ರಾಂಚಿ (ಅ.25): ತಮ್ಮ ಎಲ್ಜೆಪಿ ಪಕ್ಷ ಅಧಿಕಾರಕ್ಕೆ ಬಂದರೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಇಲ್ಲಿನ ಬಕ್ಸಾರ್ನ ಡುಮ್ರಾನ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪಾಸ್ವಾನ್, ಇದು ಚಿರಾಗ್ ನೀಡುತ್ತಿರುವ ಭರವಸೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ನಾನು ಇದನ್ನು ಉಲ್ಲೇಖಿಸಿದ್ದೇನೆ. ನಮ್ಮ ಪಕ್ಷ ಎಲ್ಜೆಪಿ ಅಧಿಕಾರಕ್ಕೆ ಬಂದರೆ, '7 ನಿಶ್ಚಯ್' ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲಾಗುವುದು. ಇದರಲ್ಲಿ ಯಾವುದೇ ಅಧಿಕಾರಿ ಅಥವಾ ಮುಖ್ಯಮಂತ್ರಿ ಭ್ರಷ್ಟಚಾರದಲ್ಲಿ ತೊಡಗಿದ್ದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದರು.
2015ರ ಚುನಾವಣಾ ಪೂರ್ವವಾಗಿ ನಿತೀಶ್ ಕುಮಾರ್ ಸರ್ಕಾರ ಘೋಷಿಸಿದ 2.17 ಲಕ್ಷ ಕೋಟಿಯ 'ಸಾಥ್ ನಿಶ್ಚಯ್' ಯೋಜನೆ ಘೋಷಿಸಿದ್ದರು. ವಿದ್ಯುತ್, ಒಳಚರಂಡಿ ಸಂಪರ್, ಶೌಚಾಲಯ, ಕೊಳವೆ, ಕುಡಿಯುವ ನೀರು, ಉತ್ತಮ ರಸ್ತೆ ಈ ಯೋಜನೆಯ ಪ್ರಮುಖ ಅಂಶಗಳಾಗಿವೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 1.25 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದರು.
ಇನ್ನು ಕಳೆದ ಸೆಪ್ಟೆಂಬರ್ನಲ್ಲಿ ಈ ಯೋಜನೆಯ ಎರಡನೇ ಹಂತವನ್ನು ಘೋಷಿಸಿದ ಸಿಎಂ ಹೊಸ ಏಳು ಯೋಜನೆಗಳನ್ನು ಇದನ್ನು ಸೇರಿಸಿದ್ದರು. ಅವುಗಳೆಂದರೆ ಯುವಕರ ಕೌಶಲ್ಯವೃದ್ಧಿ, ಮಹಿಳಾ ಉದ್ಯಮಶೀಲತೆ ಉತ್ತೇಜನೆ, ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಮತ್ತು ಹೆಚ್ಚುವರಿ ಆರೋಗ್ಯ ಸೇವೆ.
ಇದೇ ವೇಳೆ ಬಿಹಾರದಲ್ಲಿ ನಿತೀಶ್ ಮುಕ್ತ ಸರ್ಕಾರಕ್ಕೆ ಚಿರಾಗ್ ಕರೆ ನೀಡಿದ್ದಾರೆ. ಅಲ್ಲದೇ ಎಲ್ಜೆಪಿ ಅಭ್ಯರ್ಥಿಗಳಿಲ್ಲದ ಕ್ಷೇತ್ರದಲ್ಲಿ ಮಾಜಿ ಮೈತ್ರಿ ಪಕ್ಷವಾದ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ನಾನು ಮೋದಿಯವರ ಹನುಮ; ನನ್ನ ಎದೆಬಗೆದರೆ ಕಾಣಸಿಗುವುದು ಪ್ರಧಾನಿ; ಚಿರಾಗ್ ಪಾಸ್ವಾನ್
ಪ್ರಧಾನಿ ನರೇಂದ್ರ ಮೋದಿ ನನ್ನ ಹೃದಯದಲ್ಲಿದ್ದಾರೆ. ಅವರ ತತ್ವ ಮತ್ತು ಅಭಿವೃದ್ಧಿ ಮಾದರಿ ಬಗ್ಗೆ ನನಗೆ ನಂಬಿಕೆ ಇದೆ. ಆದರೆ ಮೋದಿ ಅವರ ಫೋಟೋಗಳನ್ನ ಚುನಾವಣಾ ಪ್ರಚಾರದಲ್ಲ ಎಲ್ಜೆಪಿ ಬಳಸಿಕೊಳ್ಳುವುದಿಲ್ಲ. ಮೋದಿ ಅವರ ಫೋಟೋಗಳನ್ನ ತಮ್ಮ ಪೋಸ್ಟರ್ಗಳಲ್ಲಿ ಬಳಸಿಕೊಳ್ಳುವ ಆತುರತೆ ನಿತೀಶ್ ಕುಮಾರ್ ಅವರಿಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿರುವುದರಿಂದ ಪ್ರಧಾನಿ ಮೋದಿ ಅವರ ವರ್ಚಸ್ಸು ತನ್ನನ್ನ ಉಳಿಸಬಹುದೆಂಬ ಆಲೋಚನೆ ಅವರಲ್ಲಿರಬಹುದು” ಎಂದು ಚಿರಾಗ್ ಪಾಸ್ವಾನ್ ಕುಟುಕಿದ್ದಾರೆ
ಸೀಟು ಹಂಚಿಕೆಯಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಪಾಸ್ವಾನ್ ಎನ್ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದರು. ಆದರೆ, ನಾನು ಮೋದಿ ನಿಷ್ಠಾವಂತ. ನಾನು ಅವರ ಹನುಮ. ನನ್ನ ಹೃದಯದಲ್ಲಿರುವುದು ಪ್ರಧಾನಿ ಎನ್ನುವ ಮೂಲಕ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.
243 ಕ್ಷೇತ್ರಗಳಲ್ಲಿ ಜೆಡಿಯು 122 ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಬಿಜೆಪಿ 121 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಅಕ್ಟೋಬರ್ 28ರಿಂದ ಮೂರು ಹಂತದ ಚುನಾವಣೆ ರಾಜ್ಯದಲ್ಲಿ ನಡೆಯಲಿದೆ. ನ.10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.ಇನ್ನು ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿ ನಿತೀಶ್ ಪರ ಮತ ಯಾಚಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ 12 ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ, ನಿತೀಶ್ ಕುಮಾರ್ ಜೊತೆ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ