ಪಾಟ್ನಾ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿಯನ್ನು (BJP) ಸೋಲಿಸಲು ಕಾಂಗ್ರೆಸ್ (Congress) ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತೊಮ್ಮೆ ಕರೆ ನೀಡಿದ್ದಾರೆ. ಈ ಐಕ್ಯರಂಗ ಬಿಜೆಪಿಯನ್ನು 100 ಕ್ಕಿಂತ ಕಡಿಮೆ ಸ್ಥಾನಗಳಿಗೆ ಇಳಿಸಲಿದೆ ಎಂದು 71 ವರ್ಷದ ಬಿಹಾರ್ ನಾಯಕ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ. ಅದರಲ್ಲೂ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಾಡಿ ಯಶಸ್ವಿಯಾಗಿರುವ ಕಾಂಗ್ರೆಸ್ ನಾಯಕರು ಸುಮ್ಮನೆ ಕೂರದೆ ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಬಿಜೆಪಿಯನ್ನು 100ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿಯುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ.
ಪ್ರಧಾನಿಯಾಗುವ ಆಕಾಂಕ್ಷೆಯಿಲ್ಲ
ಪಾಟ್ನಾದಲ್ಲಿ ನಡೆದ ಸಿಪಿಐ-ಎಂನ 11ನೇ ಮಹಾಧಿವೇಶನದಲ್ಲಿ ಮಾತನಾಡಿದ ಅವರು, ನನಗೆ ಪ್ರಧಾನಿಯಾಗುವ ಯಾವುದೇ ಮಹತ್ವಾಕಾಂಕ್ಷೆ ಇಲ್ಲ ಅಥವಾ ಆ ಹುದ್ದೆಗೆ ಸ್ಪರ್ಧಿಯಾಗುವ ಯಾವುದೇ ಆಕಾಂಕ್ಷೆಯನ್ನು ಹೊಂದಿಲ್ಲ ಎಂದು ಪುನರುಚ್ಚರಿಸಿದರು. ಆದರೆ ದೇಶವನ್ನು ಒಂದುಗೂಡಿಸುವುದು ಮತ್ತು ದ್ವೇಷವನ್ನು ಹರಡುವ ಜನರಿಂದ ದೇಶವನ್ನು ಮುಕ್ತಗೊಳಿಸುವುದು ನನ್ನ ಏಕೈಕ ಮಹತ್ವಾಕಾಂಕ್ಷೆಯಾಗಿದೆ. ನನಗೆ ನಿಜವಾಗಿಯೂ ಯಾವ ಅಧಿಕಾರ ಬೇಡ, ಆದರೆ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ " ಎಂದು ಹೇಳಿದರು.
ಕಾಂಗ್ರೆಸ್ ಬೇಗ ನಿರ್ಧಾರ ತೆಗದುಕೊಳ್ಳಲಿ
" ನೀವು (ಕಾಂಗ್ರೆಸ್) ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಿ, ಒಂದು ವೇಳೆ ನೀವು ನನ್ನ ಸಲಹೆಯನ್ನು ಒಪ್ಪಿಕೊಂಡು ಒಟ್ಟಾಗಿ ಸ್ಪರ್ಧಿಸಿದರೆ, ನಾವು ಕಂಡಿತ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 100ಕ್ಕಿಂತಲೂ ಕಡಿಮೆ ಸ್ಥಾನಗಳಿಗೆ ಇಳಿಸಬಹುದು. ಆದರೆ ನನ್ನ ಮಾತನ್ನು ಕೇಳದಿದ್ದರೆ, ಏನಾಗಲಿದೆ ಎನ್ನುವುದು ನಿಮಗೆ ತಿಳಿದಿದೆ " ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಯಶಸ್ಸು ಸಾಧಿಸಿದೆ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಯಶಸ್ಸು ಕಂಡಿದೆ ಎಂದು ನನ್ನ ಕಾಂಗ್ರೆಸ್ ಮಿತ್ರರಿಗೆ ಹೇಳಲು ಬಯಸುತ್ತೇನೆ. ಆದರೆ ಅವರು ಅಷ್ಟಕ್ಕೆ ಸೀಮಿತವಾಗಬಾರದು. ಇತರೆ ವಿರೋಧ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಹೋರಾಡುವುದರ ಕಡೆಗೆ ಬೇಗನೆ ನಿರ್ಧಾರ ತೆಗೆದುಕೊಳ್ಳಬೇಕು. ಯಾವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು, ಎಲ್ಲೆಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಈಗಿನಿಂದಲೇ ಸಿದ್ಧತೆ ನಡೆಸಬೇಕೆಂದು ತಿಳಿಸಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬದಲು ಸಾಯುವುದೇ ಮೇಲು
ಕಳೆದ ವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿ ಜೊತೆ ಮೈತ್ರಿ ಮಾಡುವ ಬದಲು ಸಾಯುವುದೇ ಮೇಲು ಎಂದು ಹೇಳಿದ್ದರು. ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಉದ್ದೇಶ ಪೂರ್ವಕವಾಗಿ ಆಧಾರ ರಹಿತ ಆರೋಪಗಳನ್ನು ಮಾಡಿ ನಮ್ಮನ್ನು ಸಿಕ್ಕಿಸಿಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ ಎಂದು ಆರೋಪಿಸಿದ್ದ ಅವರು, ಇನ್ನು ಮುಂದೆ ಬಿಜೆಪಿ ಜೊತೆ ಮೈತ್ರಿಯ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಬಿಜೆಪಿಯಿಂದ ಬೇರ್ಪಟ್ಟು ಆರ್ಜೆಡಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ಈಗಾಗಲೇ ಅವರು ಬಿಜೆಪಿ ವಿರುದ್ಧ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದಕ್ಕೆ ಬೇರೆ ಪಕ್ಷದವರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ