಡಿತ್ತು. ಅದರಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಇದೀಗ ತನ್ನ ಬಹು ನಿರೀಕ್ಷಿತ ಒನ್ ನೇಷನ್- ಒನ್ ರೇಷನ್ ಎಂಬ ಏಕ ರೂಪದ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಗೆ ಕೆಲವು ರಾಜ್ಯಗಳು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿವೆ. ಇದುವರೆಗೆ ಒನ್ ನೇಷನ್ – ಒನ್ ರೇಷನ್ ಯೋಜನೆಯನ್ನು ಜಾರಿಗೊಳಿಸದ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದು. ಆದರೆ, ಇಂದು ಸುಪ್ರೀಂ ಕೋರ್ಟ್ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಒನ್ ನೇಷನ್ ಒನ್ ರೇಷನ್ ಯೋಜನೆಯನ್ನು ಅತೀ ಶೀಘ್ರದಲ್ಲಿ ಜಾರಿಗೊಳಿಸುವಂತೆ ಸೂಚಿಸಿದೆ.
ವಲಸೆ ಕಾರ್ಮಿಕರಿಗೆ ನೆರವಾಗುವ ಒನ್ ನೇಷನ್ – ಒನ್ ರೇಷನ್ ಯೋಜನೆಯನ್ನು ನೀವು ಬೇರೆ ಬೇರೆ ಕಾರಣಗಳನ್ನು ಹೇಳಿ ಮುಂದೂಡಲು ಸಾಧ್ಯವಿಲ್ಲ. ಶೀಘ್ರದಲ್ಲಿ ಯೋಜನೆಯನ್ನು ಜಾರಗೊಳಿಸಿ ನ್ಯಾಯಲಾಯಕ್ಕೆ ವರದಿ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿತು.
ಕೇಂದ್ರ ಸರ್ಕಾರ ಮುಂದಿನ ದೀಪಾವಳಿಯ ವರೆಗೆ ಬಿಪಿಎಲ್ ಕಾರ್ಡುದಾರರಿಗೆ ನೀಡುವ ರೇಷನ್ ಜನರಿಗೆ ತಲುಪಬೇಕಾದರೆ ಒನ್ ನೇಷನ್ ಒನ್ ರೇಷನ್ ಯೋಜನೆ ಜಾರಿ ಮಾಡುವುದು ಮುಖ್ಯವಾಗಿದೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೇಂದ್ರ ಸರ್ಕಾರ ನೀಡುವ ರೇಷನ್ ಅಗತ್ಯವಾಗಿದೆ. ನೀವು ಈ ಕೂಡಲೇ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಿ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದ ಸುಪ್ರೀಂ ಕೋರ್ಟ್ ಪ್ರಕರಣ ವಿಚಾರಣೆಯನ್ನು ಮುಂದೂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ