Tamil Nadu Rains: ತಮಿಳುನಾಡಿನಲ್ಲಿ ಇಂದು ಮತ್ತು ನಾಳೆ ಕೂಡ ರೆಡ್​ ಆಲರ್ಟ್​; ಚೆನ್ನೈ ಜನರಿಗೆ ಎಚ್ಚರಿಕೆ ಸೂಚನೆ

ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ತಮ್ಮ ಮನೆಗಳಿಂದ ಹೊರಹೋಗಬೇಕು ಎಂದು ಚೆನ್ನೈ ಕಮಿಷನರ್​ ಸೂಚನೆ ನೀಡಿದ್ದಾರೆ

ಚೆನ್ನೈನ ಚಿತ್ರಣ

ಚೆನ್ನೈನ ಚಿತ್ರಣ

 • Share this:
  ಚೆನ್ನೈ (ನ. 10):  ಪ್ರವಾಹದಿಂದ ತತ್ತರಿಸಿರುವ ಚೆನ್ನೈನಲ್ಲಿ ಇಂದು ಮತ್ತು ನಾಳೆ ಕೂಡ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ. ಈಗಾಗಲೇ ಮಳೆಯ ಪ್ರವಾಹದಿಂದ ರಾಜ್ಯದ ಬಹುತೇಕ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಮುಂದಿನ 48 ಗಂಟೆಗಳ ಕಾಲ ಕೂಡ ಮಳೆ ಮುಂದಿವರೆಯಲಿದ್ದು, 150 ರಿಂದ 200 ಮಿಮೀ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಗ್ರೇಟರ್ ಚೆನ್ನೈ ಕಮಿಷನರ್ ಗಗನ್‌ದೀಪ್ ಸಿಂಗ್ ಬೇಡಿ ತಿಳಿಸಿದ್ದಾರೆ. ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ತಮ್ಮ ಮನೆಗಳಿಂದ ಹೊರಹೋಗಬೇಕು. ಮನೆಯಲ್ಲಿ ಸಾಕಷ್ಟು ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

  ಪ್ರವಾಹದಿಂದ ತತ್ತರಿಸಿದ ಚೆನ್ನೈ

  ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 12 ಆಗಿದೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಹೇಳಿದ್ದಾರೆ.

  ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ 20 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತವು ಪಶ್ಚಿಮ-ವಾಯುವ್ಯಕ್ಕೆ ಚಲಿಸಿ ತಮಿಳುನಾಡಿನ ಉತ್ತರ ಕರಾವಳಿಗೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ಮತ್ತು ನೆರೆಯ ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆ ಆಗಲಿದೆ.

  ಜನರ ನೆರವಿಗೆ ಅಗತ್ಯ ಕ್ರಮ

  ಈಗಾಗಲೇ ತಮಿಳುನಾಡು ಸರ್ಕಾರ ಪ್ರವಾಹ ಮತ್ತು ಇತರ ತುರ್ತು ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲು 434 ಸೈರನ್ ಟವರ್‌ಗಳನ್ನು ಸ್ಥಾಪಿಸಿದೆ. ಜೊತೆಗೆ ಜನರ ಮೊಬೈಲ್ ಸಂಪರ್ಕಕ್ಕೆ ತೊಂದರೆಯಾಗದಂತೆ ಖಚಿತಪಡಿಸಿಕೊಳ್ಳಲು ಟೆಲಿಕಾಂ ನೆಟ್‌ವರ್ಕ್‌ಗಳೊಂದಿಗೆ ಕೆಲಸ ಮಾಡುತ್ತಿದೆ.

  ಇದನ್ನು ಓದಿ: ಭಾರೀ ಮಳೆಯಿಂದ ಚೆನ್ನೈ ಸೇರಿದಂತೆ 3 ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಣೆ​; ಪ್ರಧಾನಿಯಿಂದ ಅಗತ್ಯ ನೆರವಿನ ಭರವಸೆ

  ಗುಡುಗು ಸಹಿತ ಭಾರೀ ಮಳೆ

  ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು, ವಿಲ್ಲುಪುರಂ, ಕಡಲೂರು, ಪಾಂಡಿಚೇರಿ, ರಾಣಿಪೆಟ್ಟೈ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಿದೆ. ಇದರ ಜೊತೆಗೆ ಕಾರೈಕಲ್, ಕಲ್ಲಕುರಿಚಿ, ವೆಲ್ಲೂರು, ತಿರುಪತಿ, ತಿರುವಣ್ಣಾಮಲೈ, ಸೇಲಂ, ಕೊಯಮತ್ತೂರು ಧರ್ಮಪುರಿ ಈರೋಡ್ ಕೃಷ್ಣಗಿರಿ ನಾಮಕ್ಕಲ್ ಅರಿಯಲೂರ್ ಪೆರಂಬಲೂರ್ ಪುದುಕೊಟ್ಟೈ, ತಿರುಚಿರಾಪಳ್ಳಿ ಮತ್ತು ಈರೋಡ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.

  ಇದನ್ನು ಓದಿ: ಬಸ್-ಟ್ಯಾಂಕರ್​ ನಡುವೆ ಭೀಕರ ಅಪಘಾತ; 12 ಮಂದಿ ಸಜೀವ ದಹನ: ಮೋದಿ ಸಂತಾಪ

  ಪರಿಹಾರ ಕೇಂದ್ರ ಸ್ಥಾಪನೆ

  ಚೆನ್ನೈನಲ್ಲಿ ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗದೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಶನಿವಾರ ರಾತ್ರಿಯಿಂದ ಚೆನ್ನೈ. ಉತ್ತರ ಚೆನ್ನೈನ ತಿರುವೊಟ್ಟಿಯೂರ್, ಎನ್ನೂರು, ಕಾಸಿಮೇಡು, ರಾಯಪುರಂ, ತಂಡಯಾರ್‌ಪೇಟ್, ವ್ಯಾಸರ್ಪಾಡಿ ಮತ್ತು ಪೆರಂಬೂರ್ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಲೇ ಇದೆ.
  ಮಳೆಯಿಂದ ಹಾನಿಗೊಳಗಾದ ನಿರಾಶ್ರಿತರಿಗಾಗಿ 169 ಪರಿಹಾರ ಕೇಂದ್ರಗಳು ತೆರೆಯಲಾಗಿದೆ. ಅಮ್ಮ ಕ್ಯಾಂಟೀನ್ ಮೂಲಕ ಹಾನಿಗೊಳಗಾದವರಿಗೆ ಉಚಿತ ಆಹಾರವನ್ನು ನೀಡಲಾಗುವುದು ಮತ್ತು ಚೆನ್ನೈ ಕಾರ್ಪೊರೇಷನ್ ತಗ್ಗು ಪ್ರದೇಶಗಳಲ್ಲಿನ ಸಮುದಾಯಗಳಿಗೆ ಆಹಾರ ಪ್ಯಾಕೆಟ್​ಗಳನ್ನು ವಿತರಿಸಲಾಗುತ್ತಿದೆ. ನಿನ್ನೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಆಹಾರ ವಿತರಿಸಿದರು.

  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ರಕ್ಷಿಸಲು 41 ಸ್ಥಳಗಳಲ್ಲಿ ದೋಣಿಗಳನ್ನು ಸಜ್ಜುಗೊಳಿಸಲಾಗಿದೆ. ಜೊತೆಗೆ ಪ್ರವಾಹ ನೀರನ್ನು ಹರಿದು ಹೋಗಲು ನಾನಾ ವ್ಯವಸ್ಥೆ ಕೈಗೊಳ್ಳಲಾಗಿದೆ. 2015ರಲ್ಲಿ ಏಕಾಏಕಿ ನೀರು ಬಿಟ್ಟು ಪ್ರವಾಹ ಸೃಷ್ಟಿಸದಂತೆ ಕ್ರಮಕೈಗೊಳ್ಳಲಾಗಿದೆ
  Published by:Seema R
  First published: