ಆಲೋಪತಿ ಮತ್ತು ಆಲೋಪತಿ ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯೋಗಗುರು ಬಾಬಾ ರಾಮದೇವ್ ವಿರುದ್ಧ ಮಾನನಷ್ಟ ನೋಟಿಸ್ ಜಾರಿ ಮಾಡಿದೆ. ರಾಮ್ದೇವ್ 15 ದಿನಗಳಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದರೆ, 1000 ಕೋಟಿ ರೂ. ಮಾನಹಾನಿ ಪರಿಹಾರವನ್ನು ನೀಡಬೇಕು ಎಂದು ಉತ್ತರಾಖಂಡ ಐಎಂಎ ಯೋಗಗುರು ಬಾಬಾ ರಾಮ್ದೇವ್ ವಿರುದ್ಧ ಬೇಡಿಕೆ ಇಟ್ಟಿದೆ.
ಐಎಂಎ (ಉತ್ತರಾಖಂಡ) ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರ ವಕೀಲ ನೀರಜ್ ಪಾಂಡೆ ಆರು ಪುಟಗಳ ನೋಟಿಸ್ ಸಲ್ಲಿಸಿದ್ದಾರೆ. "ರಾಮದೇವ್ ಅವರ ಹೇಳಿಕೆಗಳು ಆಲೋಪತಿಯ ಹೆಸರು, ವ್ಯವಸ್ಥೆಯ ವಿಶ್ವಾಸ ಮತ್ತು ನಂಬಿಕೆಗೆ ಹಾನಿಯುಂಟು ಮಾಡಿದೆ.ಅಲ್ಲದೇ ಸಂಘದ ಸದಸ್ಯರಾಗಿರುವ ಸುಮಾರು 2,000 ವೈದ್ಯರ ಘನತೆಗೆ ಧಕ್ಕೆ ತಂದಿದೆ" ಎಂದು ನೋಟಿಸ್ನಲ್ಲಿ ವಿವರಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಅಡಿಯಲ್ಲಿ ಯೋಗ ಗುರುಗಳ ಟೀಕೆಗಳನ್ನು "ಕ್ರಿಮಿನಲ್ ಆಕ್ಟ್" ಎಂದು ನೋಟಿಸ್ನಲ್ಲಿ ವಿವರಿಸಿದೆ. ಜೊತೆಗೆ ನೋಟಿಸ್ ಸ್ವೀಕರಿಸಿದ 15 ದಿನಗಳಲ್ಲಿ ಲಿಖಿತ ರೂಪದಲ್ಲಿ ಔಪಚಾರಿಕವಾಗಿ ಕ್ಷಮೆಯಾಚಿಸಬೇಕು ಅಥವಾ ಐಎಂಎ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪ್ರತಿ ಸದಸ್ಯನಿಗೆ ತಲಾ 50 ಲಕ್ಷ ರೂ. ನೀಡುವ ಮೂಲಕ 1,000 ಕೋಟಿ ರೂ. ಪರಿಹಾರ ನೀಡಬೇಕು ಎಂದಿದೆ.
ಅಲ್ಲದೇ ರಾಮ್ದೇವ್ ಅವರು ಹೇಳಿರುವ ಸುಳ್ಳು ಮತ್ತು ಮಾನಹಾನಿಕರ ಆರೋಪಗಳಿಗೆ ವಿರುದ್ಧವಾದ ವಿಡಿಯೋ ಕ್ಲಿಪ್ ನೀಡಬೇಕೆಂದು ಹೇಳಿದೆ. ಇದಕ್ಕೂ ಮುಂಚೆ ಮಾನಹಾನಿಯ ಹೇಳಿಕೆಗಳ ವಿಡಿಯೋಗಳನ್ನು ಎಲ್ಲೆಲ್ಲಿ ಹಂಚಿದ್ದರೋ, ಅಲ್ಲೆಲ್ಲಾ ಈ ವಿಡಿಯೋವನ್ನು ಅಪ್ಲೋಡ್ ಮಾಡಬೇಕು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೇ ಬಾಬಾ ರಾಮ್ ದೇವ್ ಅವರು ತಮ್ಮ ಸಂಸ್ಥೆಯ ಉತ್ಪನ್ನವಾದ "ಕೊರೊನಿಲ್ ಕಿಟ್" ಬಗ್ಗೆ ಹೇಳುತ್ತಿದ್ದಾರೆ. ಕೋವಿಡ್ -19ಗೆ ಪರಿಣಾಮಕಾರಿ ಎಂದು ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿದ್ದಾರೆ.ಒಂದು ವೇಳೆ ಅದನ್ನು ಎಲ್ಲಾ ವೇದಿಕೆಗಳಿಂದ ತೆಗೆಯದಿದ್ದರೆ ಐಎಂಎ, ಎಫ್ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುತ್ತದೆ ಎಂದು ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಹಿಂದೆ ರಾಮ್ದೇವ್ ಅವರ ಟೀಕೆಗಳನ್ನು ಖಂಡಿಸಿ ಹೇಳಿಕೆ ಪ್ರಕಟಿಸಿತ್ತು. "ಕೇಂದ್ರ ಆರೋಗ್ಯ ಸಚಿವರು, ಆರೋಪಗಳನ್ನು ಸ್ವೀಕರಿಸಿ ಸಮಕಾಲೀನ ವೈದ್ಯಕೀಯ ಸಂಸ್ಥೆಯನ್ನು ಕೈ ಬಿಡಬೇಕು ಅಥವಾ ಬಾಬಾ ರಾಮ್ದೇವ್ ಅವರನ್ನು ವಿಚಾರಣೆಗೆ ಒಳಪಡಿಸಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು" ಎಂದು ಒತ್ತಾಯಿಸಿದ್ದರು.
ಇದರ ಬೆನ್ನಲ್ಲೇ ಐಎಂಎ ಉಪಾಧ್ಯಕ್ಷ ಡಾ.ನವಜೋತ್ ಸಿಂಗ್ ದಾಹಿಯಾ ಅವರು ಯೋಗ ಗುರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಲಂಧರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮೊಕದ್ದಮೆಯಲ್ಲಿ "ಬಾಬಾ ರಾಮದೇವ್ ಅವರ ವಿರುದ್ಧ ವೈದ್ಯರ ಬಗ್ಗೆ ಮಾನನಷ್ಟ ಮಾಡಿದ್ದಾರೆ ಮತ್ತು ಅವಹೇಳನಕಾರಿ ಭಾಷೆ ಬಳಸಿದ್ದಾರೆ'' ಎಂದು ದಹಿಯಾ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ