ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಮುಂದಾದರೆ ನಾವು ಬಾಬ್ರಿ ಮಸೀದಿ ಕಟ್ಟುತ್ತೇವೆ; ಉದ್ಧವ್​ ಠಾಕ್ರೆಗೆ ಎಸ್​ಪಿ ನಾಯಕ ಎಚ್ಚರಿಕೆ

ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನಂತರ ಮತ್ತು ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ನಂತರ ಮೊದಲ ಬಾರಿಗೆ ಮಾರ್ಚ್​ 7ರಂದು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.

ಫರಾನ್ ಅಜ್ಮಿ

ಫರಾನ್ ಅಜ್ಮಿ

  • Share this:
ಮುಂಬೈ (ಜ. 30): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾರ್ಚ್​ ತಿಂಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ಆಶೀರ್ವಾದ ಪಡೆಯುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಮಗ ಫರಾನ್ ಅಜ್ಮಿ ಹೇಳಿಕೆ ನೀಡಿದ್ದು, ನಾನು ಕೂಡ ಠಾಕ್ರೆ ಜೊತೆ ಹೋಗಿ ಬಾಬ್ರಿ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದಿದ್ದಾರೆ.

ಮಾರ್ಚ್​ 7ಕ್ಕೆ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡುವುದಾಗಿ ಘೋಷಿಸಿದ್ದ ಅವರು ತಮಗೆ ಸಾಥ್ ನೀಡುವಂತೆ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್​ಸಿಪಿ ನಾಯಕರನ್ನು ಕೂಡ ಆಹ್ವಾನಿಸುತ್ತೇನೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್​ಪಿ ನಾಯಕ ಫರಾನ್ ಅಜ್ಮಿ, 'ಉದ್ಧವ್ ಠಾಕ್ರೆ ಮಾರ್ಚ್​ ತಿಂಗಳಲ್ಲಿ ಅಯೋಧ್ಯೆಗೆ ತೆರಳುವುದಾಗಿ ಹೇಳಿದ್ದಾರೆ. ನಾನು ಕೂಡ ಅವರೊಂದಿಗೆ ಹೋಗುತ್ತೇನೆ. ಅವರೇನಾದರೂ ಅಲ್ಲಿ ರಾಮ ಮಂದಿರಕ್ಕೆ ಗುದ್ದಲಿಪೂಜೆ ಮಾಡಿದರೆ ನಾವು ಬಾಬ್ರಿ ಮಸೀದಿ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳುತ್ತೇವೆ' ಎಂದಿದ್ದಾರೆ.

ಇದನ್ನೂ ಓದಿ: ನಾಥೂರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿ ಈ ಇಬ್ಬರದ್ದೂ ಒಂದೇ ಸಿದ್ಧಾಂತ; ರಾಹುಲ್ ಗಾಂಧಿ ವಾಗ್ದಾಳಿ

ಅಯೋಧ್ಯೆಯ ವಿವಾದದ ಕುರಿತು ಇತ್ತೀಚೆಗಷ್ಟೇ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್​ ವಿವಾದಿತ ಜಾಗವನ್ನು ರಾಮ್​ಲಲ್ಲಾಗೆ ಬಿಟ್ಟುಕೊಡಬೇಕು, ಬಾಬ್ರಿ ಮಸೀದಿ ಕಟ್ಟಲು ಬೇರೆ ಪ್ರದೇಶದಲ್ಲಿ ಜಾಗ ನೀಡಬೇಕು ಎಂದು ಆದೇಶಿಸಿತ್ತು. ಅಲ್ಲದೆ, ಈ ವಿಚಾರವಾಗಿ ಸಮಿತಿ ರಚಿಸುವಂತೆಯೂ ಸೂಚಿಸಿತ್ತು.

ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ನಂತರ ಮತ್ತು ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ನಂತರ ಮೊದಲ ಬಾರಿಗೆ ಮಾರ್ಚ್​ 7ರಂದು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ನವೆಂಬರ್ 28ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ಅವರು, ಇತ್ತೀಚಿಗಷ್ಟೇ 50 ದಿನಗಳ ಅಧಿಕಾರವಧಿ ಪೂರೈಸಿದ್ದಾರೆ.

 
First published: